ಕಲಬುರಗಿ: ದಿನನಿತ್ಯ ನಮ್ಮ ಜೀವನದಲ್ಲಿ ಅವಶ್ಯಕವಿರುವ ಕಾನೂನನ್ನು ಪ್ರತಿಯೊಬ್ಬರೂ ಅರಿತು ಪಾಲಿಸಬೇಕು ಹಾಗೂ ಕಾನೂನನ್ನು ಗೌರವಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ಮಾಣಿಕ್ಯ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ವಿಶ್ವ ಸೇವಾ ಮಿಷನ್ ಸಂಯುಕ್ತಾಶ್ರಯದಲ್ಲಿ ವಿದ್ಯಾನಗರದಲ್ಲಿನ ಪ್ರಿಯದರ್ಶಿನಿ ಬಾಲಕಿಯರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಅರಾಜಕತೆ ಉಂಟಾಗದಿರಲು, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸರಕಾರಗಳು ಕಾನೂನುಗಳನ್ನು ರೂಪಿಸುತ್ತವೆ. ಉದಾಹರಣೆಗೆ ಮಿಲಿಟರಿ ಹಾಗೂ ಪೊಲೀಸರ ಸೇವೆ ಇಲ್ಲದೆ ನಾವು ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಅದೇರೀತಿ ಜೀವನದ ಪ್ರತಿಯೊಂದು ಹಂತದಲ್ಲೂ ಕಾನೂನು ಅವಶ್ಯಕವಾಗಿದೆ. ಮೊದಲು ಕುಟುಂಬದ, ಶಾಲೆಯ, ದೇಶದ ಕಾನೂನುಗಳನ್ನು ಗೌರವಿಸಿದಾಗ ಮಾತ್ರ ನಾವು ಒಬ್ಬ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ವಕೀಲ ವೈಜನಾಥ ಝಳಕಿ ಮಾತನಾಡಿ, ಜಿಲ್ಲಾ ಗ್ರಾಹಕರ ವೇದಿಕೆಗೆ 20 ಲಕ್ಷ ರೂ. ವರೆಗೆ ಪರಿಹಾರಕ್ಕಾಗಿ ದೂರು ದಾಖಲಿಸಬಹುದು ಎಂದರು.
ವಿಶ್ವ ಸೇವಾ ಮಿಷನ್ ಅಧ್ಯಕ್ಷ ವಿಶ್ವನಾಥ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ವಿಧಾನಪರಿಷತ್ ಸದಸ್ಯ ಮಾರುತಿರಾವ ಡಿ.ಮಾಲೆ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲರಾದ ಭಾರತಿ ಸಂಗಾವಿ, ಸಿಂಧೂಮತಿ ಭೋಸ್ಲೆ ವೇದಿಕೆಯಲ್ಲಿದ್ದರು. ಎಸ್.ಉಮಾದೇವಿ ನಿರೂಪಿಸಿದರು, ಸಿಲ್ವಿ ಎಸ್. ದೇಶಮಾನ್ಯೆ ವಂದಿಸಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.