Advertisement

ಬೆಳಗಾವಿ ಅಧಿವೇಶನಕ್ಕೆ ರೇವಣ್ಣ “ಮುಹೂರ್ತ’ತಲೆಬಿಸಿ​​​​​​​

06:00 AM Nov 11, 2018 | Team Udayavani |

ಬೆಂಗಳೂರು: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ದಿನಾಂಕ ನಿಗದಿ ಮಾಡಲು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಒಳ್ಳೆಯ ಮಹೂರ್ತ ನೋಡುತ್ತಿದ್ದು, ಡಿ.5ರಂದು ಪ್ರಾರಂಭಿಸುವಂತೆ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ.

Advertisement

ಆದರೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಡಿಸೆಂಬರ್‌ 3ರರಿಂದಲೇ ಆರಂಭಿಸಿ ಕನಿಷ್ಠ 10 ದಿನಗಳ ಅಧಿವೇಶನ ನಡೆಸಲು ಚಿಂತಿಸಿದ್ದು,ರೇವಣ್ಣ ನೀಡಿದ್ದಾರೆ ಎನ್ನಲಾದ ಸಲಹೆಯಿಂದ ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ.

ಈ ಮೊದಲು ಡಿ.3 ರಿಂದ 10 ದಿನ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ ವಿಧಾನಸಭೆ ಸ್ಪೀಕರ್‌ ರಮೇಶ್‌ ಕುಮಾರ್‌ ಹಾಗೂ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಾತ್ಕಾಲಿಕ ವೇಳಾಪಟ್ಟಿ ಸಿದಟಛಿತೆ ಮಾಡಿಕೊಂಡಿದ್ದರು.

ಆದರೆ, ರೇವಣ್ಣ, ಡಿ.3 ರಂದು ಅಧಿವೇಶನ ಆರಂಭಿಸುವುದು ಬೇಡ. ಡಿ.5 ರಿಂದ ಆರಂಭಿಸಿ ಎಂದು ಹೇಳಿದ್ದಾರೆ. ಹೀಗಾಗಿ, ವಿಧಾನಮಂಡಲ ಅಧಿಕಾರಿಗಳಿಗೆ ದಿನಾಂಕ ನಿಗದಿ ಕುರಿತು ಗೊಂದಲ ಉಂಟಾಗಿದೆ ಎಂದು ಹೇಳಲಾಗಿದೆ.

ಡಿ.5 ರಿಂದ ಆರಂಭಿಸಿದರೆ 15ನೇ ತಾರೀಖೀನವರೆಗೂ ಕೇವಲ 8 ದಿನ ಮಾತ್ರ ಸರ್ಕಾರಿ ಕೆಲಸದ ದಿನಗಳು ಲಭ್ಯವಾಗಲಿದ್ದು, ಮೊದಲ ದಿನ ಸಂತಾಪ ಸೂಚಕ ಸಭೆಗೆ ಮೀಸಲಾದರೆ, ಶುಕ್ರವಾರ ಅರ್ಧ ದಿನ ಕಲಾಪ ನಡೆಯುವುದರಿಂದ ಕೇವಲ 5 ದಿನ ಮಾತ್ರ ಅಧಿಕೃತ ಕಲಾಪ ನಡೆಸಲು ಅವಕಾಶ ದೊರೆಯಲಿದೆ.

Advertisement

ಹೀಗಾಗಿ, ಕನಿಷ್ಠ 10 ದಿನ ಅಧಿವೇಶನ ನಡೆಸಲು ಡಿ.3 ರಿಂದ ಪ್ರಾರಂಭಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಆದರೆ, ಡಿ.5 ರಂದು ಒಳ್ಳೆಯ ದಿನ ಎಂದು ರೇವಣ್ಣ ಸಲಹೆ ನೀಡಿರುವುದರಿಂದ ಅದನ್ನು ನಿರಾಕರಿಸಲು ಆಗದಂತಾಗಿದೆ ಎನ್ನಲಾಗಿದೆ.

ಬೆಳಗಾವಿ ಅಧಿವೇಶನ ನಡೆಸಲು ಪೂರ್ವ ಸಿದ್ಧತೆಗೆ ಕನಿಷ್ಠ ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಶಾಸಕರ ಊಟ, ವಸತಿಗೆ ಕ್ರಮ ಕೈಗೊಳ್ಳಬೇಕು. ಬೆಳಗಾವಿ, ಹುಬ್ಬಳ್ಳಿ ಧಾರವಾಡ ಸೇರಿ ಸುತ್ತಲಿನ ನಗರಗಳಲ್ಲಿ ವಸತಿಗೆ ಹೋಟೆಲ್‌ಗಳನ್ನು ಮುಂಗಡ ಕಾಯ್ದಿರಿಸಬೇಕಿರುವುದರಿಂದ ದಿನಾಂಕ ನಿಗದಿ ವಿಳಂಬವಾದರೆ ವಸತಿಗೆ ಸಮಸ್ಯೆ ಉಂಟಾಗಲಿದೆ ಎಂದು ಅಧಿಕಾರಿಗಳು ತಲೆಬಿಸಿ ಮಾಡಿಕೊಂಡಿದ್ದಾರೆ.ಈ ನಡುವೆ ನ.19 ರಂದು ಸಭಾಧ್ಯಕ್ಷ ರಮೇಶ್‌ ಕುಮಾರ್‌ ಹಾಗೂ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಬೆಳಗಾವಿಯಲ್ಲಿ ಅಧಿವೇಶನದ ಸಿದ್ಧತೆಗೆ ಪೂರ್ವಭಾವಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಸರ್ಕಾರ ಯಾವುದೇ ದಿನಾಂಕ ನಿಗದಿ ಮಾಡಿದರೂ ಸ್ಥಳೀಯ ಆಡಳಿತ ಎಲ್ಲ ಸಿದ್ಧತೆ ಮಾಡಿಕೊಳ್ಳಲು ಅಂದಿನ ಸಭೆಯಲ್ಲಿ ಸೂಚಿಸುವ ಸಾಧ್ಯತೆ ಇದೆ.ಈ ಮಧ್ಯೆ, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಗೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವರಾಗುವಂತೆ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.

ಆದರೆ, ಸಭಾಪತಿಯಾಗಿ ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಉತ್ತರ ಕರ್ನಾಟಕ ಭಾಗದಲ್ಲಿ ಅಧಿವೇಶನ ನಡೆಸಲು ಅವಕಾಶ ದೊರೆತಿರುವುದರಿಂದ ಈ ಸಂದರ್ಭದಲ್ಲಿ ಸಭಾಪತಿ ಸ್ಥಾನ ಬಿಟ್ಟು ಮಂತ್ರಿಯಾಗುವುದು ಸಮಂಜಸ ಅಲ್ಲ. ಅಧಿವೇಶನ ಮುಗಿಯುವವರೆಗೂ ಸಭಾಪತಿಯಾಗಿ ಮುಂದುವರಿಯುವುದಾಗಿ ಹೇಳಿದ್ದು, ಬೆಳಗಾವಿ ಅಧಿವೇಶನ ಮುಗಿದ ನಂತರ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಪುಟ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next