ಮೈಸೂರು: ಇಡೀ ದೇಶದ ಗಮನ ಸೆಳೆದಿದ್ದ ಹಾಗೂ ಕೋವಿಡ್ 19 ಸೋಂಕು ವ್ಯಾಪಕವಾಗಿ ಹರಡಿ ಜಿಲ್ಲೆಯನ್ನೇ ಕೋವಿಡ್ 19 ಹಾಟ್‌ಸ್ಪಾಟ್ ಆಗಿಸಿದ್ದ ನಂಜನಗೂಡಿನ ಜ್ಯುಬಿಲಿಯಂಟ್ ಔಷಧ ಕಾರ್ಖಾನೆ ಸೋಮವಾರದಿಂದ ಪುನರಾರಂಭವಾಯಿತು. ಕಾರ್ಖಾನೆ ನೌಕರರು ಹಾಗೂ ಅವರ ಸಂಪರ್ಕದಲ್ಲಿರುವವರು ಸೇರಿದಂತೆ 74 ಮಂದಿಗೆ ಸೋಂಕು ಹರಡಿತ್ತು. ಕಾರ್ಖಾನೆಯ ನೌಕರನಿಗೆ ಸೋಂಕು ಹರಡಿರುವುದು ದೃಢಪಡುತ್ತಿದ್ದಂತೆಯೇ ಜಿಲ್ಲಾಡಳಿತ ಕಾರ್ಖಾನೆಯನ್ನು ಬಂದ್ ಮಾಡಿತ್ತು. ಕಳೆದ ಎರಡು ತಿಂಗಳಿನಿಂದ ಸ್ಥಗಿತವಾಗಿದ್ದ ಕಾರ್ಖಾನೆ ಸರ್ಕಾರದ ಸೂಚನೆ ಮತ್ತು ಷರತ್ತುಗಳ ಮೇರೆಗೆ ಪುನಾರಂಭಗೊಂಡಿತು.
ಪುನಾರಂಭಕ್ಕೆ ಸಿದ್ಧತೆ: ಕಾರ್ಖಾನೆಯ ನೌಕರರೆಲ್ಲರೂ ಗುಣಮುಖವಾಗಿರುವುದರಿಂದ ಔಷಧ ತಯಾರಿಕೆಗೆ ಅನುಮತಿ ನೀಡುವಂತೆ ಕಾರ್ಖಾನೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸರ್ಕಾರ ಷರತ್ತುಬದ್ಧ ಅನುಮತಿ ನೀಡಿರುವುದರಿಂದ ಕಾರ್ಖಾನೆಯಲ್ಲಿ ಚಟುವಟಿಕೆ ಆರಂಭವಾಗಿದ್ದು, ಸೋಮವಾರವೇ ಕೆಲವು ನೌಕರರು ಕಾರ್ಖಾನೆಗೆ ತೆರಳಿ ಪುನಾರಂಭಕ್ಕೆ ಸಿದ್ಧತೆ ನಡೆಸಿದ್ದರು.
ಶೇ.25ರಷ್ಟು ಕಾರ್ಮಿಕರು ಹಾಜರು: ಸೋಮವಾರ ಕಾರ್ಖಾನೆಯ ಶೇ.25ರಷ್ಟು ಕಾರ್ಮಿಕರು ಕೆಲಸಕ್ಕೆ ಹಾಜರಾದರು. ಕಾರ್ಖಾ ನೆಯ ಗೇಟ್ ಮುಂದೆ ಎಲ್ಲಾ ನೌಕರರನ್ನು ತಪಾಸಣೆಗೆ ಒಳಪಡಿಸಿ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಸ್ಯಾನಿಟೈಸರ್ ಹಾಕಿ ಒಳಬಿಡಲಾಯಿತು. ಪಿಪಿಇ ಕಿಟ್ ಬಳಸಿ ನೌಕರರನ್ನು ತಪಾಸಣೆ ಮಾಡಲಾಯಿತು. ಕೋವಿಡ್ 19ಕ್ಕಾಗಿಯೇ ರೆಮಿxಸಿವಿರ್ ಔಷಧ ತಯಾರಿಕೆಯಲ್ಲಿ ಕಾರ್ಖಾನೆ ತೊಡಗಿಕೊಂಡಿದೆ.
ಸೋಂಕಿನ ಮೂಲ ಪತ್ತೆಯಾಗಿಲ್ಲ: ತಾಲೂಕಿನ 10 ಗ್ರಾಮಗಳ ದತ್ತು, 50 ಸಾವಿರ ಕಿಟ್, ಭವಿಷ್ಯದಲ್ಲಿ ದೋಷ ಎಸಗಲ್ಲ ಎಂಬ ಸರ್ಕಾರದ ಷರತ್ತುಗಳನ್ನು ಒಪ್ಪಿ ಕಾರ್ಖಾನೆ ಆರಂಭಿಸಿದೆ. ಕಾರ್ಖಾನೆಯ 74 ಮಂದಿ ಕಾರ್ಮಿಕರಿಗೆ ಕೊರೋನಾ ಸೋಂಕು ತಗುಲಿತ್ತು. ಆದರೆ ಸೋಂಕಿನ ಮೂಲವೇ ಇಂದಿಗೂ ಪತ್ತೆಯಾಗಲಿಲ್ಲ.
ಸ್ವಯಂ ಘೋಷಣಾ ಪತ್ರ: ನಾನು ಫಿಟ್ ಇದ್ದೇನೆ, ನೀವು ಅನುಮತಿ ಕೊಟ್ಟರೆ ಕೆಲಸ ಮಾಡುತ್ತೇನೆ ಎಂದು ಜ್ಯುಬಿಲಿಯಂಟ್ ಕಾರ್ಖಾನೆಗೆ ಕಾರ್ಮಿಕರು ಸ್ವಯಂ ಘೋಷಣ ಪತ್ರಕ್ಕೆ ಸಹಿ ಹಾಕಿ ಕೊಡಲು ನೌಕರರಿಗೆ ಸೂಚಿಸಲಾಗಿತ್ತು. ಸ್ವಯಂ ಘೋಷಣಾ ಪತ್ರ ಸಲ್ಲಿಸದ ಕಾರ್ಮಿಕರಿಗೆ ಪ್ರವೇಶ ಅವಕಾಶ ನಿರಾಕರಿಸಲಾಗಿತ್ತು ಎನ್ನಲಾಗಿದೆ. ಪ್ರತಿ ಕಾರ್ಮಿಕನ ಹೆಸರು, ವಿಳಾಸ, ಪ್ರವಾಸ, ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆಯಲಾಯಿತು.
ನೌಕರರು ಮನೆಯಲ್ಲಿದ್ದರು ಅವರು ಕಂಟೈನ್ಮೆಂಟ್ ಪ್ರದೇಶದಲ್ಲಿ ಇರುವವರು ಯಾರು, ಕಂಟೈನ್ಮೆಂಟ್ ವಲಯ ಬಿಟ್ಟು ಆಚೆ ಹೋಗಿದ್ದರೆ? ಸಾರ್ವಜನಿಕ ವಾಹನದಲ್ಲಿ ಕೆಲಸಕ್ಕೆ ಬಂದಿದ್ದಾರಾ? ಕೋವಿಡ್ 19 ಟೆಸ್ಟ್ ಆಗಿದೆಯಾ? ಮುಂತಾದ ಪ್ರಶ್ನೆಗಳನ್ನು ಒಳಗೊಂಡ ಸ್ವ ಘೋಷಣಾ ಪತ್ರ ಪಡೆದಿರುವುದಾಗಿ ತಿಳಿದು ಬಂದಿದೆ.