Advertisement

ರೈತರ ಸಮಸ್ಯೆಗೆ ಸ್ಪಂದಿಸುವೆ: ನಿಖಿಲ್‌

09:48 PM Apr 01, 2019 | Team Udayavani |

ಕೆ.ಆರ್‌.ಪೇಟೆ: ನಮ್ಮ ತಾತ ದೇಶದ ಪ್ರಧಾನಮಂತ್ರಿಗಳಾಗಿ ವಿಶ್ವ ಮೆಚ್ಚುವ ಆಡಳಿತ ನೀಡಿದ್ದಾರೆ. ತಂದೆ 9 ತಿಂಗಳಲ್ಲಿಯೇ ಜನ ಮೆಚ್ಚುವ ಕಾರ್ಯಗಳನ್ನು ಮಾಡಿದ್ದು ನಾನೂ ಸಹ ಅವರಂತೆಯೇ ಜನಸೇವೆ ಮಾಡಲು ತಾವು ನನಗೆ ಅವಕಾಶ ಮಾಡಿಕೊಡಬೇಕು ಎಂದು ಮಂಡ್ಯ ಲೋಕಸಭಾ ಅಭ್ಯರ್ಥಿ ನಿಖಿಲ್‌ ಮನವಿ ಮಾಡಿದರು.

Advertisement

ತಾಲೂಕಿನ ಸಾರಂಗಿ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನನ್ನ ತಂದೆ ಕುಮಾರಸ್ವಾಮಿಯವರು ಕೊಟ್ಟ ಮಾತಿನಂತೆ ರೈತರ ಸಾಲಮನ್ನಾ ಮಾಡಿದ್ದಾರೆ. ರೈತರ ಕುಟುಂಬದಲ್ಲಿ ಹುಟ್ಟಿರುವ ನಾವು ರೈತರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವರಾಗಿದ್ದು, ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಆಶೀರ್ವಾದ ಮಾಡಿದರೆ ನಾನು ತಮ್ಮ ಸೇವೆ ಮಾಡುತ್ತೇನೆಂದರು.

ಅದ್ದೂರಿ ಸ್ವಾಗತ: ಮಂಡ್ಯ ಲೋಕಸಭಾ ಅಭ್ಯರ್ಥಿ ಹಾಗೂ ಸಿಎಂ ಸುಪುತ್ರ ನಿಖಿಲ್‌ ಕುಮಾರಸ್ವಾಮಿ ಚುನಾವಣಾ ಪ್ರಚಾರಕ್ಕೆ ಸಾರಂಗಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಪಕ್ಷದ ಅಭಿಮಾನಿಗಳು ಜೆಸಿಬಿ ಯಂತ್ರಗಳ ಮೇಲಿಂದ ಹೂಮಳೆ ಸುರಿಸಿದರು. ಜೊತೆಗೆ ಮಂಗಳ ವಾದ್ಯ, ಮುತೈದೆಯರಿಂದ ಆರತಿ ಬೆಳಗಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಬೈಕ್‌ ಜಾಥಾನಡೆಸಿದರು.

ಆರು ತಿಂಗಳಲ್ಲಿ ಗ್ರಾಮ ಅಭಿವೃದ್ಧಿ: ಸಾರಂಗಿ ಗ್ರಾಮವನ್ನು ಅಭಿವೃದ್ಧಿ ಮಾಡಿಲ್ಲ ಎಂದು ಗ್ರಾಮಸ್ಥರು ನಿಖಿಲ್‌ರವನ್ನು ಪ್ರಶ್ನಿಸಿರುವ ಬಗ್ಗೆ ಮಾತನಾಡಿದ ಅವರು ನಿಮ್ಮ ಗ್ರಾಮವನ್ನು ಅಭಿವೃದ್ಧಿ ಪಡಿಸುವುದು ನನ್ನ ಹಾಗೂ ಶಾಸಕ ನಾರಾಯಣಗೌಡರ ಜವಾಬ್ದಾರಿಯಾಗಿದ್ದು ಮುಂದಿನ ಆರು ತಿಂಗಳಲ್ಲಿ ಸಾರಂಗಿ ಗ್ರಾಮ ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣಾ ಪ್ರಚಾರದಲ್ಲಿ ಶಾಸಕ ನಾರಾಯಣಗೌಡ, ಜಿಪಂ ಸದಸ್ಯ ಬಿ.ಎಲ್‌.ದೇವರಾಜ್‌, ತಾಪಂ ಸದಸ್ಯರಾದ ಜಾನಕಿರಾಮ್‌, ಮೋಹನ್‌ ಇತರರಿದ್ದರು.

Advertisement

ತರಾಟೆಗೆ ತೆಗೆದುಕೊಂಡ ಮಹಿಳೆ: ನಮ್ಮ ಗ್ರಾಮದಲ್ಲಿ ಜೆಡಿಎಸ್‌ ಮುಖಂಡರ ಜೊತೆಯಲ್ಲಿ ಖುದ್ದು ಪ್ರಚಾರಮಾಡಿ ಜೆಡಿಎಸ್‌ ಪಕ್ಷವನ್ನು ಗೆಲ್ಲಿಸುತ್ತಿದ್ದೇನೆ. ಪಂಚಾಯಿತಿಗಳು ಸೇರಿದಂತೆ ಶಾಸಕರು ಮತ್ತು ಸಂದರಿಗೆ ಹೆಚ್ಚಿನ ಮತಗಳನ್ನು ನೀಡಿದ್ದೇವೆ. ಆದರೆ ನಮ್ಮ ಗ್ರಾಮದ ಮುಖ್ಯ ರಸ್ತೆಗಳು ಇಂದಿಗೂ ಅಭಿವೃದ್ಧಿ ಕಂಡಿಲ್ಲ. ತಾವು ಚುನಾವಣೆಯ ಸಮಯದಲ್ಲಿ ಬಂದು ಪ್ರಚಾರಮಾಡಿ ಮನೆ ಸೇರಿಕೊಳ್ಳುತ್ತೀರಿ.

ಗ್ರಾಮ ಅಭಿವೃದ್ಧಿಯಾಗದಿರುವುದಕ್ಕೆ ನಾವೇನು ಉತ್ತರ ನೀಡಬೇಕು ಎಂದು ನಿಖಿಲ್‌ ಕುಮಾರಸ್ವಾಮಿಯನ್ನು ಗುಂಡಿ ಬಿದ್ದಿರುವ ರಸ್ತೆ ಮತ್ತು ಕೊಳಕು ಚರಂಡಿಸ್ಥಳದಲ್ಲಿಯೆ ಮಹಿಳೆ ತರಾಟೆಗೆ ತೆಗೆದುಕೊಂಡರು. ಆ ಕ್ಷಣದಲ್ಲಿ ಉತ್ತರಿಸಲಾಗದೆ ಅಲ್ಲಿಂದ ಜಾಗ ಖಾಲಿ ಮಾಡಿದ ನಿಖಿಲ್‌, ನಂತರ ಸಭೆಯಲ್ಲಿ ನಾನು ಗ್ರಾಮವನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಪ್ರಶ್ನೆ ಮಾಡದಂತೆ ಮಹಿಳೆಗೆ ಬೆದರಿಕೆ: ಗ್ರಾಮದ ಸಮಸ್ಯೆ ಬಗೆಹರಿಸುವಂತೆ ನಿಖಿಲ್‌ ಕುಮಾರಸ್ವಾಮಿಯನ್ನು ತಡೆದು ನಿಲ್ಲಿಸಿದ್ದ ಮಹಿಳೆಯನ್ನು ನೀನು ಮದುವೆಯಾಗಿರುವುದರಿಂದ ನೀವು ಈ ಗ್ರಾಮದ ಮಗಳಲ್ಲ ಬೇರೆ ಗ್ರಾಮದ ಸೊಸೆ ಇಲ್ಲಿ ಪ್ರಶ್ನೆ ಮಾಡಬಾರದು ಎಂದು ಜೆಡಿಎಸ್‌ ಮುಖಂಡ ದಮ್ಕಿ ಹಾಕಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸ್‌ ಅಧಿಕಾರಿಗಳು ಎಲ್ಲರನ್ನೂ ಸಮಾಧಾನಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next