Advertisement
ಈಗಾಗಲೇ ಗ್ರಾಮೀಣ ಭಾಗದಲ್ಲಿ ಆಯಾ ವ್ಯಾಪ್ತಿಯ ವಲಸೆ ಹಾಗೂ ಕಟ್ಟಡ ಕಾರ್ಮಿಕರಿಗೆ ಅನ್ನ, ಆಶ್ರಯ ಒದಗಿಸುವಂತೆ ರಾಜ್ಯದ ಎಲ್ಲ ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗಿದೆ. ಇದೇ ರೀತಿಯ ಸೂಚನೆಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೂ ನೀಡಲಾಗಿತ್ತು.ಆದರೆ, ಇದೀಗ ಹೈಕೋರ್ಟ್ ಆದೇಶದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಳಗೊಂಡಂತೆ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೋವಿಡ್ 19 ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ದಿಸೆಯಲ್ಲಿ ವಿಶೇಷವಾಗಿ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರ ವಿಚಾರವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ.
– ನಗರ ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಶಾಲೆ ಅಥವಾ ಸಮುದಾಯ ಭವನಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವುದು. ವಸತಿ ಕೇಂದ್ರಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು.
– ಆಶ್ರಯ ಕೇಂದ್ರಗಳಲ್ಲಿ ಉಚಿತವಾಗಿ ಆಹಾರ, ಶುದ್ಧ ಕುಡಿಯುವ ನೀರು, ಶೌಚಾಲಯ ಇತರ ಮೂಲ ಸೌಕರ್ಯ ಮತ್ತು ವೈದ್ಯಕೀಯ ವ್ಯವಸ್ಥೆ ಕಲ್ಪಿಸಬೇಕು. ಸ್ವತ್ಛತೆ, ನೈಮಲ್ಯ ಕಾಪಾಡಬೇಕು. ಅಗತ್ಯವಿದ್ದಲ್ಲಿ ಸ್ಯಾನಿಟೈಸರ್, ಮಾಸ್ಕ್ ಒದಗಿಸಬೇಕು.
– ಆಶ್ರಯ ಕೇಂದ್ರಗಳ ನಿವಾಸಿಗಳಿಗೆ ಆರೋಗ್ಯ ತಪಾಸಣೆ ಮಾಡಬೇಕು. ಜಿಲ್ಲಾಡಳಿತದ ವತಿಯಿಂದ ತಂಡಗಳು ಈ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ಕೊಡಬೇಕು. ಆಗತ್ಯವಿದ್ದವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು.
– ಎಲ್ಲ ಸಾರ್ವಜನಿಕ ಶೌಚಾಲಯಗಳನ್ನು ಲಾಕ್‌ಡೌನ್ ಅವಧಿಯಲ್ಲಿಯೂ ಸಾರ್ವಜನಿಕ ಉಪಯೋಗಕ್ಕಾಗಿ ತೆರಿದಿಟ್ಟು, ಅಲ್ಲಿ ಸ್ವತ್ಛತೆ ಕಾಪಾಡಬೇಕು.
Related Articles
ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳು ಆಯಾ ನಗರಗಳಲ್ಲಿ ಭೂ ವ್ಯವಹಾರ ನಡೆಸುತ್ತಿರುವ ಸಂಘಗಳೊಂದಿಗೆ ಸಭೆಯನ್ನು ನಡೆಸಿ ಸಂಘಗಳ ನಿರ್ಮಾಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡ ಕಾರ್ಮಿಕರಿಗೆ ಆಯಾ ಸಂಘಗಳು ವಸತಿ, ಆಹಾರ ಹಾಗೂ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯದ ಪ್ರಮುಖ ನಗರಗಳಲ್ಲಿ ನಡೆಯುತ್ತಿರುವ ಸಾರ್ವಜನಿಕ ಹಾಗೂ ಖಾಸಗಿ ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರ ಪಟ್ಟಿಯನ್ನು ಸ್ಥಳೀಯ ಸಂಸ್ಥೆಗಳು ಸಂಬಂಧಪಟ್ಟ ಸಂಸ್ಥೆಗಳಿಂದ ಪಡೆದುಕೊಂಡು ಅಂಥವರಿಗೆ ಆಶ್ರಯ ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸರಕಾರ ಸೂಚಿಸಿದೆ.
Advertisement
– ರಫೀಕ್ ಅಹ್ಮದ್