Advertisement

ಗೌರವ ಡಾಕ್ಟರೆಟ್‌ಗಳಿಗೆ ಏಕರೂಪತೆ ತರಲು ಪರಿಶೀಲನೆ: ಸಚಿವ ಸುಧಾಕರ್‌

08:56 PM Feb 19, 2024 | Team Udayavani |

ಬೆಂಗಳೂರು: ರಾಜ್ಯದ ಸರಕಾರಿ ಹಾಗೂ ಖಾಸಗಿ ವಿವಿಗಳಲ್ಲಿ ನೀಡಲಾಗುವ ಗೌರವ ಡಾಕ್ಟರೆಟ್‌ಗಳಿಗೆ ಏಕರೂಪತೆ ತರುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪರಿಷತ್‌ ಮೂಲಕ ನಿಯಮಗಳನ್ನು ತರುವ ನಿಟ್ಟಿನಲ್ಲಿ ಪರಿಶೀಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅದೇ ರೀತಿ ವಿವಿಗಳಲ್ಲಿ ನೀಡಲಾಗುವ ಚಿನ್ನದ ಪದಕಗಳು, ಅಂಕಗಳು, ಗ್ರೇಡ್‌ಗಳಲ್ಲಿಯೂ ಏಕರೂಪತೆ ತರುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪರಿಷತ್‌ನಿಂದ ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು ಎಂದರು.

ಇದಕ್ಕೂ ಮೊದಲು ಪ್ರಶ್ನೆ ಕೇಳಿದ ಮಂಜುನಾಥ ಭಂಡಾರಿ, ರಾಜ್ಯದಲ್ಲಿ 41 ಸರಕಾರಿ, 27 ಖಾಸಗಿ ಹಾಗೂ 11 ಡೀಮ್ಡ್ ಸಹಿತ ಒಟ್ಟು 90 ವಿವಿಗಳಿವೆ. ಅಂಕ ಕೊಡುವಾಗ ಒಂದೊಂದು ವಿವಿ ಒಂದೊಂದು ನಿಯಮವನ್ನು ಪಾಲಿಸುತ್ತದೆ. ರ್‍ಯಾಂಕ್‌, ಚಿನ್ನ-ಬೆಳ್ಳಿ ಪದಕಗಳು ಕೊಡುವುದಕ್ಕೆ ಇರುವ ಮಾನದಂಡಗಳೇನು? ವಿದ್ಯಾರ್ಥಿಗಳು ಕಡಿಮೆ ಇರುವ ವಿಭಾಗಗಳಲ್ಲಿ ಚಿನ್ನದ ಪದಕ ನೀಡುವುದು ಸುಲಭ, ದೊಡ್ಡ ಸಂಖ್ಯೆ ಇರುವ ವಿಭಾಗಗಳಲ್ಲಿ ಕಷ್ಟವಾಗುತ್ತದೆ. ನಕಲಿ ಡಾಕ್ಟರೆಟ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ರಾಜ್ಯದ ವಿವಿಗಳಲ್ಲಿ ಪದವಿ ನೋಂದಣಿ ಮಾಡಿಸಿಕೊಳ್ಳುವ ಪದ್ಧತಿ ಇದೆಯೇ ಎಂದು ಕೇಳಿದರು.

ನೇಮಕಕ್ಕೆ ಕ್ರಮ
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಖಾಲಿ ಇದ್ದ ಒಟ್ಟು 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಲಯದ ತಡೆ ಇರುವ ಕಾರಣಕ್ಕೆ ಪ್ರತಿಕ್ರಿಯೆ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ತಡೆಯಾಜ್ಞೆ ತೆರವುಗೊಳಿಸುವ ಸಂಬಂಧ ಅಡ್ವೊಕೇಟ್‌ ಜನರಲ್‌ ಜತೆಗೆ ಚರ್ಚಿಸಲಾಗಿದೆ. ಆದಷ್ಟು ಬೇಗ ನೇಮಕಾತಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ಸುಧಾಕರ್‌ ಅವರು ಬಿಜೆಪಿಯ ಚಿದಾನಂದ ಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next