Advertisement
ಅದು ಭಾರತ ಪಾಕಿಸ್ಥಾನದ ಗಡಿ ಪ್ರದೇಶ. ಪಾಕಿಸ್ಥಾನದ ಸೈನಿಕರು 1971ರಲ್ಲಿ ಭಾರತದ ಗಡಿಯೊಳಗೆ ಬಂದಿದ್ದರು. ಆಗ ಭಾರತೀಯ ಭೂಸೇನೆಯ ಯೋಧರು ಪಾಕಿಸ್ಥಾನದ ಸೈನಿಕರನ್ನು ಬಡಿದೋಡಿಸಲು ಆರಂಭಿಸಿದರು. ಪಾಕಿಸ್ಥಾನ ಕಡೆಯಿಂದ ಗುಂಡು ಹಾರಿ ಬಂದಾಗ ನಮ್ಮವರೂ ಗುಂಡಿನ ಸುರಿಮಳೆಗೈದರು. ಕೊನೆಗೂ ಭಾರತ ಜಯಿಸಿತು. ಇದರಲ್ಲಿ ಕೃಷ್ಣಯ್ಯ ಶೇರೆಗಾರ್ ಕೂಡ ಪಾಲ್ಗೊಂಡಿದ್ದರು. ಪ್ರಸ್ತುತ ಬರುವ ಪಿಂಚಣಿ ಕುಟುಂಬದ ಯಾವ ಖರ್ಚಿಗೂ ಸಾಲದು. ಇಬ್ಬರು ಪುತ್ರರಲ್ಲಿ ಓರ್ವ ಅಂಗವಿಕಲನಾಗಿದ್ದರೆ, ಮತ್ತೂಬ್ಬ ಪುತ್ರ ನಿರುದ್ಯೋಗಿ, ಇಬ್ಬರು ಪುತ್ರಿಯರಿದ್ದಾರೆ.
ಸಿಪಾಯಿಯಾಗಿ ಸೇನೆಗೆ ಸೇರಿದ ಇವರು 1983ರಲ್ಲಿ ನಾಯಕ್ ಆಗಿ ಪದೋನ್ನತಿ ಹೊಂದಿದರು. 1984 ರ ಜಾಫ್ನಾ ಯುದ್ಧದಲ್ಲಿ ಪಾಲ್ಗೊಂಡದ್ದಲ್ಲದೇ ಅಮೃತಸರದ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲೂ ಭಾಗವಹಿಸಿದ್ದರು. ಭಾರತ ಸರಕಾರದಿಂದ ಉತ್ತಮ ಸೇವೆಗಾಗಿ ಸೇವಾ ಪದಕ ಪಡೆದ ಹೆಮ್ಮೆಯ ಸೇನಾನಿ. 25 ನೇ ವರ್ಷದ ಸ್ವಾತಂತ್ರ್ಯ ದಿನದಂದು ವಿಶಿಷ್ಟ ಸೇವಾ ಪದಕ ಪಡೆದ ಇವರನ್ನು ಭಾರತ ಪಾಕ್ ಯುದ್ಧದ ವಿಜಯಕ್ಕಾಗಿ ಸಂಗ್ರಾಮ್ ಮೆಡಲ್ ನೀಡಿ ಪುರಸ್ಕರಿಸಲಾಗಿತ್ತು. ಆದರೂ ಇಂದು ಅವರ ಬದುಕಿನ ಕಥೆ ಕೇಳುವವರಿಲ್ಲ. ಯಾರಿಗೂ ಕೇಳಿಸದ ಕೂಗು
ಬದುಕಲು ಒಂದು ಸೂರೂ ಸಹ ಇಲ್ಲ. ಇರುವ ಸಣ್ಣ ಮನೆಯೂ ಕುಸಿದು ಬೀಳುವಂತಿದೆ. ಸೇನಾ ಸೇವೆಗಾಗಿ ಇವರು ಪಡೆದ ಯಾವ ಪದಕವೂ ಈ ಕಾಲದಲ್ಲಿ ನೆರವಿಗೆ ಬರುತ್ತಿಲ್ಲ. ಅನೇಕ ಸಂಘ- ಸಂಸ್ಥೆಗಳು ಇವರನ್ನು ಕರೆದು ಸಮ್ಮಾನಿಸಿವೆ. ಆದರೆ ಈ ಕಷ್ಟ ಕಾಲದಲ್ಲಿ ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ.
Related Articles
ದೇಶಕ್ಕಾಗಿ ಸೇನೆಯಲ್ಲಿ ಅನೇಕ ಮಹತ್ವದ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಯೋಧ ಕೃಷ್ಣಯ್ಯ ಅವರು ನಮ್ಮೂರಿನವರು ಎನ್ನುವುದೇ ನಮ್ಮ ಹೆಮ್ಮೆ. ಆದರೆ ಅವರ ಈಗಿನ ಅನಾರೋಗ್ಯದ ಬಗ್ಗೆ, ಕುಟುಂಬದ ಸಮಸ್ಯೆಯ ಕುರಿತು ಸರಕಾರ ಸರಿಯಾಗಿ ಸ್ಪಂದಿಸಿ ನೆರವಿಗೆ ಬರಬೇಕು.
– ನಾಗರಾಜ, ಸ್ಥಳೀಯರು
Advertisement
— ದಯಾನಂದ ಬಳ್ಕೂರು