ಭಗವಂತನ ಸೃಷ್ಟಿ ತರ್ಕಕ್ಕೆ ನಿಲುಕದ್ದು. ಪ್ರಪಂಚದಲ್ಲಿ ಒಬ್ಬರಂತೆ ಬೇರೊಬ್ಬರಿಲ್ಲ ಅಂದ ಮೇಲೆ ಎಲ್ಲರೂ ಒಂದೇ ಆಗಲು ಹೇಗೆ ಸಾಧ್ಯ. ಭಾರತದಲ್ಲಿ 100ಕ್ಕೆ ಎರಡು ಮಕ್ಕಳಲ್ಲಿ “ಆಟಿಸಂ’ನ ಗುಣವಿರುತ್ತದೆ. “ಆಟಿಸಂ’ ಗುಣವಿರುವ ಮಕ್ಕಳು ಎಲ್ಲರಿಗಿಂತ ಭಿನ್ನವಾಗಿರುತ್ತಾರೆ. ಇಂತಹ ವಿಶಿಷ್ಟ ಮಕ್ಕಳ ಕಥೆಯನ್ನು ಹೇಳುವುದೇ “ವರ್ಣಪಟಲ’.
ಮಗಳು ಆಟಿಸಂ ಗುಣಗಳನ್ನು ಹೊಂದಿದ್ದಾಳೆ ಎಂದು ತಿಳಿದಾಗ ಪೋಷಕರ ಮನೋವೇದನೆ ಏನು? ಗಂಡನ ನಿರಾಕರಣೆಗೆ ಒಳಗಾದ ಹೆಣ್ಣು ತನ್ನ ಮಗಳನ್ನು ಸಮಾಜದ ಎದುರು ಹೇಗೆ ನಿಲ್ಲಿಸುತ್ತಾಳೆ ಎಂಬ ಎಳೆಯೇ “ವರ್ಣಪಟಲ’.
ನಿರ್ದೇಶಕ ಚೇತನ್ “ಆಟಿಸಂ’ ಹೊಂದಿರುವ ಒಂದು ಮಗು ಹಾಗೂ ಇಡೀ ಕುಟುಂಬದ ನಿಜ ಜೀವನದ ಅನುಭವಗಳನ್ನು ತೆರೆಮೇಲೆ ತರಲು ಯಶಸ್ವಿಯಾಗಿದ್ದಾರೆ. ತಾಯಿ ಪ್ರೀತಿ, ದುಗುಡ, ಸಮಾಜ ಅವಳನ್ನು ಕಾಣುವ ರೀತಿ ಎಲ್ಲಾ ಭಾವನೆಗಳನ್ನು ಮನ ಮುಟ್ಟುವಂತೆ ಚಿತ್ರಿಸಲಾಗಿದೆ. ಸಮಾಜದಲ್ಲಿ ಆಟಿಸಂ ಕುರಿತಾಗಿ ಇರುವ ತಪ್ಪು ಕಲ್ಪನೆಗಳನ್ನು ದೂರವಾಗಿಸಿ, ಎಲ್ಲರೂ ಸಮಾನವಾಗಿ ಬದುಕುವ ಅವಕಾಶವಿದೆ ಎಂದು ತಿಳಿ ಹೇಳುವ ಪ್ರಯತ್ನ “ವರ್ಣಪಟಲ’ ಚಿತ್ರ ತಂಡದ್ದಾಗಿದೆ.
ಇದನ್ನೂ ಓದಿ:ಚಿತ್ರ ವಿಮರ್ಶೆ: ದೃಷ್ಟಿಕೋನ ಬದಲಿಸುವ ‘ತ್ರಿಕೋನ’
ಚಿತ್ರದ ಜೀವಾಳ ನಿತ್ಯಾ ಪಾತ್ರಧಾರಿ ಜ್ಯೋತಿ ರೈ. ತಾಯಿ ಪಾತ್ರಕ್ಕೆ ಅರ್ಥ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲ ಕಲಾವಿದರಾದ ಅಂಶಿಕಾ ಶೆಟ್ಟಿ, ಧನಿಕಾ ಹೆಗ್ಡೆ ತಮ್ಮ ಪಾತ್ರಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಸುಹಾಸಿನಿ ವೈದ್ಯೆಯಾಗಿ ಕಾಣಿಸಿಕೊಂಡಿದ್ದು, ಎಂದಿನಂತೆ ಮನೋಜ್ಞ ಅಭಿನಯ ಅವರದ್ದಾಗಿದೆ.ಇನ್ನು ಛಾಯಾಗ್ರಾಹಕ ಗಣೇಶ್ ಹೆಗ್ಡೆ ಕ್ಯಾಮರ ಮೂಲಕ ಪ್ರಕೃತಿಯ ಸೌಂದರ್ಯವನ್ನು ಮನೋಹರವಾಗಿ ಕಟ್ಟಿಕೊಟ್ಟಿದ್ದಾರೆ.
ವಾಣಿ ಭಟ್ಟ