Advertisement

ರಾಯಚೂರು ಆರ್‌ಟಿಪಿಎಸ್‌ 1ನೇ ಘಟಕಕ್ಕೆ ವಯೋನಿವೃತ್ತಿ; ಬಂಕರ್‌ಗಳು ಮುರಿದು ಸ್ಥಗಿತಗೊಂಡ ಘಟಕ

11:36 PM Sep 25, 2022 | Team Udayavani |

ರಾಯಚೂರು: ರಾಯಚೂರು ಶಾಖೋತ್ಪನ್ನ ಕೇಂದ್ರದ ಒಂದನೇ ಘಟಕದಲ್ಲಿ ಬಂಕರ್‌ಗಳು ಮುರಿದು ಬಿದ್ದು ತಿಂಗಳು ಕಳೆದರೂ ದುರಸ್ತಿ ಕಾರ್ಯ ಇಂದಿಗೂ ಶುರುವಾಗಿಲ್ಲ. ಇದರಿಂದ ಮೂರೂವರೆ ದಶಕದ ಹಳೇ ಘಟಕಕ್ಕೆ ಜೀವಿತಾವ ಧಿಯೇ ಕಂಟಕವಾಗುತ್ತಿದೆಯೇ ಎಂಬ ಶಂಕೆ ಮೂಡಿದೆ.

Advertisement

ಕಳೆದ ಆ. 10ರಂದು ಆರ್‌ಟಿಪಿಎಸ್‌ನಲ್ಲಿ ಮೂರು ಬಂಕರ್‌ಗಳು ಕಳಚಿ ಬಿದ್ದಿದ್ದು, ಕೋಟ್ಯಂತರ ರೂ. ಹಾನಿಯಾಗಿತ್ತು. ಆದರೆ, ಮೂಲಗಳ ಮಾಹಿತಿ ಪ್ರಕಾರ ತಜ್ಞರು ಬಂದು ಪರಿಶೀಲನೆ ನಡೆಸಿದ್ದು, ಈವರೆಗೂ ವರದಿಯನ್ನೇ ನೀಡಿಲ್ಲ ಎನ್ನಲಾಗುತ್ತಿದೆ.

ಕಳೆದ ಕೆಲ ತಿಂಗಳಿಂದ ವಿದ್ಯುತ್‌ ಬೇಡಿಕೆ ಇಲ್ಲದ ಕಾರಣ ಕೇಂದ್ರದ ಎಂಟು ಘಟಕಗಳನ್ನು ಸ್ಥಗಿತಗೊಳಿಸಿದ್ದು, ಅನೇಕ ದಿನಗಳಿಂದ ಕಲ್ಲಿದ್ದಲು ಪೈಪ್‌ಗ್ಳಲ್ಲೇ ಸಂಗ್ರಹವಾಗಿತ್ತು. ಕಲ್ಲಿದ್ದಿಲನ್ನು ಮುಂದೆಯೂ ಸಾಗಿಸದೆ, ಹಿಂದಕ್ಕೂ ಪಡೆಯದಿರುವ ಕಾರಣ ಪೈಪ್‌ಗ್ಳ ಮೇಲೆ ಭಾರ ಹೆಚ್ಚಾಗಿ ಬಂಕರ್‌ಗಳು ಕಳಚಿ ಬಿದ್ದಿದ್ದವು. ಬಾಯ್ಲರ್‌ ಬಳಿ ಘಟನೆ ನಡೆದಿದ್ದು, ವಾಟರ್‌ ಪೈಪ್‌ಲೈನ್‌ ಕೂಡ ಒಡೆದು ಹೋಗಿತ್ತು. ಬಂಕರ್‌ಗಳ ಮರುಜೋಡಣೆಗೆ ಸಾಕಷ್ಟು ಕಾಲಾವಕಾಶ ಬೇಕಿದ್ದು, ಅಲ್ಲಿಯವರೆಗೂ ಒಂದನೇ ಘಟಕದಲ್ಲಿ ವಿದ್ಯುತ್‌ ಉತ್ಪಾದನೆ ನಿಲ್ಲಿಸುವುದಾಗಿ ಕೇಂದ್ರದ ಅಧಿ ಕಾರಿಗಳು ತಿಳಿಸಿದ್ದರು.

ತಜ್ಞರ ತಂಡಗಳು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಆದರೆ, ನಷ್ಟದ ಅಂದಾಜು ವರದಿಯಾಗಲಿ, ಮುಂದಿನ ಕ್ರಿಯಾ ಯೋಜನೆಯಾಗಲಿ ಇನ್ನೂ ಸಲ್ಲಿಕೆಯಾಗಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಸಭೆಗಳು ನಡೆಯುತ್ತಿದ್ದು, ಕಾಮಗಾರಿ ವಿಳಂಬದಿಂದ ಒಂದನೇ ಘಟಕದ ಪುನಾರಂಭ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುತ್ತ ಸಾಗಿದೆ.

ಆಧುನೀಕರಣದ ಪ್ರಸ್ತಾವ
ಆರ್‌ಟಿಪಿಎಸ್‌ನ ಒಂದು ಮತ್ತು ಎರಡನೇ ಘಟಕಗಳನ್ನು 1986ರಲ್ಲಿ ಆರಂಭಿಸಲಾಗಿತ್ತು. ಇದರ ಯಂತ್ರಗಳು ಕೂಡ ಸಾಕಷ್ಟು ಹಳೆಯದಾಗಿದ್ದು, ಬಹುತೇಕ ಯಂತ್ರಗಳ ಸಾಮರ್ಥ್ಯ ಕುಗ್ಗಿದೆ. ಕೆಲವೊಂದು ಸಾಮಗ್ರಿಗಳನ್ನು ಕಾಲಕಾಲಕ್ಕೆ ಬದಲಿಸಿಕೊಂಡು ಬರಲಾಗಿದೆ. ಆದರೆ, ಪಕ್ಕದ ಯರಮರಸ್‌ನಲ್ಲಿ ಈಚೆಗೆ ಆರಂಭಿ ಸಿದ ವೈಟಿಪಿಎಸ್‌ ಸೂಪರ್‌ ಕ್ರಿಟಿಕಲ್‌ ತಂತ್ರಜ್ಞಾನದೊಂದಿಗೆ ಸ್ಥಾಪಿತಗೊಂಡಿದೆ. ಆದರೆ, ಆರ್‌ಟಿಪಿಎಸ್‌ ಹಳೆಯ ತಂತ್ರಜ್ಞಾನದಡಿ ಶಾಖೋತ್ಪನ್ನ ಮಾಡುತ್ತಿದ್ದು, ಕಲ್ಲಿದ್ದಲಿನ ಬಳಕೆ ಜತೆಗೆ ಉತ್ಪಾದನೆ ವೆಚ್ಚ ಕೂಡ ಹೆಚ್ಚಾಗಿದೆ. ಈ ಕಾರಣಕ್ಕೆ ಹಳೆಯ ಘಟಕಗಳ ಆಧುನೀಕರಣಕ್ಕೆ ಒಳಪಡಿಸಬೇಕು ಎಂಬ ಚಿಂತನೆಗಳು ನಡೆದಿತ್ತಾದರೂ ಕೆಲವೊಂದು ಬದ ಲಾವಣೆಗಳನ್ನು ಮಾಡಿಕೊಂಡು ಕೆಲಸ ಮುಂದುವರಿಸಲಾಗುತ್ತಿದೆ.

Advertisement

ಸಾಮಗ್ರಿಗಳ ಲಭ್ಯತೆ ಸವಾಲು
ಒಂದನೇ ಘಟಕದಲ್ಲಿ ಹಾನಿಗೀಡಾದ ಕೆಲವೊಂದು ಸಾಮಗ್ರಿಗಳು ವಿದೇಶಗಳಿಂದಲೇ ತರಿಸಬೇಕು ಎನ್ನುತ್ತಿರುವ ತಜ್ಞರು ಅದರ ಅಂದಾಜು ವೆಚ್ಚವನ್ನೂ ತಾಳೆ ಹಾಕುತ್ತಿದ್ದಾರೆ. ಬಿಎಚ್‌ಇಎಲ್‌ ಸಂಸ್ಥೆ ಸೇರಿದಂತೆ ವಿವಿಧ ಕಂಪೆನಿಗಳ ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಯಾರು ಕೂಡ ನಿಖರವಾಗಿ ಅಂದಾಜು ನಷ್ಟದ ಮಾಹಿತಿ ನೀಡಿಲ್ಲ.

ಆರ್‌ಟಿಪಿಎಸ್‌ನ ಒಂದನೇ ಘಟಕದಲ್ಲಿ ಸಂಭವಿಸಿದ ಹಾನಿ ದುರಸ್ತಿ ಕಾಮಗಾರಿ ಇನ್ನೂ ಶುರುವಾಗಿಲ್ಲ. ತಜ್ಞರ ತಂಡಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿವೆ. ಅವರು ವರದಿ ಸಲ್ಲಿಸಿದ ಬಳಿಕ ಉನ್ನತ ಮಟ್ಟದ ಅಧಿ ಕಾರಿಗಳ ಜತೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವರು. ಸದ್ಯಕ್ಕೆ ವಿದ್ಯುತ್‌ ಬೇಡಿಕೆ ಹೆಚ್ಚಾಗಿರದ ಕಾರಣ ಉಳಿದ ಘಟಕಗಳಿಂದ ಅಗತ್ಯದಷ್ಟು ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ.
– ದಿವಾಕರ್‌, ಇ.ಡಿ., ಆರ್‌ಟಿಪಿಎಸ್‌

– ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next