ಒಡಿಶಾ: ಪತ್ನಿಯನ್ನು ಕೊಂದು ಶವವನ್ನು 300 ತುಂಡುಗಳನ್ನಾಗಿ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭುವನೇಶ್ವರದ ಸ್ಥಳೀಯ ಕೋರ್ಟ್ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಸೋಮ್ ನಾಥ್ ಪಾರಿಡಾಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 24 ಸಾಕ್ಷಿಗಳನ್ನು ಹಾಜರುಪಡಿಸಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ನೀಡಿದ ಸಾಕ್ಷಿಯ ಆಧಾರದ ಮೇಲೆ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ ಎಂದು ವರದಿ ಹೇಳಿದೆ.
ಕ್ಷುಲ್ಲಕ ವಿಚಾರಕ್ಕಾಗಿ ನಿವೃತ್ತ ಯೋಧ (78) ಹಾಗೂ ಪತ್ನಿ ಉಶಾಶ್ರೀ ಸಾಮಾಲ್ (61ವರ್ಷ) ನಡುವೆ ಜಗಳ ನಡೆದ ಪರಿಣಾಮ, ಪತ್ನಿಗೆ ಹಿಗ್ಗಾಮುಗ್ಗಾ ಹೊಡೆದು ಕೊಂದು ಹಾಕಿದ್ದ. ನಂತರ ಆಕೆಯ ಶವವನ್ನು ಕತ್ತರಿಸಿ 300 ತುಂಡುಗಳನ್ನಾಗಿ ಮಾಡಿರುವುದಾಗಿ ವರದಿ ತಿಳಿಸಿದೆ.
ನಂತರ ಶವದ ತುಂಡುಗಳನ್ನು ಕೆಮಿಕಲ್ ಹಾಕಿ ಮಿಶ್ರಣ ಮಾಡಿ ಅದನ್ನು ಸ್ಟೀಲ್ ಮತ್ತು ಗಾಜಿನ ಟಿಫಿನ್ ಬಾಕ್ಸ್ ಗಳಲ್ಲಿ ಹಾಕಿಟ್ಟಿರುವುದಾಗಿ ವರದಿ ವಿವರಿಸಿದೆ. ಈ ಘಟನೆ 2013ರಲ್ಲಿ ನಡೆದಿತ್ತು.
ದಂಪತಿಯ ಮಗಳು ತಾಯಿಯನ್ನು ಸಂಪರ್ಕಿಸಲು ಪ್ರಯತ್ನಿಸಿ ಸಾಧ್ಯವಾಗದ ನಂತರ ಆಕೆ ಭುವನೇಶ್ವರದಲ್ಲಿದ್ದ ತನ್ನ ಮಲ ಚಿಕ್ಕಪ್ಪನಿಗೆ ವಿಷಯ ತಿಳಿಸಿದ್ದಳು. ಅವರು ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.
ಪೊಲೀಸರು ನಿವೃತ್ತ ಯೋಧನ ಮನೆ ಶೋಧ ನಡೆಸಿದಾಗ ಕತ್ತರಿಸಿದ ದೇಹದ ಭಾಗಗಳು ಪತ್ತೆಯಾಗಿದ್ದವು. ಬಳಿಕ ಪತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ, ಆರೋಪ ಪಟ್ಟಿಯನ್ನು ದಾಖಲಿಸಿದ್ದರು. ಅಂದಿನಿಂದ ಮಾಜಿ ಯೋಧ ಝಾರ್ಪಾಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವುದಾಗಿ ವರದಿ ತಿಳಿಸಿದೆ.
ವಿಚಾರಣೆ ವೇಳೆ ತನಗೆ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಬೇಕೆಂದು ಕೋರಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿತ್ತು. ಏತನ್ಮಧ್ಯೆ ಪಾರಿಡಾ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.