Advertisement

ಕಂದಾಯ ಇಲಾಖೆಯ ದೋಷ ಅಕ್ರಮಕ್ಕೊಂದು ರಹದಾರಿ!

07:30 AM Aug 03, 2017 | Harsha Rao |

ಉಡುಪಿ: ಕರಾವಳಿ ಜಿಲ್ಲೆಗಳ ಭೂಮಿ ಹಿಂದಿನಿಂದಲೂ ಕೃಷಿ ಭೂಮಿ ಎಂದು ದಾಖಲೆಗಳು ಸಾರುತ್ತವೆ. ಬ್ರಿಟಿಷರ ಕಾಲದಲ್ಲಿ ಮದ್ರಾಸು ಸರಕಾರವಿರುವಾಗಲೇ ಇಲ್ಲಿನೆಲ್ಲಾ ಭೂಮಿಗೆ ಭೂಕಂದಾಯವನ್ನು ನಿಗದಿ ಮಾಡಲಾಗಿತ್ತು. ಹೀಗಾಗಿ ಮನೆ ಕಟ್ಟುವಾಗ ಅಥವಾ ಕೃಷಿಯೇತರ ಉದ್ದೇಶಕ್ಕೆ ಬಳಸುವಾಗ ಭೂಮಿಯನ್ನು ಕೃಷಿಯೇತರವಾಗಿ ಪರಿವರ್ತನೆ ಮಾಡಬೇಕು. ಇದು ಉಭಯ ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯಲ್ಲಿ ಬಹಳ ಬೇಡಿಕೆ ಇರುವ ಆಯಕಟ್ಟಿನ ಸ್ಥಳ.

Advertisement

ಹೀಗೆ ಕೃಷಿಯೇತರ ಪರಿವರ್ತನೆ ಮಾಡಿದ ಸ್ಥಳವನ್ನು ಮಾರಾಟ ಮಾಡಿದಾಗ ಪಹಣಿ ಪತ್ರಿಕೆಗಳಲ್ಲಿ ಮಾರಾಟ ಮಾಡಿದವನ ಹೆಸರೇ ಇರುತ್ತದೆ.

ಗ್ರಾಮಾಂತರ ಪ್ರದೇಶದಲ್ಲಿ ಗ್ರಾ.ಪಂ.ಗಳು 9/11 ದಾಖಲೆಯಲ್ಲಿ ಖರೀದಿದಾರನ ಹೆಸರು, ನಗರ ಪ್ರದೇಶದಲ್ಲಿ ನಗರ ಸಂಸ್ಥೆಗಳು ಖಾತಾ ನಕಲಿನಲ್ಲಿ ಹೆಸರು ದಾಖಲಿಸು ತ್ತದೆ. ಪಹಣಿ ಪತ್ರಿಕೆಗಳಲ್ಲಿ ಮಾರಾಟ ಮಾಡಿದವನ/ಳ ಹೆಸರೇ ಇರುವುದರಿಂದ ಇದು ಹಲವು ಸಂದರ್ಭಗಳಲ್ಲಿ ದುರ್ಬಳಕೆಯಾಗುವ ಸಾಧ್ಯತೆ ಇದೆ.

ನ್ಯಾಯಾಲಯಗಳಿಗೆ ಜಾಮೀನು ಅರ್ಜಿ ಸಲ್ಲಿಸುವಾಗ ಜಾಗ ವನ್ನು ಮಾರಿದ್ದರೂ ಪಹಣಿಯಲ್ಲಿ ಮಾರಾಟ ಮಾಡಿ ದವರ ಹೆಸರು ಇರುವುದರಿಂದ ಪಹಣಿ ಪತ್ರಿಕೆಗಳನ್ನು ಸಲ್ಲಿಸುವ ಸಾಧ್ಯತೆ ಇದೆ. ಸಾಲ ಪಡೆಯುವಾಗಲೂ ಬ್ಯಾಂಕ್‌ ಅಧಿಕಾರಿಗಳು ಪಹಣಿ ಪತ್ರಿಕೆಗಳನ್ನು ಕೇಳುತ್ತಾರೆ. ಮಾರಾಟ ಮಾಡಿದರೂ ಪಹಣಿ ಪತ್ರಿಕೆಗಳಲ್ಲಿರುವ ಹೆಸರು ಆಧರಿಸಿ ದಾಖಲೆಗಳನ್ನು ಬ್ಯಾಂಕ್‌ ಅಧಿಕಾರಿಗಳಿಗೆ ಸಲ್ಲಿಸುವ ಅಪಾಯವೂ ಇದೆ. ಈಗ ವಿವಿಧೆಡೆ ಅಕ್ರಮಗಳು ನಡೆಯುತ್ತಿರುವಾಗ ಇದೊಂದು ಅಕ್ರಮವೆಸಗಲು ಇರುವ ರಹದಾರಿಯಂತಿದೆ.

ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಭೂಮಿಗಳೂ ಒಂದೋ ಸರಕಾರಿ ಅಥವಾ ಖಾಸಗಿ ಪಟ್ಟಾ ಭೂಮಿ ಎಂದು ಕಾನೂನು ಹೇಳುತ್ತದೆ. ಪಹಣಿ ಪತ್ರಿಕೆಯ 9ನೇ ಕಲಂನಲ್ಲಿ ಕಬ್ಬೆ / ಸ್ವಾಧೀನದಾರರ ಹೆಸರು ಇರುವಲ್ಲಿ “ಎ ಕರಾಬ್‌’ ಎಂದು ಮಾಡಿಸುವ ವ್ಯವಸ್ಥೆಯಾದಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆ.

Advertisement

ಪಹಣಿ ಪತ್ರಿಕೆಗಳಲ್ಲಿರುವ ಹೆಸರೇ ಮಾಲಕತ್ವಕ್ಕೆ ಅಂತಿಮ ದಾಖಲೆ ಅಲ್ಲ ಎಂದು ಕಾನೂನು ಹೇಳಿದರೂ ಪಹಣಿ ಇನ್ನೂ ವ್ಯವಹಾರದಲ್ಲಿ ಜೀವಂತ ಇದೆ. ಸಬ್‌ರಿಜಿಸ್ಟ್ರಾರ್‌ ಕಚೇರಿಯ ಋಣಭಾರ ಪತ್ರದಲ್ಲಿ (ಎನ್‌ಕಂಬ್ರೆನ್ಸ್‌ ಸರ್ಟಿಫಿಕೇಟ್‌) ಎಲ್ಲ ವಿವರಗಳು ದಾಖಲಾಗುತ್ತವೆಯಾದರೂ ಎಲ್ಲರೂ ಇದನ್ನು ಕೊಂಡುಕೊಳ್ಳುವುದಿಲ್ಲ. ಈ ದಾಖಲೆ ಇಲ್ಲದೆ ಬ್ಯಾಂಕ್‌ ಅಧಿಕಾರಿಗಳು ಸಾಲ ಕೊಡುವುದೂ ಇದೆ.

ಸಾರ್ವಜನಿಕರು ಮ್ಯುಟೇಶನ್‌ ಅರ್ಜಿ ಸಲ್ಲಿಸಿದರೂ ಸಬ್‌ರಿಜಿಸ್ಟ್ರಾರ್‌ ಕಚೇರಿಯಿಂದ ಗ್ರಾ.ಪಂ. ಕಚೇರಿಗೆ ದಾಖಲೆಗಳು ಹೋಗುತ್ತವೆಯೇ ಹೊರತು ಕಂದಾಯ ಇಲಾಖೆಗೆ ಆನ್‌ಲೈನ್‌ನಲ್ಲಿ ದಾಖಲೆಗಳು ಹೋಗದ ಕಾರಣ ಕಂದಾಯ ಇಲಾಖಾಧಿಕಾರಿಗಳು ಮಾನ್ಯ ಮಾಡುವುದಿಲ್ಲ. ಸಹಾಯಕ ಕಮಿಷನರರಿಗೆ ಮೇಲ್ಮನವಿ ಸಲ್ಲಿಸಿದರೂ ಅವರೂ ತಿರಸ್ಕರಿಸುತ್ತಾರೆ.

ಇತ್ತೀಚಿನ ನಿಯಮಾವಳಿ ಪ್ರಕಾರ 15 ಸೆಂಟ್ಸ್‌ಗಿಂತ ಕಡಿಮೆ ಜಾಗವನ್ನು ಪರಿವರ್ತನೆ ಮಾಡಿದ್ದಲ್ಲಿ ಸರ್ವೇಯರ್‌ ನಕ್ಷೆ ಮಾಡಿ ಕೊಡುತ್ತಾರೆ. ಅದಕ್ಕಿಂತ ಹೆಚ್ಚಿನ ಜಾಗವಿದ್ದರೆ 11 ಇ ನಕ್ಷೆ ಮಾಡಿಸಿಕೊಡಬೇಕಾಗುತ್ತದೆ. ಆದರೆ ಆರ್‌ಟಿಸಿಯಲ್ಲಿ ಹೆಸರು ತಿದ್ದುಪಡಿ ಆಗುತ್ತಿಲ್ಲ.

ಕರಾವಳಿ ಹೊರತುಪಡಿಸಿದ ಘಟ್ಟದ ಮೇಲಿನ ಪ್ರದೇಶದಲ್ಲಿ ಈ ಸಮಸ್ಯೆ ಇಲ್ಲ. ಹೀಗಾಗಿ ಪಹಣಿ ಪತ್ರಿಕೆಯ 9ನೇ ಕಲಂನಲ್ಲಿ ಮಾರಾಟಗಾರನ/ಳ ಹೆಸರು ಇಲ್ಲದಂತೆ ಮಾಡುವ ಅಗತ್ಯವಿದೆ. ಇದಕ್ಕೆ ಬೇಕಾದ ತಿದ್ದುಪಡಿಗಳನ್ನು ಸರಕಾರ ಮಾಡಬೇಕಾಗಿದೆ.

- ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next