Advertisement

ಆದಾಯ- ವೃತ್ತಿ ತೆರಿಗೆ ರದ್ದು,ತೆರಿಗೆ ಸುಧಾರಣೆ ಅಗತ್ಯ: ಡಾ| ಸ್ವಾಮಿ 

03:45 AM Jan 29, 2017 | Team Udayavani |

ಉಡುಪಿ: ನೋಟು ಅಮಾನ್ಯಗೊಂಡ ಕ್ರಮ ಸರಿಯಾದರೂ ಅದಕ್ಕೆ ಬೇಕಾದ ಪೂರ್ವ ಸಿದ್ಧತೆಗಳು ಸರಿಯಾಗಿ ನಡೆಯಲಿಲ್ಲ. ಆದರೆ ಕಪ್ಪುಹಣ ತಡೆಯಲು ಇದೊಂದು ಸಣ್ಣ ಕ್ರಮವಷ್ಟೆ. ಪೂರ್ವ ಸಿದ್ಧತೆಗಳು ಸರಿಯಾಗಿ ನಡೆಯದ ಕಾರಣ ಸಾಮಾನ್ಯ ಜನರಿಗೆ ತೊಂದರೆಯಾಗಿದೆ, ಉದ್ದೇಶ ಈಡೇರಲಿಲ್ಲ. ಆದರೆ ಆದಾಯ ತೆರಿಗೆ, ವೃತ್ತಿಪರ ತೆರಿಗೆಯಂತಹ ತೆರಿಗೆಗಳನ್ನು ರದ್ದುಗೊಳಿಸಬೇಕಾದ ಇನ್ನಷ್ಟು ಆರ್ಥಿಕ ಸುಧಾರಣೆಗಳ ಅಗತ್ಯವಿದೆ ಎಂದು ಅರ್ಥ ಶಾಸ್ತ್ರಜ್ಞ, ರಾಜ್ಯಸಭಾ ಸದಸ್ಯ ಡಾ| ಸುಬ್ರಹ್ಮಣ್ಯನ್‌ ಸ್ವಾಮಿ ಅಭಿಪ್ರಾಯಪಟ್ಟರು. 

Advertisement

ಮಣಿಪಾಲ ಎಂಐಟಿ ಆವರಣದಲ್ಲಿ ಶನಿವಾರ ವಜ್ರಮಹೋತ್ಸವ ಸರಣಿ ಉಪನ್ಯಾಸದಲ್ಲಿ “ನೋಟು ನಿಷೇಧದಿಂದ ಆದ
ಪರಿಣಾಮಗಳು’ ಕುರಿತು ಮೊದಲ ಉಪನ್ಯಾಸವನ್ನು ನೀಡಿದ ಅವರು, ದೇಶದ ಆದಾಯ ತೆರಿಗೆ ಇಲಾಖೆಯಿಂದ ಬರುವ
ಮೊತ್ತ 3 ಲ.ಕೋ.ರೂ., ಹೊರ ದೇಶಗಳಲ್ಲಿರುವ ಹಣ 120 ಲ.ಕೋ.ರೂ. ತೆರಿಗೆ ರದ್ದತಿಯಿಂದಾಗಿ ಈ ಹಣ ದೇಶಕ್ಕೆ ಮರಳಿ ಬರಲಿದೆ. ಎಕ್ಸೆ„ಸ್‌ ಸುಂಕವನ್ನು 2,762 ಶೀರ್ಷಿಕೆ ಬದಲು 21ಕ್ಕೆ ಇಳಿಸಬೇಕು. ಈ 21ರಲ್ಲಿಯೇ ಬಹುತೇಕ ಆದಾಯ ಬರುವುದು ಎಂದರು.
 
ಆದಾಯ ತೆರಿಗೆಯನ್ನು ಅಧಿಕಾರಿಗಳು ಕಿರುಕುಳಕೊಟ್ಟು ವಸೂಲಿ ಮಾಡುತ್ತಿದ್ದಾರೆ. ಜನರಿಗೂ ಬೇಸರ ಬಂದಿದೆ ಎಂದರು.
2014ರಲ್ಲಿ ಕೇಂದ್ರ ಸರಕಾರ ಅಧಿಕಾರಕ್ಕೆ ಮೊದಲು ತನ್ನ ಅಧ್ಯಕ್ಷತೆಯ ಕಾರ್ಯತಂತ್ರ ಸಮಿತಿಯು ಕಪ್ಪು ಹಣವನ್ನು ತಡೆಗಟ್ಟಲು ನೋಟು ನಿಷೇಧವನ್ನು ಶಿಫಾರಸು ಮಾಡಿತ್ತು. ಆದರೆ ಯಾವುದೇ ಯೋಜನೆ ಯಶಸ್ವಿಯಾಗಲು ನೀತಿ, ಉದ್ದೇಶ, ಕಾರ್ಯಯಶಸ್ವಿಗೊಳ್ಳಲು ಬೇಕಾದ ಕಾರ್ಯತಂತ್ರ, ಅದನ್ನು ಆಗಗೊಳಿಸಲು ಬೇಕಾದ ವ್ಯವಸ್ಥೆಗಳು ಬೇಕು. ಆದರೆ ಪೂರ್ವಸಿದ್ಧತೆಗಳು ಸರಿಯಾಗಿ ನಡೆಯದೆ ಮಧ್ಯಮವರ್ಗ, ಬಡವರ್ಗಕ್ಕೆ ಹಣದ ಪೂರೈಕೆ ಸರಿಯಾಗಿ ನಡೆಯಲಿಲ್ಲ ಎಂದರು. 

ತಾನು ಶಿಫಾರಸು ಮಾಡುವಾಗ ನಿಷೇಧಕ್ಕೊಳಗಾಗುವ ಮೌಲ್ಯಕ್ಕಿಂತ ಆರು ಪಟ್ಟು 100 ರೂ. ನೋಟುಗಳನ್ನು ಚಲಾವಣೆಗೆ ತರಬೇಕೆಂದು ಹೇಳಿದ್ದೆ. ಪ್ರಧಾನಿಯವರು ಆರ್‌ಬಿಐಗೆ ಸೂಚಿಸಿದ್ದರು. ಆದರೆ ಇದನ್ನು ಆರ್‌ಬಿಐ ಮಾಡಲಿಲ್ಲ. ಹಿಂದಿನ ವಿತ್ತ ಸಚಿವರ ಕಾಲದಿಂದ ತಳವೂರಿದ ಅಧಿಕಾರಿಗಳ ಮರ್ಜಿ ಇರಬಹುದು ಎಂದರು.
 
ನೋಟು ನಿಷೇಧ- ಕಲ್ಲೆಸೆತ
ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) ಶೇ.40 ತೆರಿಗೆ ಪಾವತಿಸದ, ಲೆಕ್ಕಕ್ಕೆ ತೋರಿಸದ ಕಪ್ಪುಹಣವಿದೆ. ಹಿಂದಿನ ಸರಕಾರದ ನೀತಿಯಿಂದಾಗಿ ಪಾಕಿಸ್ಥಾನದಲ್ಲಿ ಭಾರತದ ನಕಲಿ ನೋಟುಗಳು ಸೃಷ್ಟಿಯಾಗುತ್ತಿದ್ದವು. ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ಹೊಡೆಯುವವರಿಗೆ ಸುಲಭದಲ್ಲಿ 500 ರೂ., 1000 ರೂ. ನೋಟು ದೊರಕುತ್ತಿತ್ತು. ಈಗ ನೋಟು ನಿಷೇಧದ ಬಳಿಕ ಒಂದೇ ಒಂದು ಕಲ್ಲೆಸೆತ ಕಂಡುಬಂದಿಲ್ಲ ಎಂದರು. 

ಅಕ್ರಮ ಸಕ್ರಮ
ನೋಟು ನಿಷೇಧದಿಂದಾಗಿ ಬ್ಯಾಂಕರ್‌ ಮತ್ತು ಮಧ್ಯವರ್ತಿಗಳಿಂದಾಗಿ ಶೇ.25 ಕಡಿತ ಮಾಡಿ ಹಳೆ ನೋಟುಗಳ ಬದಲು ಹೊಸ ನೋಟುಗಳನ್ನು ಹೊಂದಿದ್ದಾರೆ. ಅತ್ತ ಮಧ್ಯವರ್ತಿಗಳು ಶೇ.25ರಿಂದ, ಇತ್ತ ಕಪ್ಪುಹಣದವರು ಶೇ.75 ಹಣ ಹೊಂದಿ ಸಿರಿವಂತರಾದರು ಎಂದರು. 

ಹವಾನಿಯಂತ್ರಿತ ವ್ಯವಸ್ಥೆಗಳು, ಐಶಾರಾಮಿ ಬದುಕು, ಅಂತಸ್ತಿನ ಕಟ್ಟಡ ಗಳು ನಿರ್ಮಾಣಗೊಳ್ಳುತ್ತವೆ. ಶೇ.70 ಹೂಡಿಕೆಗಳು ವಿಲಾಸಿ ಬದುಕಿನ ಸಂಬಂಧಿತ ಕೈಗಾರಿಕೆಗಳಿಗೆ ಆಗುತ್ತಿದ್ದರೆ, ಶೇ.30 ಜನರು ಬಡತನದಲ್ಲಿದ್ದಾರೆ ಎಂದರು. ಎಂಐಟಿ ನಿರ್ದೇಶಕ ಡಾ|ಜಿ.ಕೆ.ಪ್ರಭು ಸ್ವಾಗತಿಸಿ, ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ|ಎಚ್‌.ಎಸ್‌.ಬಲ್ಲಾಳ್‌ ಗೌರವಿಸಿದರು. ವಿದ್ಯಾರ್ಥಿ ನಾಯಕರಾದ ತನ್ವೀರ್‌ ಸಿಂಗ್‌ ಸಪ್ರಾ ಕಾರ್ಯಕ್ರಮ ನಿರ್ವಹಿಸಿ, ಲವಂಗಿಯ ಪ್ರಶಾಂತ್‌ ಸಂವಾದ ನಡೆಸಿಕೊಟ್ಟರು.

Advertisement

ಇಂದು ಅಮೆರಿಕ, ಮುಂದೆ ಭಾರತ !
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ| ಸುಬ್ರಹ್ಮಣ್ಯನ್‌ ಸ್ವಾಮಿಯವರು, ಚೀನಾ ಯಾವತ್ತೂ ಭಾರತಕ್ಕೆ ಸ್ಪರ್ಧೆ ನೀಡುವ ಸ್ಥಿತಿಯಲ್ಲಿಲ್ಲ. ಜಪಾನ್‌ 1975ರಿಂದ 1996ರವರೆಗೆ ಮುಂದಿತ್ತು. ಆ ಬಳಿಕ ಜಪಾನ್‌ ಏಳಲಿಲ್ಲ. ಈಗ ಒಟ್ಟು ಜಿಡಿಪಿಯಲ್ಲಿ ಅಮೆರಿಕ, ಚೀನಾ, ಭಾರತ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದರೆ 2025ರಲ್ಲಿ ಅಮೆರಿಕ, ಭಾರತ, ಚೀನಾ, 2050ರಲ್ಲಿ ಭಾರತ, ಅಮೆರಿಕ, ಚೀನ ಕ್ರಮವಾಗಿ ಆ ಸ್ಥಾನಗಳನ್ನು ಪಡೆಯಲಿವೆ. ಏಕೆಂದರೆ ಭಾರತದ ಸರಾಸರಿ ವಯಸ್ಸು 26. ಶೇ.75 ಜನಸಂಖ್ಯೆ 35 ವರ್ಷದೊಳಗೆ ಇದೆ. ಉಳಿದ ದೇಶದವರು ಈ ಅವಕಾಶ ಹೊಂದಿಲ್ಲ ಎಂದರು. 

ದೊಡ್ಡವರನ್ನೇ ಬಗ್ಗುಬಡಿಯಬೇಕು
ನೇಶನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಹೊರಿಸುತ್ತಾರೆ. ನನ್ನ ಪ್ರಕಾರ ದೊಡ್ಡ ಕುಳಗಳನ್ನೇ ಬಗ್ಗುಬಡಿಯಬೇಕು. ಸಾಮಾನ್ಯ ಪೊಲೀಸನನ್ನೋ, ಬ್ಯಾಂಕರನನ್ನೋ ಹಿಡಿಯುವುದಲ್ಲ. ದೊಡ್ಡವರನ್ನು ಹಿಡಿದಾಗ ಕೆಳಗೆ ಇರುವವರು ತಪ್ಪೆಸಗುವುದನ್ನು ಸಹಜವಾಗಿ ಕಡಿಮೆ ಮಾಡುತ್ತಾರೆ. ಒಬ್ಬ ತಪ್ಪೆಸಗಿದವರನ್ನು ಹಿಡಿಯಬೇಕು, ಇನ್ನೊಬ್ಬ ಸುಧಾರಣೆ ಮಾಡಬೇಕು. 

ಸುಧಾರಕರೆಲ್ಲ ಸೋತರು !
1991ರಲ್ಲಿ ನರಸಿಂಹರಾವ್‌, ಅದಕ್ಕೂ ಹಿಂದೆ ಚಂದ್ರಶೇಖರ್‌ ಸರಕಾರದ ಅವಧಿಯಲ್ಲಿ ನಾನು ಸಚಿವನಾಗಿದ್ದೆ. ಆಗ ಕಪ್ಪು ಹಣ ನಿಯಂತ್ರಿಸಲು ಸರಳೀಕರಣ ವ್ಯವಸ್ಥೆ ಜಾರಿಗೊಳಿಸಲಾಯಿತು.

ಕೋಟಾ, ಲೈಸನ್ಸ್‌ರಾಜ್‌ ಪದ್ಧತಿಯನ್ನು ರದ್ದುಗೊಳಿಸಿದೆವು. ಈ ಪದ್ಧತಿ ಜಾರಿಗೊಳಿಸಿದವರು ಜವಾಹರಲಾಲ್‌ ನೆಹರೂ. ಇದು ಸೋವಿಯತ್‌ ಯೂನಿಯನ್‌ ಮಾದರಿ. ಇದಕ್ಕೆ ಗಾಂಧೀಜಿಯವರ ಒಪ್ಪಿಗೆ ಇಲ್ಲದಿದ್ದರೂ ನೆಹರೂ ಮಾಡಿದರು. ಕೋಟಾ, ಲೈಸನ್ಸ್‌ ಕೊಡಿಸುವಾಗ ಅವರಿಗೆ ಬೇಕಾದವರಿಗೆ ಕೊಡಿಸುವುದು, ಅದರಲ್ಲಿ ಅಧಿಕಾರದಲ್ಲಿರುವ ರಾಜಕೀಯದವರು ಲಾಭ ಪಡೆದುಕೊಳ್ಳುವುದು ನಡೆಯುತ್ತಿತ್ತು. 1950ರಿಂದ 90ರವರೆಗೆ ದೇಶದ ವಾರ್ಷಿಕ ಪ್ರಗತಿ ಶೇ.3.5 ಇತ್ತು.ನರಸಿಂಹ ರಾವ್‌ ಕ್ರಮದಿಂದ ಶೇ.9ಕ್ಕೆ ಏರಿತು. ಕಪ್ಪು ಹಣದ ಮಾರುಕಟ್ಟೆ ಅಷ್ಟು ಬಲವಾಗಿದೆ. ಸುಧಾರಣೆ ಮಾಡ ಹೊರಟವರೇ ಸೋಲುತ್ತಾರೆ. ನರಸಿಂಹ ರಾವ್‌, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸೋತರು. ಇದಕ್ಕೆ ಪರಿಹಾರವೆಂದರೆ ತತ್‌ಕ್ಷಣವೇ ಜನರಿಗೆ ಕಾಣುವಂತಹ ಸೌಲಭ್ಯ ದೊರಕಿಸಿಕೊಡಬೇಕು. 
– ಡಾ|ಸುಬ್ರಹ್ಮಣ್ಯನ್‌ ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next