ಭಾಲ್ಕಿ: ಗ್ರಾಮೀಣ ಭಾಗದ ವಿವಿಧ ಕಡೆಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುತ್ತಿದ್ದು ಅಭಿವೃದ್ಧಿ ಅಧಿಕಾರಿಗಳು ತುರ್ತಾಗಿ ಸ್ಪಂದಿಸಿ ದೂರ ಬರದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿವಿಧ ತಾಲೂಕು ಇಲಾಖೆ ಅಧಿಕಾರಿಗಳ ಮತ್ತು ಅಭಿವೃದ್ಧಿ ಅಧಿಕಾರಿಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಿಲು ಹೆಚ್ಚಾದಂತೆ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಲ್ಬಣ ಆಗುತ್ತಿದೆ. ಈ ಬಗ್ಗೆ ಪ್ರತಿದಿನ ವಿವಿಧ ಹಳ್ಳಿಯಿಂದ ದೂರು ಬರುತ್ತಿವೆ. ಏನೇ ಸಮಸ್ಯೆ ಇದ್ದರೂ ಇನ್ನೂ ಎರಡು ತಿಂಗಳು ಕುಡಿವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಪಂಚಾಯಿತಿಗಳಲ್ಲಿ ತೆರೆದ ಬಾವಿ, ಬೋರ್ ವೆಲ್ ಮೋಟಾರ್‌ಗಳು ಎಷ್ಟು ಇವೆ, ಯಾವ ಹಂತದಲ್ಲಿವೆ ಎನ್ನುವ ಬಗ್ಗೆ ಸ್ಪಷ್ಪತೆ ಇಲ್ಲ. ಎಲ್ಲವೂ ಬೇರೆಯವರ ಪಾಲಾಗುತ್ತಿರುವ ಬಗ್ಗೆ ದೂರುಗಳ ಬರುತ್ತಿವೆ. ಹೀಗಾದರೇ ಹೇಗೆ ಎಂದು ಅಭಿವೃದ್ಧಿ ಅಧಿಕಾರಿಗಳ ಕಾರ್ಯಕ್ಕೆ ಅಸಮಧಾನ ವ್ಯಕ್ತಪಡಿಸಿದರು.
ಕಳೆದ ನಾಲ್ಕೈದು ವರ್ಷಗಳಿಂದ ಮನೆ ಕಟ್ಟಿ ಕೊಂಡಿರುವ ಸುಮಾರು 4 ಸಾವಿರ ಅರ್ಹ ಫಲಾನುಭವಿಗಳಿಗೆ ಇನ್ನೂ ಕಂತಿನ ಹಣ ಪಾವತಿ ಆಗದೇ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಹಣ ಬಿಡುಗಡೆಗೆ ಕ್ರಮ ವಹಿಸಬೇಕು. ಗ್ರಾಮೀಣ ಭಾಗದಲ್ಲಿನ ಗ್ರಂಥಾಲಯ, ಶಾಲಾ, ಕಾಂಪೌಂಡ್, ಆಟದ ಮೈದಾನ, ಅಂಗನವಾಡಿ ಕಟ್ಟಡಗಳ ಅಭಿವೃದ್ಧಿಗೆ ಅಭಿವೃದ್ಧಿ ಅಧಿಕಾರಿಗಳು ಕಾಳಜಿ ವಹಿಸಬೇಕು. ಆದರೆ, ಯಾವೊಬ್ಬ ಅಭಿವೃದ್ಧಿ ಅಧಿಕಾರಿಯು ಕೂಡ ತಮ್ಮ ಪಾಲಿನ ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ. ಸರಿಯಾಗಿ ಕರ್ತವ್ಯ ನಿರ್ವಹಿಸದ ಪಿಡಿಒಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಪಂ ಸಿಇಒಗೆ ಸೂಚಿಸಿದರು.
ಜಿಪಂ ಸಿಇಒ ಜಹೇರಾ ನಸೀಮ್ ಮಾತನಾಡಿ, ಗ್ರಾಮೀಣ ಭಾಗದ ಅಭಿವೃದ್ಧಿ ಅಭಿವೃದ್ಧಿ ಅಧಿಕಾರಿಗಳ ಹೊಣೆ ಆಗಿರುತ್ತದೆ. ಸರಕಾರಿ ಶಾಲೆಗಳ ಬಲವರ್ಧನೆಗೆ ಮೊದಲ ಆದ್ಯತೆ ನೀಡಬೇಕು. ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ ಕಾಳಜಿ ವಹಿಸಬೇಕು. ಆದರೆ ಇದುವರೆಗೂ ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ ಪಿಡಿಒಗಳು ಆಸಕ್ತಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕೀರ್ತಿ ಚಾಲಕ್, ತಾಪಂ ಇಒ ದೀಪಿಕಾ ನಾಯ್ಕರ್ ಇದ್ದರು.