Advertisement

ಉಪನ್ಯಾಸಕರು ಜೀನ್ಸ್‌, ಟೀಶರ್ಟ್‌ ಧರಿಸದಂತೆ ಹೇರಿದ್ದ ಆದೇಶ ವಾಪಸ್‌

03:17 PM Nov 08, 2021 | Team Udayavani |

ಮೈಸೂರು: ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ಜೀನ್ಸ್‌ ಪ್ಯಾಂಟ್‌, ಟೀಶರ್ಟ್‌ ಧರಿಸದಂತೆ ನಿರ್ಬಂಧ ಹೇರಿ ಆದೇಶ ಹೊರಡಿ ಸಿದ್ದ ಡಿಡಿಪಿಯು, ವಸ್ತ್ರಸಂಹಿತೆ ವಿಷಯ ವಿವಾದವಾಗುತ್ತಿದ್ದಂತೆ ಎಚ್ಚೆತ್ತು ಕೊಂಡು 24 ಗಂಟೆಯಲ್ಲೇ ವಾಪಸ್‌ ಪಡೆದಿರುವ ಘಟನೆ ನಡೆದಿದೆ.

Advertisement

ಪದವಿ ಪೂರ್ವ ಕಾಲೇಜುಗಳಲ್ಲಿ ವಸ್ತ್ರಸಂಹಿತೆ ಕುರಿತು ಮೈಸೂರು ಜಿಲ್ಲೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸಮೂರ್ತಿ ಅವರು ಶನಿವಾರ ಆದೇಶ ಹೊರಡಿಸಿದ್ದರು. ಇದಕ್ಕೆ ಉಪನ್ಯಾಸಕರ ವಲಯದಲ್ಲಿ ಆಕ್ರೋಶ ಮತ್ತು ವಿರೋಧ ವ್ಯಕ್ತವಾಗಿದ್ದು, ಇದರಿಂದ ಎಚ್ಚೆತ್ತ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಮ್ಮ ಆದೇಶ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಏನಿದು ಆದೇಶ?: ಮೈಸೂರು ಜಿಲ್ಲಾಧಿಕಾರಿ ನ.6ರಂದು ಮೌಖಿಕವಾಗಿ ಸೂಚಿಸಿರುವಂತೆ ಕಾಲೇಜಿನಲ್ಲಿ ಕರ್ತವ್ಯದ ವೇಳೆ ಟೀ-ಶರ್ಟ್‌ ಹಾಗೂ ಜೀನ್ಸ್‌ ಪ್ಯಾಂಟ್‌ ಧರಿಸುವುದನ್ನು ನಿರ್ಬಂಧಿಸುವಂತೆ ತಿಳಿಸಿದ್ದಾರೆ. ಆದ್ದರಿಂದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಡ್ಡಾಯ ವಾಗಿ ಜೀನ್ಸ್‌ ಪ್ಯಾಂಟ್‌, ಟಿ-ಶರ್ಟ್‌ ಧರಿಸಿ ಬರುವುದನ್ನು ನಿರ್ಬಂಧಿಸುವ ಕುರಿತು ನೌಕರರ ಗಮನಕ್ಕೆ ತರಬೇಕು. ಈ ಬಗ್ಗೆ ಕ್ರಮ ಕೈಗೊಂಡು ನ.10ರ ಒಳಗೆ ಕಚೇರಿಗೆ ವರದಿ ಸಲ್ಲಿಸುವಂತೆ ಪಿಯು ಕಾಲೇಜಿನ ಪ್ರಾಂಶುಪಾಲರಿಗೆ ಆದೇಶ ನೀಡಿದ್ದರು.

ವಿರೋಧ ವ್ಯಕ್ತವಾಗಿತ್ತು: ಡಿಡಿಪಿಯು ಹೊರಡಿಸಿದ್ದ ಈ ಆದೇಶಕ್ಕೆ ಉಪನ್ಯಾಸಕರ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿ ದ್ದಲ್ಲದೇ, ಸಾರ್ವಜನಿಕ ವಲಯದಲ್ಲೂ ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ಈ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದರು. ಬಳಿಕ ವಸ್ತ್ರ ಸಂಹಿತೆ ವಿಷಯ ವಿವಾದವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಡಿಡಿಪಿಯು ಶ್ರೀನಿವಾಸ್‌ಮೂರ್ತಿ ಅವರು, ಆದೇಶವನ್ನು ಭಾನುವಾರ ವಾಪಸ್‌ ಪಡೆದುಕೊಂಡಿದ್ದಾರೆ.

ನನಗೇ ಶಾಕ್‌ ಆಗಿದೆ: “ನಾನು ಈ ರೀತಿಯ ಆದೇಶವನ್ನು ಹೊರಡಿಸುವಂತೆ ಸೂಚಿಸಿಲ್ಲ. ಈ ವಿಚಾರ ಕೇಳಿ ನನಗೆ ಶಾಕ್‌ ಆಗಿದೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಯೊಂದಿಗೆ ಮಾತನಾಡಿ, ಈ ವಿಚಾರದಲ್ಲಿ ತಪ್ಪಾಗಿದೆ. ಈ ಆದೇಶವನ್ನು ಹಿಂಪಡೆಯಿರಿ ಎಂದು ನಿರ್ದೇಶಿಸಿದ್ದೇನೆ. ನಮ್ಮ ಗಮನಕ್ಕೆ ಬಾರದೇ ಈ ರೀತಿಯ ಆದೇಶ ಹೊರಡಿಸಿರುವ ಬಗ್ಗೆ ಡಿಡಿಪಿಯು ಅವರಿಂದ ಸೂಕ್ತ ಕಾರಣ ಕೇಳಿದ್ದೇನೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದ್ದಾರೆ.

Advertisement

ಜೀನ್ಸ್‌ ಧರಿಸಿದ್ದರೆ ಮುಜುಗರ ಆಗುತ್ತದೆ ಎಂದು ಆದೇಶ ಹೊರಡಿಸಲಾಗಿತ್ತು : ತರಗತಿಯಲ್ಲಿ ಶಿಸ್ತು ಮೂಡಿಸುವ ಉದ್ದೇಶದಿಂದ ಈ ಆದೇಶವನ್ನು ಹೊರಡಿಸಲಾಗಿತ್ತು. ಜತೆಗೆ ಜಿಲ್ಲಾಧಿಕಾರಿ ಅವರೊಂದಿಗೆ ಈ ವಾರ ಸಿಇಟಿಗೆ ಸಂಬಂಧಿಸಿದಂತೆ ಸಭೆ ಕರೆಯಲಾಗಿದೆ. ಆ ಸಭೆಗೆ ಉಪ ನ್ಯಾಸಕರು ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌ ಧರಿಸಿ ಬಂದರೆ ಮುಜುಗರ ಆಗಬಹುದೆಂಬ ಕಾರಣಕ್ಕೆ ಶನಿವಾರ ಬೆಳಗ್ಗೆ 9 ಗಂಟೆಗೆ ಆದೇಶ ಹೊರಡಿ ಸಲಾಗಿತ್ತು. ಈಗ ಆ ಆದೇಶ ಹಿಂದಕ್ಕೆ ಪಡೆದು ಕೊಳ್ಳಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸಹ ಕರೆ ಮಾಡಿ ವಿಚಾರಿಸಿ ದರು. ಆದೇಶ ವಾಪಸ್‌ ಪಡೆದಿರುವ ಮಾಹಿತಿಯನ್ನು ಅವರಿಗೂ ನೀಡಿದ್ದೇನೆಂದು ಮೈಸೂರು ಡಿಡಿಪಿಯು ಶ್ರೀನಿವಾಸ್‌ ಮೂರ್ತಿ ತಿಳಿಸಿದ್ದಾರೆ.

ಡಿಡಿಪಿಯು ಆದೇಶಕ್ಕೆ ಉಪನ್ಯಾಸಕರಲ್ಲೇ ಪರ -ವಿರೋಧ :

ಮೈಸೂರು: ಡಿಡಿಪಿಯು ಅವರು ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಕರ್ತವ್ಯ ಸಂದರ್ಭದಲ್ಲಿ ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌ ಧರಿಸದಂತೆ ನಿರ್ಬಂಧ ವಿಧಿಸಿ ಹೊರಡಿಸಿದ್ದ ಆದೇಶಕ್ಕೆ ಉಪನ್ಯಾಸಕರಲ್ಲೇ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಮಕ್ಕಳಿಗಷ್ಟೇ ಅಲ್ಲದೇ ಇಡೀ ಸಮಾಜಕ್ಕೆ ಗುರು (ಶಿಕ್ಷಕ) ಮಾದರಿಯಾಗಿರಬೇಕು. ಆತ ಧರಿಸುವ ಉಡುಪು, ಆತನ ಹವ್ಯಾಸ, ನಡೆ-ನುಡಿ ಎಲ್ಲವನ್ನೂ ಸಮಾಜ ಮತ್ತು ಮಕ್ಕಳು ಗಮನಿಸುತ್ತಾರೆ. ಉಪನ್ಯಾಸಕ ಉತ್ತಮ ವಸ್ತ್ರ ಧರಿಸಿ ಕಾಲೇಜಿಗೆ ಬಂದರೆ ಮಕ್ಕಳು ಸಹ ಅದನ್ನೇ ಕಲಿಯುತ್ತವೆ. ಜೀನ್ಸ್‌ – ಮತ್ತು ಟೀಶರ್ಟ್‌ ಧರಿಸಿ ಬಂದರೆ ಮಕ್ಕಳೂ ಚಿತ್ರ ವಿಚಿತ್ರವಾದ ಬಟ್ಟೆ ಧರಿಸುತ್ತಾರೆ ಎಂಬುದು ವರ್ಗದ ಉಪನ್ಯಾಸಕರ ಅಭಿಮತ. ನಾವು ಎಲ್ಲಾ ಸಂದರ್ಭದಲ್ಲೂ ಜೀನ್ಸ್‌ ಪ್ಯಾಂಟ್‌ – ಟೀಶರ್ಟ್‌ ಧರಿಸುವುದಿಲ್ಲ. ಕೆಲವೊಮ್ಮೆ ಧರಿಸುತ್ತೇವೆ. ಅದಕ್ಕೂ ನಿರ್ಬಂಧ ಹೇರಿದರೆ ಹೇಗೆ ಎಂಬುದು ಮತ್ತೂಂದು ವರ್ಗದ ವಾದವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next