Advertisement

ಮನೆಗೆ ನುಗ್ಗಿದ ಚರಂಡಿ ನೀರು: ಜನಜೀವನ ಅಸ್ತವ್ಯಸ್ತ

04:32 PM Sep 15, 2018 | Team Udayavani |

ಬಳ್ಳಾರಿ: ಮಹಾನಗರ ಪಾಲಿಕೆಯ ಹಾಲಿ ಮೇಯರ್‌ ಮತ್ತು ಮಾಜಿ ಉಪಮೇಯರ್‌ ಪ್ರತಿನಿಧಿಸಿರುವ 6 ಮತ್ತು 7ನೇ ವಾರ್ಡನಲ್ಲಿ ತೆರೆದ ಚರಂಡಿಯ ಕೊಚ್ಚೆ ನೀರು ಮನೆಗಳಿಗೆ ನುಗ್ಗಿದ್ದು, ಜನಜೀವನ ಅಸ್ತವ್ಯವಸ್ಥಗೊಂಡಿದೆ. ಸಮಸ್ಯೆ ಇತ್ಯರ್ಥ ಪಡಿಸುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಕೇಳಿದರೆ, “ನಾನು ಬಂದು ಕೆಲಸ ಮಾಡಬೇಕಾ?’ ಎಂಬ ಬೇಜವಾಬ್ದಾರಿಯ ಮರುಪ್ರಶ್ನೆ ಸ್ಥಳೀಯ ನಿವಾಸಿಗಳನ್ನು ಕೆರಳಿಸಿದೆ.

Advertisement

ನಗರದ ಚಲುವಾದಿ ಬೀದಿಯ ಮಂಡಾಳಬಟ್ಟಿ ಓಣಿಯಲ್ಲಿ ಹಾದು ಹೋಗಿರುವ ರಾಜಾ (ತೆರೆದ ಚರಂಡಿ) ಕಾಲುವೆಯಿಂದ ಸಮಸ್ಯೆ ಎದುರಾಗಿರುವ ಪ್ರದೇಶ 6ನೇ ವಾರ್ಡ್‌ ಪ್ರತಿನಿಧಿಸಿರುವ ಪಾಲಿಕೆ ಹಾಲಿ ಮೇಯರ್‌ ಆರ್‌. ಸುಶೀಲಾಬಾಯಿ ಹಾಗೂ 7ನೇ ವಾರ್ಡ್‌ ಪ್ರತಿನಿಧಿ ಸಿರುವ ಮಾಜಿ ಉಪಮೇಯರ್‌ ಉಮಾದೇವಿ ಅವರ ವ್ಯಾಪ್ತಿಗೆ ಬರುತ್ತದೆ. ಶುಕ್ರವಾರ ಬೆಳಗ್ಗೆ 8:30ರ ಸುಮಾರು 8 ಮನೆಗಳಿಗೆ ಕೊಚ್ಚೆ ನೀರು ನುಗ್ಗಿದ್ದು, ನಿವಾಸಿಗಳೆಲ್ಲ ಮನೆಯ ಹೊರಗಡೆಯೇ ಕಾಲಕಳೆಯುವಂತೆ ಮಾಡಿದೆ.
 
ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಪರಿಹರಿಸುವಂತೆ ಸ್ಥಳೀಯ ನಿವಾಸಿಗಳು ಮೇಯರ್‌ ಸುಶೀಲಾಬಾಯಿ ಅವರ ಪತಿ
ಡಿ.ಸೂರಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದರೂ, ಎಚ್ಚೆತ್ತುಕೊಂಡಿಲ್ಲ. ಮೇಲಾಗಿ ಕೂಗಳತೆ ದೂರದಲ್ಲೇ
ಮೇಯರ್‌ ಮನೆ ಇದ್ದರೂ, ಸ್ಥಳಕ್ಕೂ ಆಗಮಿಸಿಲ್ಲ. ಮಧ್ಯಾಹ್ನ 1 ಗಂಟೆಯಾದರೂ, ಪಾಲಿಕೆಯಿಂದ ಯಾವ ಸಿಬ್ಬಂದಿಯೂ
ಬಂದು ಸಮಸ್ಯೆ ಬಗೆಹರಿಸಿಲ್ಲ. ದೂರವಾಣಿ ಮೂಲಕ ಸಂಪರ್ಕಿಸಿದರೂ ಸಂಬಂಧಪಟ್ಟ ಜನಪ್ರತಿನಿ ಧಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದರೂ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿಗಳು. 

ಏಕೆ ಈ ಸಮಸ್ಯೆ: 6,7ನೇ ವಾರ್ಡ್‌ನಲ್ಲಿ ಹಾದು ಹೋಗಿರುವ ರಾಜಾ (ತೆರೆದ ಚರಂಡಿ) ಕಾಲುವೆಯಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯ (ಶಿಲ್ಟ್) ವನ್ನು ತೆರವುಗೊಳಿಸಿಲ್ಲ. ಇದರಿಂದ ಕಾಲುವೆಯಲ್ಲಿ ಶಿಲ್ಟ್ ಸೇರಿ ತ್ಯಾಜ್ಯವಸ್ತುಗಳ ಪ್ರಮಾಣ ಅಧಿಕವಾಗಿದೆ. ಮೇಲಾಗಿ ಸ್ಥಳೀಯ ಅಕ್ಕಪಕ್ಕದ ನಿವಾಸಿಗಳು ಸಹ ಕಸ ಸೇರಿ ಮನೆಯಲ್ಲಿ ಬಳಸದ ಎಲ್ಲ ವಿಧದ ವಸ್ತುಗಳನ್ನು ಕಾಲುವೆಗೆ ಎಸೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಕಾಲುವೆಯಲ್ಲಿ ಕೊಚ್ಚೆ ನೀರು ಸರಾಗವಾಗಿ ಮುಂದಕ್ಕೆ ಹರಿಯುತ್ತಿಲ್ಲ. ತ್ಯಾಜ್ಯವನ್ನೆಲ್ಲ ಒಂದೆಡೆ ಹಿಡಿದು ಬ್ಲಾಕ್‌ ಆಗಿದ್ದು, ಕಾಲುವೆಯಲ್ಲಿ ಕೊಚ್ಚೆ ನೀರು ಹೆಚ್ಚಾಗಿ ಪಕ್ಕದ ಮನೆಗಳಿಗೆ ನುಗ್ಗಲು ಕಾರಣವಾಗುತ್ತಿದೆ. ನಿತ್ಯ ಹುಳ ಸೇರಿ ವಿಷಜಂತುಗಳ ಕಾಲ ಅಧಿಕವಾಗಿದೆ.
ಮಕ್ಕಳು ಸೇರಿ ಮಹಿಳೆಯರು ಸಹ ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ.

ವಾರ್ಡ್‌ನಲ್ಲಿರುವ ರಾಜ ಕಾಲುವೆಯಲ್ಲಿನ ತ್ಯಾಜ್ಯವನ್ನು ವರ್ಷಕ್ಕೆ ಒಂದುಬಾರಿಯಂತೆ ತೆಗೆಯುತ್ತಾರೆ. ಪಾಲಿಕೆಯಿಂದ ಸರಿಯಾದ ನಿರ್ವಾಹಣೆಯಿಲ್ಲ. ಈ ಬಗ್ಗೆ ಅನೇಕ ಬಾರಿ ಪಾಲಿಕೆ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಪಾಲಿಕೆ ವಿರುದ್ಧ ಸ್ಥಳೀಯ ನಿವಾಸಿಗಳಾದ ದಾದಾ ಖಲಂದರ್‌, ಖಲೀಲ್‌, ಹನೀಫ್‌, ಶೇಖಮ್ಮ, ಹಸೀನಾ, ಸಪ್ರಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಕಾಲುವೆಯಿಂದ ಚರಂಡಿ ನೀರು ಮನೆಗಳಿಗೆ ನುಗ್ಗಿರುವ ಬಗ್ಗೆ ಮಾಹಿತಿ ಇದ್ದು, ಪರಿಶೀಲಿಸಲಾಗಿದೆ. ಮನೆಗಳಿಗೆ ನುಗ್ಗಿದ್ದ ಚರಂಡಿ ನೀರನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಶನಿವಾರ ಬೆಳಗ್ಗೆ ಮತ್ತಷ್ಟು ಪೌರ ಕಾರ್ಮಿಕರನ್ನು ನಿಯೋಜಿಸಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು. ಜತೆಗೆ ಸೋಮವಾರ ಪಾಲಿಕೆ ಆಯುಕ್ತರೊಂದಿಗೆ ಜಿಲ್ಲಾಧಿಕಾರಿಗಳನ್ನು ವಾರ್ಡ್‌ಗೆ ಕರೆಸಿ ಸಮಸ್ಯೆ ಪರಿಶೀಲಿಸಲಾಗುವುದು. ಕಾಲುವೆಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ತೆರವುಗೊಳಿಸಲು ಅನುಕೂಲವಾಗುವಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
 ಆರ್‌.ಸುಶೀಲಾಬಾಯಿ, ಪಾಲಿಕೆ ಮೇಯರ್‌, ಬಳ್ಳಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next