Advertisement

Mangaluru ಜಾಗತಿಕ ಬಿಕ್ಕಟ್ಟು ವೇಳೆ ಭಾರತದ ನಿಲುವು ಸಮರ್ಪಕ

11:28 PM Jan 20, 2024 | Team Udayavani |

ಮಂಗಳೂರು: ಭಾರತದ ಆರ್ಥಿಕತೆ ವಿಶ್ವದಲ್ಲಿ ಬಲಿಷ್ಠಗೊಳ್ಳುತ್ತಿರುವುದು ಒಂದೆಡೆಯಾದರೆ ವಿವಿಧ ಜಾಗತಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಭಾರತವು ಯಾರ ಪರ ನಿಲ್ಲದೆ ಸಾಂದರ್ಭಿಕವಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

Advertisement

ನಿವೃತ್ತ ರಾಯಭಾರಿ ಅಶೋಕ್‌ ಸಜ್ಜನ್ಹರ್‌ ಹಾಗೂ ರಕ್ಷಣಾ ಸಚಿವಾಲಯದ ಸಲಹೆಗಾರ ನಿವೃತ್ತ ಲೆ| ಜ| ವಿನೋದ್‌ ಖಂಡಾರೆ ಅವರ ಒಟ್ಟು ಅಭಿಪ್ರಾಯಗಳಿವು.

ಮಂಗಳೂರು ಲಿಟ್‌ಫೆಸ್ಟ್‌ 6ನೇ ಆವೃತ್ತಿಯಲ್ಲಿ ಶನಿವಾರ ಅವರು “ಬದಲಾಗುತ್ತಿರುವ ನೂತನ ಜಾಗತಿಕ ವ್ಯವಸ್ಥೆಯ ಆಖ್ಯಾನದಲ್ಲಿ ಭಾರತ ಯಾಕೆ ಮಹತ್ವ ಹೊಂದಿದೆ’ ಎಂಬ ವಿಚಾರವಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು.

ರಷ್ಯಾ-ಯುಕ್ರೇನ್‌ ಯುದ್ಧವಿರಲಿ, ಹಮಾಸ್‌-ಇಸ್ರೇಲ್‌ ಸಮರವಿರಲಿ ಭಾರತ ಸೂಕ್ತ ನಿಲುವು ಪ್ರದರ್ಶಿಸಿದೆ. ಹಿಂಸೆಗೆ ನಾವು ಬೆಂಬಲಿಸುವುದಿಲ್ಲ; ಹಾಗೆಂದು (ಕಡಿಮೆ ಬೆಲೆಯಲ್ಲಿ ತೈಲ ಖರೀದಿ ಮೂಲಕ) ರಷ್ಯಾವನ್ನು ಭಾರತ ಪೋಷಿಸಬಾರದು ಎಂಬ ಯುರೋಪಿಯನ್ನರ ಉಪದೇಶವನ್ನು ಸಹಿಸಲಾರೆವು, ಜಾಗತಿಕ ಸ್ಥಿತಿಗತಿ, ನಮ್ಮ ದೇಶದ ಹಿತವನ್ನು ಗಮನಿಸಿಕೊಂಡು ನಮ್ಮ ನಿಲುವು ವ್ಯಕ್ತಪಡಿಸುವ ಸ್ವಾತಂತ್ರ್ಯ ನಮಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ ಎಂದರು.

ಹಮಾಸ್‌-ಇಸ್ರೇಲ್‌ ವಿಚಾರದಲ್ಲೂ ನಾವು ಭಯೋತ್ಪಾದನೆಯಿಂದ ತೊಂದರೆಗೀಡಾದವರು, ಹಾಗಾಗಿ ಉಗ್ರ ಚಟುವಟಿಕೆಗಳಿಗೆ ಬೆಂಬಲವಿಲ್ಲ, ಇಸ್ರೇಲ್‌ನೊಳಗೆ ನುಸುಳಲು ಹಮಾಸ್‌ ಸುರಂಗ ತೋಡಿರುವುದನ್ನು ವಿರೋಧಿಸಲೇಬೇಕಾಗುತ್ತದೆ. ಹಾಗೆಂದು ಮುಗ್ಧಜೀವಗಳು ಸಾಯುವುದನ್ನು ಸಮರ್ಥಿಸಿಕೊಳ್ಳ ಲಾಗದು. ಬದಲಾಗುವ ಪರಿಸ್ಥಿತಿಗಳಿಗನುಗುಣವಾಗಿ ನಮ್ಮ ನಿಲುವನ್ನು ಹೊಂದಿರುವದು ಸರಿಯಾಗಿದೆ ಎಂದರು.

Advertisement

ನವ ಭಾರತದ
ಆರ್ಥಿಕತೆಯ ಪ್ರಭಾವ
ಭಾರತ ಜಾಗತಿಕವಾಗಿ ಅರ್ಥಿಕವಾಗಿ ಪ್ರಬಲಗೊಳ್ಳುತ್ತಿದ್ದು, 4 ಶತಕೋಟಿ ಡಾಲರ್‌ ಆರ್ಥಿಕತೆಯಾಗಿದೆ. ಈ ದಶಕದೊಳಗೆ 3ನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ, ವಿಶ್ವಬ್ಯಾಂಕ್‌, ಐಎಂಎಫ್‌ ಭಾರತದ ಸಾಧನೆಯನ್ನು ಶ್ಲಾಘಿಸಿವೆ, ಹಾಗಾಗಿ ಸಹಜವಾಗಿ ಈಗ ಭಾರತದ ಧ್ವನಿಯನ್ನು ಜಗತ್ತು ಆಲಿಸತೊಡಗಿದೆ ಎಂದು ಅಶೋಕ್‌ ಸಜ್ಜನ್ಹರ್‌ ವಿಶ್ಲೇಷಿಸಿದರು.ಪುದುಚೇರಿ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ| ನಂದಕಿಶೋರ್‌ ಕಲಾಪ ನಿರ್ವಹಿಸಿದರು.

ಮಾಲ್ಡೀವ್ಸ್‌ ಪಾಠ ಕಲಿಯಲಿದೆ
ಚೀನ ಏಷ್ಯಾ ಪ್ರದೇಶದಲ್ಲಿ ಹಾಗೂ ಅಂತಿಮವಾಗಿ ಜಗತ್ತಿನಲ್ಲೇ ಶಕ್ತಿಶಾಲಿಯಾಗಿ ಹೊರಹೊಮ್ಮುವ ಪ್ರಬಲ ಆಕಾಂಕ್ಷಿಯಾಗಿದೆ. ಅದು ಶ್ರೀಲಂಕಾ, ಬಾಂಗ್ಲಾದೇಶದಂತಹ ಸಣ್ಣಪುಟ್ಟ ರಾಷ್ಟ್ರಗಳಿಗೆ ನೆರವು ನೀಡುವ ನೆಪದಲ್ಲಿ ಅವರ ಸಾರ್ವಭೌಮತ್ವವನ್ನು ಕಬಳಿಸುತ್ತದೆ, ಇದು ಶೀಘ್ರದಲ್ಲೇ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ಗೂ ಮನದಟ್ಟಾಗಲಿದೆ ಎಂದು ಲೆ|ಜ| ವಿನೋದ್‌ ಖಂಡಾರೆ ಹೇಳಿದರು.

ಭಾರತದ ನೆರೆಹೊರೆಯ ವಿಚಾರದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಾರತ ಸಾಮಾನ್ಯವಾಗಿ ನೆರೆಯ ದೇಶಗಳಿಗೆ ಎಷ್ಟೇ ಸಹಾಯ ಮಾಡಿದರೂ ಅವರ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ, ಹಾಗಾಗಿ ಮಾಲ್ದೀವ್ಸ್‌ ವಿಚಾರದಲ್ಲೂ ನಮ್ಮ ನಿರ್ಲಿಪ್ತ ಧೋರಣೆಯನ್ನು ಮುಂದುವರಿಸುವುದು ಸೂಕ್ತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next