ಅದೊಂದು ಕಾಲವಿತ್ತು, ಬೈತಲೆ ತೆಗೆದು ಉದ್ದಕ್ಕೆ ನೇಯ್ದ ಜಡೆ, ಕನಕಾಂಬರ, ಮಲ್ಲಿಗೆ, ಗುಲಾಬಿ ಹೂವುಗಳಿಂದ ಸಿಂಗರಿಸಿದ ನೀಳವಾದ ಕಪ್ಪನೆಯ ಮಿರಿ ಮಿರಿ ಹೊಳೆಯುವ ಕೇಶ, ಪ್ರಿಂಟೆಡ್ ಜರಿ ಸೀರೆ, ಗಾಜಿನ ಬಳೆಗಳು, ಬುಗ್ಗೆ, ಅಥವಾ ಉದ್ದ ತೊಳಿನ ಕುಪ್ಪಸ, ಎದ್ದು ಕಾಣುವ ಚಂದ್ರಾಕಾರದ ಬೊಟ್ಟು, ಹೊಳೆವ ಮೂಗುತ್ತಿ ಇವುಗಳೆಲ್ಲಾ ಸುಮಾರು 80 ಮತ್ತು 90ರ ದಶಕದ ನಡುವಿನ ಕನ್ನಡ ಮತ್ತು ಬೇರೆ ಬೇರೆ ಚಿತ್ರ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೀದಾ ಸಾದ ನಾಯಕಿ ಪಾತ್ರಧಾರಿಗಳ ಉಡುಗೆ ತೊಡುಗೆಗಳು. ಸಾಮಾನ್ಯವಾಗಿ ಸಿನಿಮಾ ನಾಟಕ, ಅಥವಾ ಇನ್ಯಾವುದೇ ರಂಗ ಚಟುವಟಿಕೆಗಳಲ್ಲಿ ನಾಯಕಿ, ನಾಯಕ ಅಥವಾ ಇನ್ನುಳಿದ ಪಾತ್ರಧಾರಿಗಳ ಉಡುಪು ಅವರು ಯಾವ ಬಗೆಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಎನ್ನವುದರ ಮೇಲೆ ನಿರ್ಧಾರವಾಗುತ್ತಿತ್ತು. ಮೇಲೆ ಹೇಳಿದಂತೆ ಒಂದೊಮ್ಮೆ ಸಿನಿಮಾದ ನಾಯಕಿ ಅಮಾಯಕಿ ಅಥವಾ ಸಂಸ್ಕಾರವಂತ ಕುಟುಂಬದಿಂದ ಬಂದ ಪಾತ್ರವನ್ನು ನಿಭಾಯಿಸುತ್ತಿದ್ದರೆ ಆಕೆಯ ಉಡುಪು ಇಷ್ಟೇ ಸರಳ ರೀತಿಯಲ್ಲಿರುವುದು ಆ ಕಾಲದ ಟ್ರೆಂಡ್. ಇದು ಬರಿ ಸಿನಿಮಾಗಳಿಗೆ ಮಾತ್ರ ಸೀಮಿತವಾದುದ್ದಲ್ಲ ಆ ಕಾಲದಲ್ಲಿನ ಸ್ತ್ರೀಯರು ಧರಿಸುತ್ತಿದ್ದ ಉಡುಪುಗಳು ಸಾಮಾನ್ಯವಾಗಿ ಇದೇ ಆಗಿರುತ್ತಿತ್ತು.
ಸುಮಾರು 2000 ಇಸವಿಯ ಇಚೇಗೆ ಬೇರೆ ಬೇರೆ ಪಾಶ್ಚಿಮಾತ್ಯ ಉಡುಗೆಗಳಿಂದ ಪ್ರೇರಿತಗೊಂಡು ಸಿನಿಮಾಗಳಲ್ಲೂ ಪಾತ್ರಧಾರಿಗಳ ಉಡುಗೆ ತೊಡುಗೆಗಳಲ್ಲಿ ಬದಲಾವಣೆಗಳು ಬರಲಾರಂಭವಾದವು. ಕ್ರಮೇಣ ತಮ್ಮ ನೆಚ್ಚಿನ ನಾಯಕ, ನಾಯಕಿಯರ ಪ್ಯಾಷನ್ ಗಳನ್ನು ಹಿಂಬಾಲಿಸುವ ಅಭಿಮಾನಿಗಳ ಉಡುಪುಗಳಲ್ಲೂ ಬದಲಾವಣೆಗಳು ಬಂದು ಆಗಿನ ರೆಟ್ರೋ ನೀರ ಮೇಲಿನ ಗುಳ್ಳೆಯಂತೆ ಕಣ್ಮರೆಯಾಯಿತು.
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಇದೀಗ ಮತ್ತೆ ರೆಟ್ರೋ ಸ್ಟೈಲ್ ಚಾಲ್ತಿಗೆ ಬಂದಿದೆ. ಇದೀಗ ನವ ಮಾಧ್ಯಮಗಳ ಉಗಮದ ನಂತರ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ವಿಷಯಗಳು ಟ್ರೆಂಡಿಂಗ್ ನಲ್ಲಿರುವುದು ಸಾಮಾನ್ಯ.
ಇದೀಗ ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿರುವುದು ರೆಟ್ರೋ ಉಡುಪು ಮತ್ತು ಹಾಡುಗಳು. ಸದ್ಯಕ್ಕೆ ರೀಲ್ಸ್ ಪೋಟೋ ಶೂಟ್‌ಗಳಲ್ಲಿ ಅದರಲ್ಲೂ ಹೆಚ್ಚಾಗಿ ಯುವತಿಯರು ರೆಟ್ರೋ ಕಾಲದ ಉಡುಪು ಧರಿಸಿ, ರೆಟ್ರೋ ಸಾಂಗ್‌ಗಳಿಗೆ ರೀಲ್ಸ್ ಮಾಡುತ್ತಿದ್ದಾರೆ. ಇದರ ಜತೆಗೆ ಪ್ರಿವೆಡಿಂಗ್ ಶೂಟ್, ಕಿರುತೆರೆಯ ರಿಯಾಲಿಟಿ ಶೋ, ಶಾಲಾ ಕಾಲೇಜುಗಳ ಕಾರ್ಯಕ್ರಮದಲ್ಲೂ ರೆಟ್ರೋ ಗಾಳಿ ಬೀಸುತ್ತಿದೆ.
ಎಸ್ ಜಾನಕಿ ಹಾಡಿರುವ ‘ನಗು ಎಂದಿದೆ ಮಂಜಿನ ಬಿಂದು’, ಎಸ್.ಪಿ ಬಾಲಸುಬ್ರಹ್ಮಣ್ಯ ಅವರು ಹಾಡಿರುವ ‘ನಗುವ ನಯನ ಮಧುರಾ ಮೌನಾ’ ಹಾಡುಗಳು ಅಂದಿಂಗೂ ಇಂದಿಗೂ, ಎಂದೆಂದಿಗೂ ಜನಮಾನಸದಲ್ಲಿ, ಸಂಗೀತ ಪ್ರಿಯರ ಮಸ್ತಕದಲ್ಲಿ ಅಚ್ಚೊತ್ತಿರುವ ಹಾಡುಗಳು. ಈ ಹಾಡುಗಳು ಇಗ ಮತ್ತೆ ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಗುನುಗುತ್ತಿವೆ. ದಶಕಗಳಿಂದ ಸಿನಿಮಾ ರಂಗದಿಂದ ಈ ರೀತಿಯ ಮೆಲೋಡಿಯಸ್ ಸಾಂಗ್ ಮತ್ತು ಉಡುಪುಗಳು ಮರೆಯಾಗಿದ್ದರು ಕೂಡ ಇದೀಗ ಅವು ಮತ್ತೆ ನವ ಮಾಧ್ಯಮ ಮೂಲಕ ಬೆಳಕಿಗೆ ಬಂದಿದೆ.
-ದಿವ್ಯಾ ದೇವಾಡಿಗ