Advertisement

ಫಲಿತಾಂಶ ,ಅಂಕಪಟ್ಟಿ ನೀಡದೆ ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಣೆ

10:42 AM Jul 12, 2018 | Harsha Rao |

ಮಂಗಳೂರು: ಮಂಗಳೂರು ವಿ.ವಿ.ಯಲ್ಲಿ ಜು. 4ರಂದು ನಡೆದ ಅತಿಥಿ ಉಪನ್ಯಾಸಕರ ಸಂದರ್ಶನಕ್ಕೆ ವಿ.ವಿ.ಯಲ್ಲಿ ಕಲಿತ ವಿದ್ಯಾರ್ಥಿಗಳಿಗೇ ಅವಕಾಶ ನಿರಾಕರಿಸಲಾಗಿದೆ. ವಿದ್ಯಾರ್ಥಿಗಳ ಬಳಿ ಅಂಕ ಪಟ್ಟಿ ಇಲ್ಲದಿರುವುದರಿಂದ ನೇರ ಸಂದರ್ಶನಕ್ಕೆ ಅವಕಾಶ ನೀಡಿಲ್ಲವೆಂದು ವಿ.ವಿ. ಹೇಳಿದೆ.

Advertisement

ಆದರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರುವಾಗ ನಮಗೂ ಬೇಗ ಫಲಿತಾಂಶ ಪ್ರಕಟಿಸಿ ಅಂಕ ಪಟ್ಟಿ ನೀಡಬೇಕಿತ್ತು ಎಂಬುದು ವಿದ್ಯಾರ್ಥಿಗಳ ಅಳಲು.

ಮಂಗಳೂರು ವಿ.ವಿ.ಯಲ್ಲಿ ಎಂಎ, ಎಂಕಾಂ ಮತ್ತು ಎಂಎಸ್ಸಿ ತರಗತಿಗಳಿಗೆ ಮೇ ಕೊನೆಯ ವಾರದಲ್ಲಿ ಪರೀಕ್ಷೆ ಮುಗಿದಿದೆ. ಪರೀಕ್ಷೆ ಮುಗಿದು ಒಂದೂವರೆ ತಿಂಗಳಾದರೂ ನಾಲ್ಕನೇ ಸೆಮಿಸ್ಟರ್‌ನ ಫಲಿತಾಂಶ ಪ್ರಕಟವಾಗಿಲ್ಲ. ಫಲಿತಾಂಶ ಪ್ರಕಟವಾಗಿ ಅಂಕಪಟ್ಟಿ ನೀಡುವ ಮೊದಲೇ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೂ ವಿ.ವಿ. ವಿದ್ಯಾರ್ಥಿಗಳೇ ಆದ ಕಾರಣ ಹಿಂದಿನ ಪರೀಕ್ಷೆಗಳ ಅಂಕ ಆಧಾರಿತವಾಗಿ ಸಂದರ್ಶನ ಎದುರಿಸೋಣವೆಂದು ಹೋದರೆ ಸಂದರ್ಶನ ಅವಕಾಶ ನಿರಾಕರಿಸಲಾಗಿದೆ.

ಸುಮಾರು 50 ಮಂದಿ ಅಭ್ಯರ್ಥಿಗಳಿಗೆ ಇದರಿಂದ ನಿರಾಶೆಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿನಿಯೋರ್ವರು ಅಸಮಾಧಾನ ತೋಡಿಕೊಂಡಿದ್ದಾರೆ.

ಇತರ ವಿದ್ಯಾರ್ಥಿಗಳು ಪಾಲ್ಗೊಂಡರು
ಇತರ ಕಾಲೇಜುಗಳಲ್ಲಿ ಪರೀಕ್ಷೆಗಳು ಮುಗಿದು, ಫಲಿತಾಂಶ ಪ್ರಕಟವಾಗಿ ಅಂಕಪಟ್ಟಿಯನ್ನೂ ನೀಡಲಾಗಿದೆ. ಅವರೆಲ್ಲ ನೇರ ಸಂದರ್ಶನಕ್ಕೆ ಹಾಜರಾಗಿ ಸಂದರ್ಶನ ಎದುರಿಸಿದ್ದರು. ಆದರೆ ವಿ.ವಿ. ವಿದ್ಯಾರ್ಥಿಗಳಾದ ನಮಗೆ ಮಾತ್ರ ಅವಕಾಶ ಇರಲಿಲ್ಲ ಎಂದಿದ್ದಾರೆ ಈ ವಿದ್ಯಾರ್ಥಿನಿ.

Advertisement

ಯಾವ ಸಂದರ್ಶನಕ್ಕೂ ಹಾಜರಾಗುವಂತಿಲ್ಲ
ಅಂಕಪಟ್ಟಿ ಸಿಗದಿರುವುದರಿಂದ ಇತರ ಯಾವುದೇ ಸಂದರ್ಶನವನ್ನು ಎದುರಿಸಲೂ ಸಾಧ್ಯವಾಗುತ್ತಿಲ್ಲ. ಬೆಳಗಾವಿ ಕೆ.ಎಲ್‌.ಇ. ಸೊಸೈಟಿ ಅನುದಾನಿತ ಕಾಲೇಜುಗಳ ಖಾಯಂ ಉಪನ್ಯಾಸಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಅಲ್ಲಿಗೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಈಗ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹುದ್ದೆಗೂ ಅರ್ಜಿ ಆಹ್ವಾನಿಸಲಾಗಿದ್ದು, ಈ ಅವಕಾಶವನ್ನೂ ಕಳೆದುಕೊಳ್ಳುವಂತಾಗಿದೆ ಎನ್ನುತ್ತಾರೆ ಅವಕಾಶ ವಂಚಿತ ವಿದ್ಯಾರ್ಥಿಗಳು.

ಈ ಬಗ್ಗೆ ಮಂಗಳೂರು ವಿ.ವಿ.ಯ ವಿಶೇಷ ಅಧಿಕಾರಿ ಡಾ| ನಾಗಪ್ಪ ಗೌಡ ಪ್ರತಿಕ್ರಿಯಿಸಿ, ಫಲಿತಾಂಶ ಪ್ರಕಟವಾದ ಅನಂತರವಷ್ಟೇ ಅಂಕಪಟ್ಟಿ ಸಿಗುತ್ತದೆ. ವಿ.ವಿ.ಯಲ್ಲಿ ಸ್ನಾತಕೋತ್ತರ ಪರೀಕ್ಷೆಗಳ ಮೌಲ್ಯ
ಮಾಪನವನ್ನು ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಮೌಲ್ಯಮಾಪನ ಎಂಬ ಎರಡು ರೀತಿಯ ಪ್ರಕ್ರಿಯೆಗಳಿಗೆ ಒಳಪಡಿಸಲಾಗುತ್ತದೆ. ಇದರಿಂದ ಫಲಿತಾಂಶ ತಡವಾಗುತ್ತದೆ. ಅತಿಥಿ ಉಪನ್ಯಾಸಕರ ಹುದ್ದೆಗೆ ಶೇ. 55 ಅಂಕ ಇಲ್ಲದೆ ಸಂದರ್ಶನ ನಡೆಸುವುದು ಅಸಾಧ್ಯ. ಹಾಗಾಗಿ ಅಂಕಪಟ್ಟಿ ದೊರೆಯದೆ ವಿದ್ಯಾರ್ಥಿಗಳ ಅಂಕ ಗೊತ್ತಾಗುವುದಿಲ್ಲ. ಅದಕ್ಕಾಗಿ ಅವರಿಗೆ ನೇರ ಸಂದರ್ಶನಕ್ಕೆ ಅವಕಾಶ ನೀಡಲು ಸಾಧ್ಯ
ವಾಗಿಲ್ಲ. ಮುಂದಿನ ದಿನಗಳಲ್ಲಿ ಸಂದರ್ಶನ ನಡೆದರೆ ಅವರೂ ಪಾಲ್ಗೊಳ್ಳಬಹುದು ಎಂದು ತಿಳಿಸಿದ್ದಾರೆ.

ಮಂಗಳೂರು ವಿ.ವಿ.ಯ ಮಂಗಳ ಗಂಗೋತ್ರಿ, ಚಿಕ್ಕ ಅಳುವಾರ, ಮಡಿಕೇರಿಯಲ್ಲಿರುವ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿಸಲ್ಲಿಸಲು ಜೂ. 28 ಕೊನೆಯ ದಿನಾಂಕವಾಗಿತ್ತು. ಜು. 3, 4 ಮತ್ತು 5ರಂದು ವಿ.ವಿ.ಯಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆದಿತ್ತು. ಯುಜಿಸಿ, ಎನ್‌ಇಟಿ/ಎಸ್‌ಎಲ್‌ಇಟಿ ಉತ್ತೀರ್ಣರಾದವರಿಗೆ/ ಪಿಎಚ್‌ಡಿ ಮಾಡಿದವರಿಗೆ ಆದ್ಯತೆ ನೀಡಲಾಗಿತ್ತು. ಅಲ್ಲದೆ ಅಂಗೀಕೃತ ವಿ.ವಿ.ಯಿಂದ ಕನಿಷ್ಠ ಶೇ. 55 ಅಂಕಗಳೊಂದಿಗೆ ಎಂಎ, ಎಂಕಾಂ, ಎಂಎಸ್ಸಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಅಂತಿಮ ಸೆಮಿಸ್ಟರ್‌ನ ಅಂಕಪಟ್ಟಿ ಇಲ್ಲದ ಹಿನ್ನೆಲೆಯಲ್ಲಿ ವಿ.ವಿ.ಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಅವಕಾಶ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next