Advertisement

ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ

05:38 PM Nov 10, 2021 | Team Udayavani |

ಸುರಪುರ: ಮತದಾರರ ಪಟ್ಟಿಗೆ 18 ವರ್ಷ ಮೇಲ್ಪಟ್ಟ ನೂತನ ಮತದಾರರನ್ನು ಮತ್ತು ಹೆಸರು ಬಿಟ್ಟು ಹೋಗಿದ್ದರೆ, ಡಿಲಿಟ್‌ ಆಗಿದ್ದರೆ, ಸಾಕ್ಷಿ ಪಡೆದು ಮತದಾರ ಪಟ್ಟಿಯಲ್ಲಿ ಸೇರಿಸಿ ಮತದಾನ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸುವಂತೆ ಮಾಡುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ ಎಂದು ತಹಶೀಲ್ದಾರ್‌ ಮತ್ತು ಚುನಾವಣಾಧಿಕಾರಿ ಸುಬ್ಬಣ್ಣ ಜಮಖಂಡಿ ಹೇಳಿದರು.

Advertisement

ನಗರದ ತಹಸೀಲ್‌ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಬೂತ್‌ ಮಟ್ಟದ ಅಧಿಕಾರಿಗಳ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಆ.9ರಿಂದ ಜನವರಿ 22ರ ವರೆಗೆ ಮತದಾರ ಪಟ್ಟಿಯ ಪರಿಷ್ಕರಣೆ ಹಾಗೂ ನ.26ರಿಂದ 28ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮರಣ ಹೊಂದಿದವರು, ಸ್ಥಳಾಂತರ ಮಾಡಿದವರನ್ನು ಸಾಕ್ಷಿದಾರರನ್ನು ಸಂಪರ್ಕಿಸಿ ಮತದಾರ ಪಟ್ಟಿಯಿಂದ ತೆಗೆದು ಹಾಕಬೇಕು. ದ್ವಿತೀಯ ಪಿಯು ಮುಗಿಸಿದ, ಫೇಲಾದ, ಬೇರೆ ಕೋರ್ಸ್‌ ಗಳನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡುತ್ತಿರುವವರ ಮಾಹಿತಿಯನ್ನು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಂದ ಪಡೆದು ಮತದಾರರ ಪಟ್ಟಿಗೆ ಸೇರ್ಪಡೆ ಗೊಳಿಸಬೇಕು. ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂದು ಸೂಚಿಸಿದರು.

ತಾಲೂಕಿನಲ್ಲಿ ಶತಾಯುಷಿಗಳು, 82ರಿಂದ 99 ವಯೋಮಾನದ 846 ಜನರಿದ್ದು, ವಯಸ್ಸಿನ ದಾಖಲಾತಿಯನ್ನು ಪುನರ್‌ ಪರಿಶೀಲಿಸಬೇಕು. ದಾಖಲಾತಿಯಲ್ಲಿ ತಪ್ಪಾಗಿದ್ದರೆ ಸರಿಪಡಿಸಿಕೊಡಬೇಕು. ಅವರು ಜೀವಂತವಾಗಿದ್ದಾರೆಯೇ ಇಲ್ಲವೇ ಎಂಬುದುನ್ನು ಖಾತರಿ ಪಡಿಸಿಕೊಳ್ಳಬೇಕು. ವಯಸ್ಸಿನ ಖಚಿತ ಮಾಹಿತಿಯನ್ನು ಸ್ಥಳದಲ್ಲೇ ಪರಿಶೀಲಿಸಿ ನಿರ್ಧರಿಸಿ ಖಚಿತವಾಗಿಸಿಕೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ರೆಡ್ಡಿ, ತರಬೇತುದಾರ ಹಣಮಂತ ಪೂಜಾರಿ, ಚುನಾವಣೆ ಶಿರಸ್ತೇದಾರ ಸುನೀಲ್‌ ವಿ.ಪುಲ್ಸೆ, ವಿಷಯ ನಿರ್ವಾಹಕ ಕಾರ್ತಿಕ್‌, ಇಬ್ರಾಹಿಂ, ಗ್ರಾಮ ಲೆಕ್ಕಿಗರು, ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next