Advertisement

ರೈತರ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ

04:31 PM Nov 19, 2022 | Team Udayavani |

ಚಾಮರಾಜನಗರ: ಜಿಲ್ಲೆಯ ರೈತರು, ಜನ ಸಾಮಾನ್ಯರ ಸಮಸ್ಯೆ ಆಶೋತ್ತರಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ನಿರ್ಲಕ್ಷ್ಯ ಧೋರಣೆ ತೋರಿದರೆ ಸಹಿಸುವುದಿಲ್ಲ ಎಂದು ವಸತಿ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ, ರೈತರಿಗೆ ಸಂಬಂಧಿಸಿದ ವಿಷಯಗಳು, ಕೆರೆಗಳಿಗೆ ನೀರು ತುಂಬಿಸುವ ಸಂಬಂಧ ರೈತ ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರ ಅನುಕೂಲಕ್ಕಾಗಿ ಇರುವ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಲೋಪವಾದರೆ ಕ್ರಮ ಜರುಗಿಸ ಬೇಕಾಗುತ್ತದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.

ಬೆಂಗಳೂರಿಗೆ ಬನ್ನಿ: ಕರ ನಿರಾಕರಣೆ ಸಂಬಂಧ ವಿದ್ಯುತ್‌ ಬಾಕಿ ಮನ್ನಾ ಮಾಡುವ ಸಂಬಂಧ ಸಚಿವ ಸಂಪುಟದ ಮುಂದೆ ತರುವ ನಿಟ್ಟಿನಲ್ಲಿ ಸೋಮವಾರ ಇಲ್ಲವೇ ಮಂಗಳ ವಾರವೇ ಅಧಿಕಾರಿಗಳು ಬೆಂಗಳೂರಿಗೆ ಬಂದು ಅಗತ್ಯ ಪ್ರಕ್ರಿಯೆ ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಪರಿಹಾರ ಹೆಚ್ಚಿಸಿ: ರೈತ ಮುಖಂಡರು ಮಾತನಾಡಿ, ಅಕ್ರಮ ಗಣಿಗಾರಿಕೆ ತಡೆಯಬೇಕು. ಪರಿಶೀಲನೆಗೆ ಚೆಕ್‌ ಪೋಸ್ಟ್‌ಗಳನ್ನು ತೆರೆಯಬೇಕು. ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ನೀಡುತ್ತಿಲ್ಲ. ಈ ಬಗ್ಗೆ ನಿರ್ದೇಶನ ನೀಡಬೇಕು. ಹಾವು ಕಚ್ಚಿದರೆ ನೀಡಲಾಗುವ ಪರಿಹಾರ ಹೆಚ್ಚಳವಾಗಬೇಕು, ಪರಿಹಾರ ಪಡೆಯಲು ಹಾಲಿ ಇರುವ ನಿಯಮಗಳನ್ನು ಸಡಲಿಕೆ ಮಾಡಬೇಕು ಎಂದು ಹೇಳಿದರು.

ಖರೀದಿ ಕೇಂದ್ರ ತೆರೆಯಿರಿ: ಪ್ರತಿ ಟನ್‌ ಕಬ್ಬಿಗೆ ಹೆಚ್ಚಿನ ಬೆಲೆ ನಿಗದಿ ಮಾಡಬೇಕು, ರಾಗಿ, ಭತ್ತ ಖರೀದಿ ಕೇಂದ್ರ ತೆರೆಯಬೇಕು. ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಪೋಡುಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು. ಹೊರ ಜಿಲ್ಲೆಗಳ ಕಬ್ಬನ್ನು ಇಲ್ಲಿನ ಸಕ್ಕರೆ ಕಾರ್ಖಾ ನೆಯಲ್ಲಿ ಅರೆಯಬಾರದು. ಕಬ್ಬಿಗೆ ಎಫ್ಆರ್‌ಪಿ 500 ರೂ. ಕೊಡಿ ಸಬೇಕು ಎಂಬ ವಿಷಯ ಸಭೆಯಲ್ಲಿ ಪ್ರಸ್ತಾಪಿಸಿದರು.

Advertisement

ವಿದ್ಯುತ್‌ ಕಡಿತ ಬೇಡ: ಎಲ್ಲಾ ಅಹವಾಲು, ಸಮಸ್ಯೆಗಳನ್ನು ಆಲಿಸಿದ ಸಚಿವ ಸೋಮಣ್ಣ ಮಾತನಾಡಿ, ಇಲಾಖೆಗಳು ರೈತರಿಗೆ ಅನುಕೂಲ ಮಾಡಿಕೊಡಬೇಕು. ಯಾವುದೇ ಕಮಿಷನ್‌ ಪಡೆಯಬಾರದು. ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಬೇಕು. ವಾರಕ್ಕೆ ಒಂದು ದಿನ ರೈತರ ಸಭೆ ಕರೆದು ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಹಾಡಿ ಪೋಡುಗಳ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ವಿದ್ಯುತ್‌ ಸಂಪರ್ಕ ಕಡಿತ ಮಾಡಬಾರದು ಎಂದು ಹೇಳಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮಕೈಗೊಳ್ಳಿ: ಜಿಲ್ಲೆಯ ಪ್ರಕೃತಿ ಸಂಪತ್ತು ಲೂಟಿಯಾಗುವುದನ್ನು ತಡೆಯಬೇಕು. ಅಕ್ರಮ ಗಣಿಗಾರಿಕೆಗೆ ಅವಕಾಶವಾಗಬಾರದು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಬೇಕು ಎಂದು ಸಚಿವರು ತಿಳಿಸಿದರು. ಆನೆಮಡುವಿನ ಕೆರೆಗೆ ನೀರು ಹರಿಸಲಾಗುತ್ತದೆ. ಕಬ್ಬು ಬೆಳೆಗಾರರ ಸಮಸ್ಯೆ ತಮಗೆ ಅರಿವಿದೆ. ಈ ಬಗ್ಗೆ ಉನ್ನತ ಮಟ್ಟದಲ್ಲಿ ಗಮನಕ್ಕೆ ತರಲಾಗುವುದು. ರೈತರಿಗೆ ಸಾಗುವಳಿ ಪತ್ರ, ದುರಸ್ತಿ, ಪೋಡು ಇನ್ನಿತರ ಕಂದಾಯ ಇಲಾಖೆಯಿಂದ ಆಗಬೇಕಿರುವ ಕೆಲಸಗಳಿಗೆ ತ್ವರಿತವಾಗಿ ಕ್ರಮವಹಿಸಲಾಗು ತ್ತದೆ ಎಂದು ಸಚಿವರು ತಿಳಿಸಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎನ್‌.ಮಹೇಶ್‌, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ‌ ಜಿ. ನಿಜಗುಣರಾಜು, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಕುಲಕರ್ಣಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶಂಕರೇಗೌಡ, ಹಿರಿಯ ಅರಣ್ಯ ಅಧಿಕಾರಿಗಳಾದ ಡಾ. ಸಂತೋಷ್‌ ಕುಮಾರ್‌, ರಮೇಶ್‌ಕುಮಾರ್‌, ದೀಪಾ, ರೈತ ಮುಖಂಡರಾದ ಹೊನ್ನೂರು ಪ್ರಕಾಶ್‌, ಮಹೇಶ್‌ ಪ್ರಭು, ಡಾ.ಗುರುಪ್ರಸಾದ್‌, ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಹೆಗ್ಗವಾಡಿಪುರ ಮಹೇಶ್‌ಕುಮಾರ್‌, ಕಡಬೂರು ಮಂಜುನಾಥ್‌, ಶಾಂತಮಲ್ಲಪ್ಪ, ಶೈಲೇಂದ್ರ, ಮಹದೇವಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next