Advertisement

ಆದಾಯ ಕಡಿಮೆಯಿದ್ರೂ ರಿಟರ್ನ್ಸ್ ಫೈಲ್‌ ಮಾಡ್ಬೇಕು!

06:00 AM Apr 09, 2018 | Team Udayavani |

ಮಾರ್ಚ್‌ 31 ಕಳೆಯಿತು ಅಂದಾಕ್ಷಣ ಐಟಿಆರ್‌ ಫೈಲ್‌ ಮಾಡುವ ಗಡಿಬಿಡಿ ಶುರುವಾಗುತ್ತದೆ. ನಮ್ಗೆ ಆದಾಯ ಕಡಿಮೆ ಇದೆ. ಹಾಗಾಗಿ ನಾವು ಐಟಿಆರ್‌ ಫೈಲ್‌ ಮಾಡುವ ಅಗತ್ಯವೇ ಇಲ್ಲ ಎಂದು ಹಲವರು ವಾದಿಸುವುದುಂಟು. ವಾಸ್ತವ ಏನೆಂದರೆ, ದುಡಿಮೆ ಮತ್ತು ಸಂಪಾದನೆಗೆ ತೊಡಗಿದ ಪ್ರತಿಯೊಬ್ಬರೂ (2.50 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯ ಇರುವವರೂ) ಐಟಿಆರ್‌ ಫೈಲ್‌ ಮಾಡಬೇಕು. ಇದರಿಂದ ಯಾರಿಗೂ ನಷ್ಟವಿಲ್ಲ. ಬದಲಿಗೆ ಸಾಕಷ್ಟು ಲಾಭಗಳಿವೆ...

Advertisement

ನಮ್ಮ ಆದಾಯ ಕಡಿಮೆ ಇದೆ. ನಾವು ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹಾಗಾಗಿ ಐಟಿಆರ್‌ ಸಲ್ಲಿಸಬೇಕಾಗಿಲ್ಲ ಎಂದು ಯೋಚಿಸುತ್ತಾರೆ. ಆದರೆ ಅದು ಸತ್ಯವಲ್ಲ. ವ್ಯಾಪಾರ, ಉದ್ಯೋಗ ಆರಂಭಿಸಿದ ಮತ್ತು ಗಳಿಕೆ ಆರಂಭವಾದ ಕ್ಷಣದಿಂದ ವ್ಯಕ್ತಿಯು ತೆರಿಗೆ ರಿಟರ್ನ್ಸ್ ಸಲ್ಲಿಸಲೇಬೇಕು. ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌) ಸಲ್ಲಿಕೆ ಮಾಡುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯ ಎಂದು ಪರಿಗಣಿಸಬೇಕು. ಪ್ರತಿವರ್ಷ ಅದನ್ನು ಚಾಚೂತಪ್ಪದೆ ಅನುಸರಿಸಬೇಕು.

ರಿಟರ್ನ್ಸ್ ಸಲ್ಲಿಕೆಯಿಂದ  ನಮ್ಮ ಆರ್ಥಿಕ ವ್ಯವಹಾರ ಪ್ರಾಮಾಣಿಕ ಹಾಗೂ ಪಾರದರ್ಶಕಗೊಳ್ಳುವುದಷ್ಟೇ ಅಲ್ಲ, ಅದು ವ್ಯಕ್ತಿಯೊಬ್ಬನ ಆದಾಯ ಹಾಗೂ ತೆರಿಗೆ ಪಾವತಿಸಿದ್ದರ ಕುರಿತು ದಾಖಲೆಯಾಗುತ್ತದೆ. 2.5 ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ಆದಾಯ ಉಳ್ಳವರು ಕಡ್ಡಾಯವಾಗಿ ತೆರಿಗೆ ಪಾವತಿಸಬೇಕು. ಹಾಗೆಯೇ 2.5 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ವರಮಾನ ಇದ್ದರೂ ರಿಟರ್ನ್ಸ್ ಸಲ್ಲಿಸಬೇಕು. ಇದರಿಂದ ನಷ್ಟವೇನಿಲ್ಲ, ಬದಲಿಗೆ ಲಾಭವೇ ಹೆಚ್ಚು.  

ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ಎಲ್ಲ ವರ್ಗದವರಿಗೂ ಲಾಭಗಳಿವೆ. ಅವುಗಳನ್ನು ಒಂದೊಂದಾಗಿ ನೋಡೋಣ ಬನ್ನಿ:

1. ಐಟಿಆರ್‌ ರಸೀದಿಯೇ ಪ್ರಮುಖ ದಾಖಲೆ:
 ಐಟಿಆರ್‌ ರಸೀದಿಯನ್ನು ಹೊಂದುವುದು ಮುಖ್ಯ. ಯಾಕೆಂದರೆ ಇದು ಫಾರಂ 16ಕ್ಕಿಂತ ಹೆಚ್ಚು ವಿಸ್ತೃತವಾಗಿರುತ್ತದೆ. ನಿಮ್ಮ ಆದಾಯ, ಇತರೆ ಮೂಲಗಳ ಆದಾಯ ಹಾಗೂ ತೆರಿಗೆಯ ವಿವರಗಳನ್ನು ಇದು ಹೊಂದಿರುತ್ತದೆ.

Advertisement

2. ವಿಳಾಸದ ಪುರಾವೆಯಾಗಿ ಬಳಸಿ: 
ಐಟಿಆರ್‌ ರಸೀದಿಯನ್ನು ನಿಮ್ಮ ನೋಂದಾಯಿತ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಇದನ್ನು ವಿಳಾಸದ ಪುರಾವೆಯಾಗಿಯೂ ಬಳಸಬಹುದು.

3. ಬ್ಯಾಂಕ್‌ ಸಾಲಕ್ಕೆ ನೆರವು: 
ಆಟೋ ಸಾಲ, ಗೃಹ ಸಾಲ ಇತ್ಯಾದಿ ಸಾಲಗಳಿಗೆ ಅರ್ಜಿ ಸಲ್ಲಿಸುವಾಗ, ನೀವು ತಪ್ಪದೇ ಆದಾಯ ತೆರಿಗೆ ಫೈಲ್‌ ಮಾಡುವವರಾಗಿದ್ದರೆ, ಬ್ಯಾಂಕ್‌ಗೆ ನಿಮ್ಮ ಆದಾಯದ ಮೂಲವನ್ನು ವಿಶ್ಲೇಷಿಸಲು ಅನುಕೂಲವಾಗುತ್ತದೆ. ಸಾಲ ಮಂಜೂರು ಪ್ರಕ್ರಿಯೆ ಸುಲಭವಾಗುತ್ತದೆ. ಬ್ಯಾಂಕ್‌ಗಳು ಸಾಮಾನ್ಯವಾಗಿ ಸಾಲದ ಅರ್ಜಿ ಪರಿಶೀಲಿಸುವಾಗ, ವ್ಯಕ್ತಿಯ ಆದಾಯದ ಸಾಮರ್ಥ್ಯ ಖಚಿತಪಡಿಸಿಕೊಳ್ಳಲು ಹಿಂದಿನ 2-3 ವರ್ಷಗಳ ತೆರಿಗೆ ರಿಟರ್ನ್ಸ್ ಪ್ರತಿಗಳನ್ನು ಕೇಳುತ್ತವೆ. ಹಾಗಾಗಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ರಿಟರ್ನ್ಸ್ ಫೈಲ್‌ ಮಾಡಿರಲೇಬೇಕು.

4. ನಷ್ಟವನ್ನು ಸರಿದೂಗಿಸಲು: 
ನೀವು ಐಟಿಆರ್‌ ಫೈಲ್‌ ಮಾಡದ ಹೊರತು, ಹಿಂದಿನ ಹಣಕಾಸು ವರ್ಷದಲ್ಲಿನ ನಿಮ್ಮ ವೆಚ್ಚಗಳು/ನಷ್ಟಗಳಿಗೆ ಪ್ರಸ್ತುತ ವರ್ಷದಲ್ಲಿ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದಾಯ ತೆರಿಗೆಯ ನಿಯಮಗಳ ಪ್ರಕಾರ, ಸೂಕ್ತ ಸಮಯದಲ್ಲಿ ತೆರಿಗೆ ರಿಟರ್ನ್ಸ್ ಫೈಲ್‌ ಮಾಡದಿದ್ದರೆ, ಹೊಂದಾಣಿಕೆ ಮಾಡಿಕೊಳ್ಳದ ನಷ್ಟಗಳನ್ನು ಮುಂದಿನ ವರ್ಷಗಳಿಗೆ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಭವಿಷ್ಯದ ಹೊಂದಾಣಿಕೆಗಾಗಿ ನಷ್ಟಗಳನ್ನು ಕ್ಯಾರಿ ಫಾರ್ವರ್ಡ್‌ ಮಾಡುವುದನ್ನು ಖಾತ್ರಿಪಡಿಸಲು ತೆರಿಗೆ ರಿಟರ್ನ್ಸ್ ಫೈಲ್‌ ಮಾಡಬೇಕಾಗುತ್ತದೆ.

5. ಹೆಚ್ಚುವರಿ ಬಡ್ಡಿ ತಪ್ಪಿಸಲು ನೆರವು: 
ಸೂಕ್ತ ಸಮಯದಲ್ಲಿ ಐಟಿಆರ್‌ ಸಲ್ಲಿಸದೆ, ವಿಳಂಬವಾಗಿ ರಿಟರ್ನ್ ಸಲ್ಲಿಸಿದರೆ, ನೀವು ಪಾವತಿಸಬೇಕಾಗಿರುವ ಉಳಿಕೆ ತೆರಿಗೆ ಮೊತ್ತದ ಮೇಲೆ ಪ್ರತಿ ತಿಂಗಳಿಗೆ ಶೇ.1ರ ದರದಲ್ಲಿ ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ಬ್ಯಾಂಕ್‌ಗಳು ನಿರ್ದಿಷ್ಟ ಮಿತಿಯನ್ನು ಮೀರಿದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯಿಂದ ತೆರಿಗೆ ಕಡಿತಗೊಳಿಸಲಿವೆ. ಬ್ಯಾಂಕ್‌ (ಏನಾದರೂ) ತೆರಿಗೆ ಕಡಿತಗೊಳಿಸಿದಿದ್ದರೆ, ಅದನ್ನು ಕ್ಲೈಮ್‌ ಮಾಡಲು, ಆದಾಯ ಎಷ್ಟೇ ಇದ್ದರೂ, ತೆರಿಗೆ ರಿಟರ್ನ್ ಫೈಲ್‌ ಮಾಡಿರಬೇಕಾಗುತ್ತದೆ.

6. ತೆರಿಗೆ ಇಲಾಖೆಯಿಂದ ದಂಡ ತಪ್ಪಿಸಲು: 
2017-18ನೇ ಹಣಕಾಸು ವರ್ಷದಿಂದ ಐಟಿಆರ್‌ ಸಲ್ಲಿಸದೇ ಇದ್ದರೆ ಗರಿಷ್ಠ 10,000 ರೂ. ದಂಡ ವಿಧಿಸಲಾಗುತ್ತದೆ. (5 ಲಕ್ಷ ರೂ. ತನಕ ಆದಾಯ ಇರುವವರಿಗೆ ಈ ದಂಡದ ಪ್ರಮಾಣ ಗರಿಷ್ಠ 1,000 ರೂ.) ಇದು ಮುಂಬರುವ ವರ್ಷಗಳಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಬಿಡುತ್ತದೆ. 

7. ಸುಲಭ ವೀಸಾ ಅರ್ಜಿ ಪ್ರಕ್ರಿಯೆಗಾಗಿ: 
ವೀಸಾ ಅಧಿಕಾರಿಗಳು ಹಿಂದಿನ ತೆರಿಗೆ ರಿಟರ್ನ್ಸ್ನ ಪ್ರತಿಗಳನ್ನು ಕೇಳಬಹುದು. ಹಾಗಾಗಿ ವೀಸಾಕ್ಕೆ ಅರ್ಜಿ ಸಲ್ಲಿಸಬೇಕೆಂದರೂ, ತೆರಿಗೆ ರಿಟರ್ನ್ಸ್ ಫೈಲ್‌ ಮಾಡಲೇಬೇಕಾಗುತ್ತದೆ. ಅಮೆರಿಕ, ಇಂಗ್ಲೆಂಡ್‌, ಕೆನಡಾ ಇತ್ಯಾದಿ ರಾಯಭಾರ ಕಚೇರಿಗಳು ವೀಸಾ ಅರ್ಜಿಗಳನ್ನು ಪರಿಶೀಲಿಸುವಾಗ ನಿಮ್ಮ ತೆರಿಗೆ ಶಿಸ್ತನ್ನು ಕಡ್ಡಾಯವಾಗಿ ಪರಿಗಣಿಸುತ್ತವೆ.

8. ಫ್ರೀಲ್ಯಾನ್ಸರ್‌ಗಳು, ಸ್ವತಂತ್ರ ಉದ್ಯೋಗಿಗಳಿಗೆ ಅನುಕೂಲ: 
ಫ್ರೀಲ್ಯಾನ್ಸರ್‌ಗಳು ಅಥವಾ ಸ್ವಯಂ ಉದ್ಯೋಗಿಗಳಿಗೆ ಫಾರಂ 16 ಇರುವುದಿಲ್ಲ. ತೆರಿಗೆ ಪಾವತಿದಾರ ಎಂದು ಹೇಳಿಕೊಳ್ಳಲು ಅವರಿಗೆ ಇರುವ ಏಕೈಕ ದಾಖಲೆ ಎಂದರೆ ಫೈಲ್‌ ಮಾಡಿದ ಐಟಿಆರ್‌ ಆಗಿರುತ್ತದೆ. ಐಟಿಆರ್‌ ಇಲ್ಲದೇ ಹೋದರೆ, ಬಂಡವಾಳ ಸಂಗ್ರಹಕ್ಕೆ ಮತ್ತು ಬ್ಯಾಂಕ್‌ಗಳಲ್ಲಿ ವಹಿವಾಟಿಗೆ ಸಮಸ್ಯೆ ಎದುರಿಸಬೇಕಾಗುತ್ತದೆ.

2017-18ನೇ ಹಣಕಾಸು ವರ್ಷದ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು 2018ರ ಜುಲೈ 31 ಕೊನೇ ದಿನಾಂಕ. ಇನ್ನೂ ಕಾಲಾವಕಾಶ ಇದೆ. ಐಟಿಆರ್‌ ಸಲ್ಲಿಕೆ ಮೂಲಕ ಪ್ರಾಮಾಣಿಕ ಆರ್ಥಿಕ ವ್ಯವಹಾರ ರೂಢಿಸಿಕೊಳ್ಳಿ. ಜತೆಗೆ ಐಟಿಆರ್‌ನ ಹೆಚ್ಚುವರಿ ಪ್ರಯೋಜನವನ್ನೂ ಪಡೆದುಕೊಳ್ಳಿ. 

Advertisement

Udayavani is now on Telegram. Click here to join our channel and stay updated with the latest news.

Next