Advertisement
ಊರಿಗೆ ಮರಳಿದ ಕಾರ್ಮಿಕರುಮೀನುಗಾರಿಕಾ ಋತು ಆರಂಭದಲ್ಲಿ ಹೊರ ಜಿಲ್ಲೆಯ ಹಾವೇರಿ, ಗದಗ, ಕೊಪ್ಪಳ, ಬಾಗಲಕೋಟೆ, ಹುಬ್ಬಳ್ಳಿ, ವಿಜಯಪುರ ಮುಂತಾದ ಕಡೆಗಳಿಂದ ಪುರುಷ, ಮಹಿಳಾ ಕಾರ್ಮಿಕರು ಮೀನು ಹೋರುವ, ಲೋಡ್, ಅನ್ ಲೋಡ್ ಮಾಡುವ ಕಾಯಕಕ್ಕೆ ಮಲ್ಪೆ ಬಂದರಿಗೆ ಬರುತ್ತಾರೆ. ಮೀನುಗಾರಿಕೆ ಸೀಸನ್ ಮುಗಿಯುತ್ತಿದ್ದಂತೆ ಮತ್ತೆ ತಮ್ಮ ಊರಿಗೆ ಮರುಳುವುದು ವಾಡಿಕೆ. ಇನ್ನು ಎರಡು ತಿಂಗಳು ಬಿಡುವಿನ ಕಾರಣ ಬಹುತೇಕ ಮಂದಿ ಈಗಾಗಲೇ ಊರಿಗೆ ತೆರಳಿದ್ದಾರೆ, ಹೊರರಾಜ್ಯವಾದ ಒರಿಸ್ಸಾ, ಆಂಧ್ರಪ್ರದೇಶ, ಜಾರ್ಖಂಡ್ ಗಳಿಂದಲೂ ಕಾರ್ಮಿಕರು ಇಲ್ಲಿಗೆ ಆಗಮಿಸುತ್ತಿದ್ದು, ನಿಷೇಧ ಕಾರಣ ಊರಿಗೆ ಮರಳಲು ಸಿದ್ಧರಾಗಿದ್ದಾರೆ.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿರುವ ಸುಮಾರು 1200 ಬೋಟ್ ಗಳಲ್ಲಿ 10,800 ಮಂದಿ,150 ಪರ್ಸಿನ್ ಬೋಟ್ ಗಳಲ್ಲಿ 5200 ಮಂದಿ, 600 ತ್ರಿಸೆವೆಂಟಿ ಬೋಟ್‌ಗಳಲ್ಲಿ 3600 ಮಂದಿ, ಗಿಲ್ ನೆಟ್, ಸಣ್ಣಟ್ರಾಲ್ ಬೋಟ್, ಸೇರಿದಂತೆ 30 ಸಾವಿರ ಮಂದಿ ಮೀನುಗಾರಿಕೆ ನಡೆಸುತ್ತಾರೆ. ಇನ್ನು ಬೋಟಿನಿಂದ ಮೀನು ಖಾಲಿ ಮಾಡುವವರು, ಹೊತ್ತೂಯ್ಯುವವರು ಮೀನು ಲೋಡ್ ಮಾಡುವವರು ಸೇರಿದಂತೆ ಸುಮಾರು 12 ಸಾವಿರ ಮಂದಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಇತರ ಕೆಲಸ ಮಾಡುತ್ತಿದ್ದಾರೆ. ಸುಮಾರು 40 ಐಸ್ ಪ್ಲಾಂಟ್, 10 ಮೀನು ಕಟ್ಟಿಂಗ್ ಶೆಡ್‌ಗಳು, 4 ಫಿಶ್ ಮೀಲ್ ಗಳು ಈ ಅವಧಿಯಲ್ಲಿ ಮುಚ್ಚುತ್ತವೆ. ಇವಲ್ಲದೆ ಮೀನುಗಾರಿಕೆಗೆ ಸಂಬಂಧಿಸಿದಂತೆ ಲಾರಿಗಳು ಟೆಂಪೋ, ರಿಕ್ಷಾಗಳು ಸೇರಿದಂತೆ ಸುಮಾರು 8 ಸಾವಿರಕ್ಕೂ ಅಧಿಕ ಮೀನು ಸಾಗಾಟದ ವಾಹನಗಳಿವೆ. ರಜೆಯಲ್ಲೂ ಕೆಲಸ
ಮೀನುಗಾರಿಕೆಗೆ ರಜೆ ಇದ್ದರೂ ಬೋಟ್ ಮಾಲಕರು, ಮೀನುಗಾರರಿಗೆ ರಜೆ ಇರುವುದಿಲ್ಲ. ಬೋಟ್ ಕಟ್ಟುವುದು, ಬೋಟಿನ ರಿಪೇರಿ, ನಿರ್ವಹಣೆ, ಬಲೆ ಹೊಂದಿಸಿಕೊಳ್ಳುವ ಕೆಲಸದಲ್ಲಿ ಮೀನುಗಾರರು ತೊಡಗಿಸಿಕೊಳ್ಳುತ್ತಾರೆ. ಆ ಮೂಲಕ ನಿಷೇಧ ಬಳಿಕ ಮತ್ತೆ ಮೀನುಗಾರಿಕೆಗೆ ತೆರಳಲು ಸಿದ್ಧತೆ ನಡೆಸುತ್ತಾರೆ.
Related Articles
ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿರುವ ಈ ಸಂದರ್ಭದಲ್ಲಿ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ. ಶ್ರಮಜೀವಿ ಮೀನುಗಾರರು ಈ ಸಂದರ್ಭದಲ್ಲಿ ನಾಡದೋಣಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. 12 ನಾಟಿಕಲ್ ಮೈಲುನೊಳಗೆ 10 ಅಶ್ವಶಕ್ತಿಯ ಎಂಜಿನ್ ಬಳಸಿದ ದೋಣಿಗಳಲ್ಲಿ ಸಮುದ್ರತೀರದಲ್ಲಿ ಮೀನುಗಾರಿಕೆ ನಡೆಸುತ್ತಾರೆ.
Advertisement
ಜೂ. 3ರವರೆಗೆ ಅವಕಾಶಸರಕಾರದ ಆದೇಶದ ಪ್ರಕಾರ ಮೇ 31ರ ರಾತ್ರಿ 12 ಗಂಟೆ ಒಳಗೆ ಮಾತ್ರ ಮೀನುಗಾರಿಕೆ ಚಟುವಟಿಕೆಗೆ ಅವಕಾಶವಿದೆ. ಸಮುದ್ರದಲ್ಲಿ ಈಗಾಗಲೇ ಉಳಿದಿರುವ ಬೋಟ್ ಗಳೆಲ್ಲ ಒಮ್ಮೆಲೆ ಬಂದರು ಸೇರುವುದರಿಂದ ಮೀನುಗಾರ ಸಂಘಟನೆಯ ಒಳ ಒಪ್ಪಂದದಂತೆ ಮೀನು ಖಾಲಿ ಮಾಡಲು ಜೂ.3ರವರೆಗೆ ಅವಕಾಶ ನೀಡಲಾಗುತ್ತದೆ.
– ಸತೀಶ್ ಕುಂದರ್, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ — ನಟರಾಜ್ ಮಲ್ಪೆ