Advertisement

ಸಣ್ಣ ರಾಜ್ಯದಲ್ಲಿ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಿದ ಹೊಸ ಪಕ್ಷ

05:30 PM Mar 02, 2023 | ವಿಷ್ಣುದಾಸ್ ಪಾಟೀಲ್ |

ರಾಷ್ಟ್ರೀಯ ಪಕ್ಷಗಳ ಪ್ರಭಾವದ ನಡುವೆಯೂ ಹೊಸದಾಗಿ ಅಸ್ತಿತ್ವಕ್ಕೆ ಬಂದ ಪ್ರಾದೇಶಿಕ  ಪಕ್ಷಕ್ಕೆ ಜನರ ಮನ್ನಣೆ ಇದೆ ಎನ್ನುವುದನ್ನು ತ್ರಿಪುರಾ ವಿಧಾನ ಸಭಾ ಚುನಾವಣೆಯಲ್ಲಿ ರಾಜ ವಂಶಸ್ಥ ನಾಯಕ 44 ರ ಹರೆಯದ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮಾ ತೋರಿಸಿಕೊಟ್ಟಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಹಲವು ಸಿದ್ದಾಂತಗಳ ಪ್ರಾದೇಶಿಕ ಪಕ್ಷಗಳ ಪೈಕಿ , ರಾಷ್ಟ್ರೀಯ ಪಕ್ಷಗಳ ಪ್ರಭಾವ ಮೀರಿ ಪಕ್ಷ ಕಟ್ಟಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

2019 ರಲ್ಲಿ ತ್ರಿಪುರಾದಲ್ಲಿ ಜನರ ಹಲವು ಬೇಡಿಕೆಗಳಿಗಾಗಿ ಹುಟ್ಟಿಕೊಂಡ ತಿಪ್ರಾ ಮೋಥಾ ಪಕ್ಷ (ತಿಪ್ರಾ ಸ್ಥಳೀಯ ಪ್ರಗತಿಪರ ಪ್ರಾದೇಶಿಕ ಒಕ್ಕೂಟ) ಐದು ವರ್ಷಗಳ ಒಳಗೆ ಗಣನೀಯ ಮತಗಳನ್ನು ಪಡೆದುಕೊಂಡು ವಿಧಾನಸಭೆಯ 60 ಸ್ಥಾನಗಳ ಪೈಕಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಗಮನ ಸೆಳೆದಿದೆ. ತಿಪ್ರಾ ಮೋಥಾ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ 42 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.

ಇಂಡಿಜಿನಸ್ ನ್ಯಾಶನಲಿಸ್ಟ್ ಪಾರ್ಟಿ ಆಫ್ ಟ್ವಿಪ್ರಾ (ಐಎನ್‌ಪಿಟಿ), ಟಿಪ್ರಾಲ್ಯಾಂಡ್ ಸ್ಟೇಟ್ ಪಾರ್ಟಿ (ಟಿಎಸ್‌ಪಿ) ಮತ್ತು ಐಪಿಎಫ್‌ಟಿ (ತಿಪ್ರಾ) 2021 ರಲ್ಲಿ ವಿಲೀನಗೊಂಡ ಬಳಿಕ ತಿಪ್ರಾ ಮೋಥಾ ಬಲವಾದ ಶಕ್ತಿಯಾಗಿ ಹೊರ ಹೊಮ್ಮಿತ್ತು.

ಮೂಲ ಕಾಂಗ್ರೆಸಿಗರಾಗಿದ್ದ ಪ್ರದ್ಯೋತ್ ದೇಬ್ ಬರ್ಮಾ ಅವರು ತ್ರಿಪುರಾ ಜನರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕಿಳಿದರು. ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಪ್ರಭಾವಶಾಲಿ ತನ್ನದೇ ತಿಪ್ರಾ ಮೋಥಾ ಪಕ್ಷ ಸ್ಥಾಪಿಸಿ ವಿಶೇಷವಾಗಿ ಬುಡಕಟ್ಟು ಜನಾಂಗದವರ ಜನರ ಗಮನ ಸೆಳೆದಿದ್ದಾರೆ. ಅದಕ್ಕೂ ಮಿಗಿಲಾಗಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಗಮನವನ್ನು ಸೆಳೆದಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ‘ಗ್ರೇಟರ್ ತಿಪ್ರಾಲ್ಯಾಂಡ್ ಹೊರತುಪಡಿಸಿ ತಿಪ್ರಾ ಮೋಥಾದ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತದೆ’ ಎಂದು ಆಡಳಿತ ಪಕ್ಷ ಬಿಜೆಪಿ ಗುರುವಾರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದೆ. ಮುಖ್ಯಮಂತ್ರಿ, ಬಿಜೆಪಿ ನಾಯಕ ಮಾಣಿಕ್ ಸಾಹಾ ಅವರ ಆಡಳಿತಕ್ಕೆ ಬಹುಮತ ದೊರಕಿದ್ದು, ಮತ್ತೆ ಅಧಿಕಾರ ಹಿಡಿಯಲಿದೆ.

2018 ರಲ್ಲಿ ಐಪಿಎಫ್ ಟಿ ಮತ್ತು ಬಿಜೆಪಿ ಮೈತ್ರಿಕೂಟ ವಿಜಯಶಾಲಿಯಾಗಿದ್ದವು ಆದರೆ ಬುಡಕಟ್ಟು ಪಕ್ಷ ಐಪಿಎಫ್ ಟಿ ಜನರ ಬೇಡಿಕೆಗಳನ್ನು ಪೂರೈಸಲು ವಿಫಲವಾಯಿತು ಮತ್ತು ಅದು ದೇಬ್ ಬರ್ಮಾ ಪಾಲಿಗೆ ಬಾಗಿಲು ತೆರೆಯಿತು. ದೇಬ್ ಬರ್ಮಾ  2021 ರಲ್ಲಿ ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪ್ರಮುಖ ಪಕ್ಷಗಳಿಗೆ ಎಚ್ಚರಿಕೆಯ ಹೊಡೆತವನ್ನು ಬಾರಿಸಿದ್ದರು.

Advertisement

ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ರಾಜ್ಯದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಒಳಗೊಂಡಿದೆ ಮತ್ತು ಅದರ ಜನಸಂಖ್ಯೆಯ ಶೇಕಡಾ 90 ರಷ್ಟು ಬುಡಕಟ್ಟು ಜನಾಂಗದವರು. ತಿಪ್ರಾ 18 ಸ್ಥಾನ, ಬಿಜೆಪಿ 10 ಮತ್ತು ಐಪಿಎಫ್‌ಟಿ ಶೂನ್ಯ ಸ್ಥಾನ ಪಡೆದಿದ್ದವು.

ತ್ರಿಪುರಿ ರಾಷ್ಟ್ರೀಯತೆ, ಗ್ರೇಟರ್ ತಿಪ್ರಾಲ್ಯಾಂಡ್, ಎನ್ ಆರ್ ಸಿ ಪರ,ಸಿಎಎ ವಿರೋಧಿ, ವಲಸೆ ವಿರೋಧಿ ಮತ್ತು ಪ್ರಾದೇಶಿಕತೆಯ ಪರವಾದ ಬಲವಾದ ಧ್ವನಿಯಾಗಿ ತಿಪ್ರಾ ಮೋಥಾ ಪಕ್ಷದ ಸಿದ್ದಾಂತಗಳನ್ನಾಗಿಸಿಕೊಂಡು ಬಿಜೆಪಿ ಮೈತ್ರಿಕೂಟ ಮತ್ತು ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ಹೋರಾಟ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next