ನಂಜನಗೂಡು: ಶ್ರೀಕಂಠೇಶ್ವರ ದೇಗುಲ ದರ್ಶನಕ್ಕೆ ಕಪಿಲಾ ನದಿ ದಡದಿಂದ ಭಕ್ತರ ಆಗಮನಕ್ಕೆ ಕಲ್ಪಿಸಿದ್ದ ಸುರಂಗ ಮಾರ್ಗ ಕಾಮಗಾರಿಗೆ ಕೇಂದ್ರ ಪುರಾತತ್ವ ಇಲಾಖೆಯಿಂದ ಪರವಾನಗಿ ಪಡೆದಿಲ್ಲ ಎಂದು ಸ್ಥಗಿತಗೊಂಡಿದ್ದ ಕಾಮಗಾರಿ ಪುನಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದ ಆರ್ ಧ್ರುವನಾರಾಯಣ್ ತಿಳಿಸಿದರು.
ಕೇಂದ್ರ ಪುರಾತತ್ವ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ಭಕ್ತರು ಕಪಿಲಾ ನದಿಯಲ್ಲಿ ಸ್ನಾನ ಮಾಡಿ ರಸ್ತೆ ದಾಟಲು ವಾಹನ ದಟ್ಟಣೆಯಿಂದ ಸಮಸ್ಯೆಯಾಗಿತ್ತು. ಭಕ್ತರ ಸುಗಮ ಸಂಚಾರಕ್ಕಾಗಿ ಕಪಿಲಾ ನದಿ ಸ್ಥಾನಘಟ್ಟದಿಂದ ಭಕ್ತರು ದೇಗುಲಕ್ಕೆ ಆಗಮಿಸಲು ಪಾದಚಾರಿ ಸುರಂಗ ಮಾರ್ಗ ಕಾಮಗಾರಿ ಕೈಗೊಳ್ಳಲಾಗಿತ್ತು.
ಪರವಾನಗಿ ಸಮಸ್ಯೆಯಿಂದ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿತ್ತು. ಪುರಾತತ್ವ ಇಲಾಖೆಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ, ಸಂಪೂರ್ಣ ಮಾಹಿತಿ ಒದಗಿಸಲಾಗಿದೆ. ಕಾಮಗಾರಿಗೆ ಅಡೆತಡೆಗಳು ನಿವಾರಣೆಯಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. 1.80 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಕೈಗೊಳ್ಳಲಾಗಿದೆ.
ಪುರಾತತ್ವ ಇಲಾಖೆಯ ಗಮನಕ್ಕೆ ಬರದೆ ದೇಗುಲದ ಸುತ್ತ ಅನೇಕ ಅಕ್ರಮ ಕಟ್ಟಡ, ಮಳಿಗೆಗಳು ತಲೆ ಎತ್ತುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅಂತಹ ಕಟ್ಟಡ ಮತ್ತು ಮಳಿಗೆ ಮಾಲಿಕರಿಗೆ ನೋಟಿಸ್ ನೀಡಿ ರದ್ದುಗೊಳಿಸಲು ಸೂಚಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಪುರಾತತ್ವ ಇಲಾಖೆ ಪ್ರಾದೇಶಿಕ ನಿರ್ದೇಶಕರಾದ ನಂಬಿರಾಜನ್, ಉಪ ಅಧೀಕ್ಷಕ ಮೋಹನ್ ದಾಸ್, ಎಂಜಿನಿಯರ್ ಚಂದ್ರಕಾಂತ್, ಸುನೀಲ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಎಇಇ ಜಗದೀಶ್, ಎಇ ರಮೇಶ್, ನಗರಸಭಾ ಅಧ್ಯಕ್ಷೆ ಪುಪ್ಷಲತಾ, ಉಪಾಧ್ಯಕ್ಷ ಪ್ರದೀಪ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ದೇಗುಲ ಸಲಹಾ ಸಮಿತಿ ಅಧ್ಯಕ್ಷ ಪುಟ್ಟನಿಂಗಶೆಟ್ಟಿ, ಸದಸ್ಯ ಗಿರೀಶ್ ಇತರರಿದ್ದರು.