Advertisement

ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ನಿವೃತ್ತ ಸೈನಿಕರ ಸೇವೆ

03:49 PM Sep 01, 2022 | Team Udayavani |

ಹುಬ್ಬಳ್ಳಿ: ಹು-ಧಾ ಬಿಆರ್‌ಟಿಎಸ್‌ ಯೋಜನೆ ಸಂರಕ್ಷಣೆ ಹಾಗೂ ನಿರ್ವಹಣೆಗೆ ಪ್ರತ್ಯೇಕ ಪೊಲೀಸ್‌ ಠಾಣೆ ಬೇಡಿಕೆಯಿತ್ತು. ಆದರೆ ಸಲ್ಲಿಸಿದ್ದ ಪ್ರತ್ಯೇಕ ಠಾಣೆಯ ಪ್ರಸ್ತಾವನೆ ಬಹುತೇಕ ಮುಗಿದ ಅಧ್ಯಾಯದಂತಾಗಿದೆ. ಈ ಕಾರ್ಯಕ್ಕೆ ನಿವೃತ್ತ ಸೈನಿಕ ಮೊರೆ ಹೋಗಿದ್ದು, ಬಿಆರ್‌ ಟಿಎಸ್‌ ಕಾರಿಡಾರ್‌, ನಿಲ್ದಾಣಗಳಲ್ಲಿ ನಿವೃತ್ತ ಸೈನಿಕರು ಮಾರ್ಷಲ್‌ಗ‌ಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇನ್ಮುಂದೆ ಬೇಕಾಬಿಟ್ಟಿ ವಾಹನಗಳ ಓಡಾಟ, ಟಿಕೆಟ್‌ ರಹಿತ ಪ್ರಯಾಣ ಸೇರಿದಂತೆ ಬಹುತೇಕ
ಅಕ್ರಮಗಳಿಗೆ ಕತ್ತರಿ ಬೀಳಲಿದೆ.

Advertisement

ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಮಹಾನಗರದ ಜನತೆಗೆ ಕಡಿಮೆ ಖರ್ಚಿನಲ್ಲಿ ಐಷಾರಾಮಿ ಸಾರಿಗೆ ಸೇವೆ ನೀಡುತ್ತಿದೆ. ಆದರೆ ನಿರ್ವಹಣೆ-ಸಂರಕ್ಷಣೆ ವಿಚಾರದಲ್ಲಿ ಸಾಕಷ್ಟು ನ್ಯೂನತೆಗಳಿದ್ದವು. ಇದಕ್ಕಾಗಿ ಆರಂಭದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಮೊರೆ ಹೋಗಿದ್ದರು. ಆದರೆ ಇದು ಪರಿಣಾಮಕಾಯಾಗದ ಕಾರಣ ಗೃಹರಕ್ಷಕ ಸಿಬ್ಬಂದಿ ಮೂಲಕ ಕಾರ್ಯಗತಗೊಳಿಸಲಾಯಿತು. ಇದು ಬಹಳ ದಿನ ನಡೆಯಲಿಲ್ಲ. ಕ್ರಮೇಣ ಎಲ್ಲಾ ಗೃಹ ರಕ್ಷಕ ಸಿಬ್ಬಂದಿ ಈ ಕಾರ್ಯದಿಂದ
ವಿಮುಖರಾದರು.

ಅನಿವಾರ್ಯವಾಗಿ ಅಲ್ಲಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದರು. ಇದೀಗ ಈ ಕಾರ್ಯದಲ್ಲಿ ಒಂದು ಶಿಸ್ತು ತರುವ ನಿಟ್ಟಿನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ಹುಧಾ ಬಿಆರ್‌ಟಿಎಸ್‌ ಕಂಪನಿ 38 ಮಾರ್ಷಲ್‌ಗ‌ಳನ್ನು ಕರ್ನಾಟಕ ನಿವೃತ್ತ ಸೈನಿಕರ ವೆಲ್‌ಫೇರ್‌ ಸೊಸೈಟಿ ಮೂಲಕ ಪಡೆಯಲಾಗಿದ್ದು, ನಿವೃತ್ತ ಸೈನಿಕರೊಂದಿಗೆ ಎನ್‌ಸಿಸಿಯಲ್ಲಿ ಸಿ ಸರ್ಟಿಫಿಕೇಟ್‌ ಪಡೆದವರು, ಆರ್‌ಡಿ ಪರೇಡ್‌ನ‌ಲ್ಲಿ ಭಾಗವಹಿಸಿದವರು ಕೂಡ ಮಾರ್ಷಲ್‌ ಗಳಾಗಿದ್ದಾರೆ.

ಪ್ರತ್ಯೇಕ ಠಾಣೆ ಮುಗಿದ ಕಥೆ: ತ್ವರಿತ ಸಾರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಕಾರಿಡಾರ್‌ನಲ್ಲಿ ಇತರೆ ವಾಹನಗಳ ಸಂಚಾರ ಅಡಚಣೆಯಾಗಿತ್ತು. ಇನ್ನೂ ಎಲ್ಲಾ ಜಂಕ್ಷನ್‌ಗಳಲ್ಲಿ ಸಂಚಾರ ಠಾಣೆ ಪೊಲೀಸರು ಬೇಕಾಗಿತ್ತು. ಇದಕ್ಕಾಗಿ ಪ್ರತ್ಯೇಕ ಸಂಚಾರ ಪೊಲೀಸ್‌ ಠಾಣೆಗೆ ಬಿಆರ್‌ಟಿಎಸ್‌ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸತತ ಎರಡು ವರ್ಷಗಳ ಕಾಲ ಪ್ರತ್ಯೇಕ ಠಾಣೆ ಬಗ್ಗೆ ಬೇಡಿಕೆ ಸಲ್ಲಿಸಿದರೂ ಸರಕಾರದ ಹಂತದಲ್ಲಿ ಇದು ಅಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.

ಪ್ರತ್ಯೇಕ ಠಾಣೆ ಕೈಗೂಡದ ಹಿನ್ನೆಲೆಯಲ್ಲಿ ಖಾಸಗಿ ಭದ್ರತಾ ಏಜೆನ್ಸಿ ನಂತರ ಗೃಹ ರಕ್ಷಕ ಸಿಬ್ಬಂದಿ ಸೇವೆ ಪಡೆಯಲು ಬಿಆರ್‌ ಟಿಎಸ್‌ ಮುಂದಾಗಿತ್ತು. ಆದರೆ ಇದು ಅಷ್ಟೊಂದು ಪರಿಣಾಮಕಾರಿಯಾಗಲಿ ನಡೆಯಲಿಲ್ಲ. ಇನ್ನೂ ಕೆಲ ಕರ್ತವ್ಯಗಳನ್ನು ಇವರಿಂದ ತೆಗೆದುಕೊಳ್ಳುವುದು ಕೂಡ ತಾಂತ್ರಿಕವಾಗಿ ಅಸಾಧ್ಯವಾಗಿತ್ತು. ಆದರೆ ಇದೀಗ ನಿವೃತ್ತ ಸೈನಿಕರು ಸಂರಕ್ಷಣೆ, ಕಾರ್ಯಾಚರಣೆ ಹಾಗೂ ಕಾರಿಡಾರ್‌ ನಿರ್ವಹಣೆ ಮಾಡಲಿದ್ದಾರೆ.

Advertisement

ಮಾರ್ಷಲ್‌ಗ‌ಳ ಹೊಣೆಗಾರಿಕೆ: ಬಿಆರ್‌ ಟಿಎಸ್‌ ಪ್ರತ್ಯೇಕ ಕಾರಿಡಾರ್‌ನಲ್ಲಿ ಅನಧಿಕೃತ ವಾಹನಗಳ ನಿರ್ಬಂಧಿಸುವುದು, ಜಂಕ್ಷನ್‌ಗಳಲ್ಲಿ ಸಂಚಾರ ನಿರ್ವಹಣೆ ಮತ್ತು ಪ್ರಯಾಣಿಕರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ, ಟಿಕೆಟ್‌ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕರನ್ನು ಪತ್ತೆ ಹಚ್ಚಿ ಟಿಕೆಟ್‌ ವಿತರಕರ ಮೂಲಕ ದಂಡ ವಿಧಿಸುವ ಕೆಲಸ ಮಾಡಲಿದ್ದಾರೆ. ಕಾನೂನು ಬಾಹಿರ ಸ್ಥಳಗಳಾಗಿ ಪರಿವರ್ತನೆಯಾಗುತ್ತಿರುವ ಮೇಲ್ಸೇತುವೆಗಳಲ್ಲಿ ಗಸ್ತು ನಡೆಸಲಿದ್ದಾರೆ.

ಪಾದಚಾರಿ ಮಾರ್ಗಗಳಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸುವುದಲ್ಲದೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ. ನಿಷೇಧಿತ ಸ್ಥಳಗಳಲ್ಲಿ ಧೂಮಪಾನ, ಗುಟ್ಕಾ, ಎಲೆ ಅಡಕೆ ತಂಬಾಕು ಜಗಿದು ಉಗುಳುವವರನ್ನು ಗುರುತಿಸಿ ದಂಡ ವಿಧಿಸಲಿದ್ದಾರೆ. ಇನ್ನು ಪ್ರಮುಖವಾಗಿ ಅಧಿಕೃತವಾಗಿ ಮಾರ್ಗ, ಪಾದಚಾರಿ ಮಾರ್ಗ ಅಗೆದು ಕೇಬಲ್‌ ಹಾಕುವುದು ಚರಂಡಿ ಮಾರ್ಗ ನಿರ್ಮಿಸುವಂತಹ ಕೆಲಸಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಲಿದ್ದಾರೆ. ಬಿಆರ್‌
ಟಿಎಸ್‌ ಮೂಲ ಸೌಲಭ್ಯಗಳಿಗೆ ಸೂತ್ರ ಭದ್ರತೆ ಒದಗಿಸಿ ವಿರೂಪಗೊಳಿಸದಂತೆ ತಡೆಯುವ ಕೆಲಸ ಇವರಿಗೆ ವಹಿಸಲಾಗಿದೆ. ಒಟ್ಟಾರೆ ಬಿಆರ್‌ಟಿಎಸ್‌ ಬಸ್‌ ಕಾರ್ಯಾಚರಣೆ ಜತೆಗೆ ಕಂಪನಿಗೆ ಸಂಬಂಧಿಸಿದ ಸ್ಥಿರ ಚರಾಸ್ತಿಗಳ ಸಂರಕ್ಷಣೆ ಕಾರ್ಯ ಇವರ ಹೆಗಲಿಗೆ ಹಾಕಲಾಗಿದೆ.

ಇನ್ನು ವಿದ್ಯಾರ್ಥಿಗಳ ಸ್ಮಾರ್ಟ್‌ ಕಾರ್ಡ್‌ ಬಳಸಿ ಅವರ ಪಾಲಕರು ಪ್ರಯಾಣಿಸುವುದು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಅನಧಿಕೃತ ಪ್ರಯಾಣಿಸುವವರ ಮೇಲೆ ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿರಂತರ ತಪಾಸಣೆ ಕಾರ್ಯ ನಡೆಸುತ್ತಿದ್ದರೂ ಈ ಮಾರ್ಷಲ್‌ಗ‌ಳು ಕೂಡ ಈ ಕಾರ್ಯ ಮಾಡಲಿದ್ದಾರೆ. ಈ ಪ್ರಕರಣಗಳಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿಯಿಂದ ದಂಡ ಹಾಕಿಸುವ ಕಾರ್ಯ ಮಾಡಲಿದ್ದಾರೆ.

ಒಂದು ತಿಂಗಳ ಜನರಲ್ಲಿ ಜಾಗೃತಿ:
ಕೋವಿಡ್‌ ಸಂದರ್ಭದಲ್ಲಿ ಪಾಲಿಕೆಯಿಂದ 3 ಮಾರ್ಷಲ್‌ಗ‌ಳ ನೇಮಕ ಬಿಟ್ಟರೆ ಉಕ ಭಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೇಮಕ ಮಾಡಿಕೊಂಡಿರುವುದು ಇದೇ ಮೊದಲು. ಈ 37 ಮಾರ್ಷಲ್‌ ಗಳಿಗೆ ಓರ್ವರು ಜೂನಿಯರ್‌ ಕಮಿಷನ್‌ ಅಧಿಕಾರಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮೂರು ಪಾಳೆಯದಲ್ಲಿ ಈ ಮಾರ್ಷಲ್‌ಗ‌ಳು ಕೆಲಸ ಮಾಡಲಿದ್ದಾರೆ. ಸೇವೆಗೆ ಪಡೆದ ಮಾರ್ಷಲ್‌ಗ‌ಳಿಗೆ ಬಿಆರ್‌ಟಿಎಸ್‌ ಕಾರ್ಯವೈಖರಿ ಹಾಗೂ ಚಟುವಟಿಕೆಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಸೆಪ್ಟಂಬರ್‌ 1 ರಿಂದ ಮಾರ್ಷಲ್‌ ಕಾರ್ಯ ಆರಂಭವಾಗಲಿದ್ದು, ಆರಂಭದಲ್ಲಿ ಒಂದು ತಿಂಗಳು ಜನರಲ್ಲಿ ಜಾಗೃತಿ ಮೂಡಿಸುವ
ಕೆಲಸ ಮಾಡಲಿದ್ದಾರೆ. ನಂತರ ದಂಡ ವಸೂಲಿ ಪ್ರಯೋಗ ಆರಂಭಿಸಲಿದ್ದಾರೆ.

ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಮಾರ್ಷಲ್‌ಗ‌ಳು ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಪ್ರಯಾಣಿಕ ಸ್ನೇಹಿಯಾಗಿ ಸಂಸ್ಥೆ ಆಸ್ತಿ ಸಂರಕ್ಷಿಸುವ ಕೆಲಸ ಮಾಡಲಿದ್ದಾರೆ. ಅನಧಿಕೃತ ವಾಹನಗಳ ಸಂಚಾರ, ಟಿಕೆಟ್‌ ರಹಿತ ಪ್ರಯಾಣ, ಸ್ವತ್ಛತೆ, ಪ್ರಯಾಣಿಕರಿಗೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಿದ್ದಾರೆ.
ಎಸ್‌.ಭರತ, ವ್ಯವಸ್ಥಾಪಕ ನಿರ್ದೇಶಕ, ಹು-ಧಾ ಬಿಆರ್‌ಟಿಎಸ್‌

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next