ಕಲಬುರಗಿ: ಹಿಂದುಳಿದ ವರ್ಗಗಳ ಇಲಾಖೆಯ ಹೊರಗುತ್ತಿಗೆ ನೌಕರರನ್ನು ಫೆಬ್ರವರಿ ನಾಲ್ಕರಿಂದ ಕೆಲಸದಿಂದ ತೆಗೆದು ಹಾಕುವ ಸರ್ಕಾರದ ಆದೇಶ ಹಿಂಪಡೆಯಬೇಕು ಹಾಗೂ ಎಲ್ಲ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ನೇರ ನೇಮಕಾತಿಯಿಂದ ಐದು ಸಾವಿರ ಜನ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಂಡು ಬೆಂಗಳೂರಿನಲ್ಲಿ ಹೋರಾಟ ನಡೆಸಿದಾಗ ಯಾವುದೇ ನೌಕರರನ್ನು ಕೆಲಸದಿಂದ ತೆಗೆಯುವುದಿಲ್ಲ. ಆರು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ನೀವು ಮರಳಿ ಕೆಲಸಕ್ಕೆ ಹಾಜರಾಗಿ ಎಂದು ಸರ್ಕಾರ ಭರವಸೆ ನೀಡಿತ್ತು. ಅದರಂತೆ ಕಳೆದ ಆರು ತಿಂಗಳಿನಿಂದ ಕಾರ್ಯನಿರ್ವಹಿಸಲಾಗುತ್ತಿದ್ದು, ಈಗ ಮತ್ತೆ ಸೇವೆಯಿಂದ ಬಿಡುಗಡೆ ಮಾಡುವ ಕುರಿತು ಆದೇಶ ಹೊರಡಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ತಾಲೂಕಿನ ಏಳು ಹಿಂದುಳಿದ ವರ್ಗಗಳ ವಸತಿ ನಿಲಯಗಳ 40 ನೌಕರರಿಗೆ ಎಂಟು-ಹತ್ತು ತಿಂಗಳಿನಿಂದ ಬಾಕಿ ವೇತನ ಪಾವತಿಸಿಲ್ಲ. ಎಲ್ಲ ತಾಲೂಕುಗಳ ನಿಲಯದ ನೌಕರರಿಗೂ ಕಳೆದ ಐದು ತಿಂಗಳಿನಿಂದ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹಿಂದುಳಿದ ವರ್ಗಗಳ ಇಲಾಖೆ, ಜಿಲ್ಲಾಧಿಕಾರಿ ಮತ್ತು ತಾಲೂಕು ಅಧಿಕಾರಿಗಳ ನಿರ್ಲಕ್ಷ್ಯದಿಂದ ನೌಕರರು ವೇತನವಿಲ್ಲದೇ ಸಾಲದ ಸುಳಿಯಲ್ಲಿ ಸಿಕ್ಕು ಒದ್ದಾಡುವಂತಾಗಿದೆ ಎಂದು ದೂರಿದರು.
ಕೂಡಲೇ, ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಆದೇಶ ಹಿಂಪಡೆಯಬೇಕು. ಬಾಕಿ ವೇತನ ಪಾವತಿಸಬೇಕು ಹಾಗೂ ಬರುವ ದಿನಗಳಲ್ಲಿ ಪ್ರತಿ ತಿಂಗಳು ಐದನೇ ತಾರೀಖೀಗೆ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹೊರನೌಕರರ ಸಂಘದ ಅಧ್ಯಕ್ಷ ಭೀಮಶೆಟ್ಟಿಯಂಪಳ್ಳಿ, ತಾಲೂಕಾಧ್ಯಕ್ಷೆ ಫಾತೀಮಾ ಬೇಗಂ ಫತ್ತೇಪಾಹಡೆ, ರೇಣುಕಾ ಸಂಗೋಳಗಿ, ಶಿವಪುತ್ರಪ್ಪ ಮದನಕರ, ಮಹಾಂತೇಶ ಅವರಳ್ಳಿ, ಸುರೇಶ ದೊಡ್ಡಮನಿ, ಶಾಂತಪ್ಪ ಮುನ್ನಳ್ಳಿ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.