Advertisement

5 ವರ್ಷಗಳ ರೌಡಿ ಚಟುವಟಿಕೆ ಮರು ಪರಿಶೀಲನೆ: ಡಿಜಿಪಿ 

11:15 AM Jul 15, 2017 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಮತ್ತು ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ  ಕಳೆದ 5 ವರ್ಷಗಳಲ್ಲಿ ನಡೆದ ಗಂಭೀರ ಸ್ವರೂಪದ ಕ್ರಿಮಿನಲ್‌ ಪ್ರಕರಣಗಳನ್ನು ಮರು ಪರಿಶೀಲಿಸಲು ಹಾಗೂ ಈ ಚಟುವಟಿಕೆಗಳಲ್ಲಿ ಈಗಲೂ ರೌಡಿಸಂ/ ಕ್ರಿಮಿನಲ್‌ ಕೃತ್ಯಗಳಲ್ಲಿ ಸಕ್ರಿಯರಾಗಿರುವವರ ಮೇಲೆ ಅಗತ್ಯ ಬಿದ್ದರೆ ಗೂಂಡಾ ಕಾಯ್ದೆ ಹಾಕಲು ಅಥವಾ ಅವರನ್ನು ಗಡೀಪಾರು ಅಥವಾ ಕೊಕಾ ಕಾಯ್ದೆ ಜಾರಿ ಮಾಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಮಂಗಳೂರು ಪೊಲೀಸ್‌ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ರೂಪ್‌ ಕುಮಾರ್‌ ದತ್ತಾ ತಿಳಿಸಿದ್ದಾರೆ.

Advertisement

ಗುರುವಾರ ಮಂಗಳೂರಿಗೆ ಆಗಮಿಸಿದ್ದ ಅವರು ಶುಕ್ರವಾರ ಬಂಟ್ವಾಳ ತಾಲೂಕಿನ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದರು. ಕಳೆದ 5 ವರ್ಷಗಳಲ್ಲಿ  ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಭಾಗಿಯಾದವರಲ್ಲಿ ಯಾರಾದರೂ  ಪ್ರಸ್ತುತ ಜಿಲ್ಲೆಯಲ್ಲಿ  ನಡೆಯುತ್ತಿರುವ ಅಹಿತಕರ ಘಟನೆಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆ ಮಾಡುವ ಹಿನ್ನೆಲೆಯಲ್ಲಿ ಹಳೆಯ ಪ್ರಕರಣಗಳ ಮರು ಪರಿಶೀಲನೆಗೆ ಆದೇಶ ನೀಡಲಾಗಿದೆ ಎಂದರು. ಹಳೆಯ ಪ್ರಕರಣ ಯಾವುದಾದರೂ ಪತ್ತೆಯಾಗಲು ಬಾಕಿ ಇದ್ದಲ್ಲಿ  ಅದರ ಪತ್ತೆಗೆ ತನಿಖೆಯನ್ನು ತೀವ್ರ ಗೊಳಿಸುವಂತೆಯೂ ಸೂಚಿಸಲಾಗಿದೆ ಎಂದರು.

ಕಳೆದ ಎರಡು ತಿಂಗಳಲ್ಲಿ  ನಡೆದ ಸರಣಿ ಪ್ರಕರಣಗಳ ಪೈಕಿ ಶರತ್‌ ಮಡಿವಾಳ ಹತ್ಯೆ ಪ್ರಕರಣವನ್ನು ಹೊರತು ಪಡಿಸಿ ಉಳಿದ ಬಹುತೇಕ ಎಲ್ಲ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿದೆ. ಕರೋಪಾಡಿ ಜಲೀಲ್‌ ಕೊಲೆ ಪ್ರಕರಣದಲ್ಲಿ 11 ಮಂದಿ, ರತ್ನಾಕರ ಶೆಟ್ಟಿ  ಕೊಲೆ ಯತ್ನ ಪ್ರಕರಣದಲ್ಲಿ  13 ಮಂದಿ, ಅಶ್ರಫ್‌ ಕಲಾಯಿ ಕೊಲೆ ಪ್ರಕರಣದಲ್ಲಿ  9 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಜು. 7ರಂದು ಉಳ್ಳಾಲದಲ್ಲಿ ನಡೆದ ಹಲ್ಲೆ ಪ್ರಕರಣದ ಮೂವರ ಬಂಧನವಾಗಿದೆ. ಜು. 8ರಂದು ನಡೆದ ಪ್ರಕರಣದಲ್ಲಿ ಶಂಕಿತರ ವಿಚಾರಣೆ ನಡೆಯುತ್ತಿದೆ ಎಂದು ವಿವರಿಸಿದರು.

ಶರತ್‌ ಹತ್ಯೆ ಆರೋಪಿಗಳ ಶೀಘ್ರ ಬಂಧನ
ಜು. 4ರಂದು ನಡೆದ ಶರತ್‌ ಮಡಿವಾಳ ಕೊಲೆ ಪ್ರಕರಣದ ತನಿಖೆ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆ. ಕೆಲವು ಖಚಿತ ಸುಳಿವುಗಳು ಲಭ್ಯವಾಗಿವೆ. ಅತಿ ಶೀಘ್ರದಲ್ಲಿ ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಅಶ್ರಫ್‌ ಕೊಲೆ ಮತ್ತು ಇತರ ಕೆಲವು ಪ್ರಕರಣಗಳಲ್ಲಿ ಅತಿ ಶೀಘ್ರದಲ್ಲಿ ಆರೋಪಿಗಳ ಬಂಧನವಾಗಿದ್ದು, ಶರತ್‌ ಪ್ರಕರಣದಲ್ಲಿ ವಿಳಂಬವೇಕೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಆರೋಪಿಗಳ ಬಂಧನಕ್ಕೆ ಸಂಬಂಧಿಸಿ ಹೋಲಿಕೆ ಸರಿಯಲ್ಲ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಬೇಗನೆ ಪತ್ತೆಯಾಗುತ್ತಾರೆ. ಪತ್ತೆ ವಿಳಂಬವಾದರೆ ಅದನ್ನು “ಬ್ಯಾಡ್‌ ಲಕ್‌’ ಎಂದು ಹೇಳಬಹುದು ಎಂದರು.

ಮಾಧ್ಯಮದವರಿಗೆ ಮನವಿ: ನಾಯಕರ ಪ್ರಚೋದನಕಾರಿ ಹೇಳಿಕೆಗಳನ್ನು ಯಥಾವತ್ತಾಗಿ ಪ್ರಕಟಿಸ ಬಾರದು ಎಂದು ಮನವಿ ಮಾಡಿದರು. 

Advertisement

ಮರಣ ಪತ್ರ ವಿವಾದ: 20 ಗಂಟೆ ವಿಳಂಬವಾಗಿ ಶರತ್‌ ಸಾವನ್ನು ಘೋಷಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಜಿಪಿ ಅವರು ಶರತ್‌ ಸಾವನ್ನಪ್ಪಿದ ಬಗ್ಗೆ ವಿಳಂಬವಾಗಿ ಘೋಷಿಸುವಂತೆ ಪೊಲೀಸರಿಂದ ವೈದ್ಯರಿಗೆ ಯಾವುದೇ ಸೂಚನೆ ಹೋಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next