ಮೈಸೂರು: ಸಾಹಿತ್ಯ ನಿಂತ ನೀರಲ್ಲ. ಅದು ಹರಿಯುವ ಜೀವನದಿ ಇದ್ದಂತೆ ಎಂದು ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಸಾಹಿತಿ ಡಾ.ಎಸ್.ಪಿ. ಉಮಾದೇವಿ ಹೇಳಿದರು.
ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಜಾಣ-ಜಾಣೆಯರ ಬಳಗವು ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಸಾಹಿತಿಯೊಂದಿಗೆ ಸಂವಾದ’ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಇರುತ್ತದೆ. ಅದನ್ನು ಅಭಿವ್ಯಕ್ತಿಸುವ ಕಲೆ ಮತ್ತು ವಿಧಾನವನ್ನು ರೂಢಿಸಿಕೊಳ್ಳಬೇಕು. ನಮ್ಮ ಸಂಸ್ಕೃತಿ, ನಮ್ಮ ಭಾಷೆ ಸೃಜನಶೀಲತೆಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ಅನೇಕ ದೇಶಗಳನ್ನು ನೋಡಿ ಬಂದಿದ್ದರೂ ನಮ್ಮ ಸಂಸ್ಕೃತಿಯಂತಹ ಶ್ರೀಮಂತಿಕೆ ಬೇರೆಲ್ಲೂ ನನಗೆ ಕಾಣಿಸಲಿಲ್ಲ. ಆದ್ದರಿಂದ ನಮ್ಮ ಸಂಸ್ಕೃತಿ ಮತ್ತು ನಮ್ಮ ಭಾಷೆಯನ್ನು ಗೌರವಿಸಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪೊ›.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಒಬ್ಬ ಲೇಖಕ ಅಥವಾ ಲೇಖಕಿಯೊಂದಿಗೆ ಚರ್ಚಿಸುವುದೆಂದರೆ ಹೆಚ್ಚು ಕಡಿಮೆ ಅವರ ಎಲ್ಲಾ ಕೃತಿಗಳ ಒಂದು ಸಾರವನ್ನು ನೀವು ಗ್ರಹಿಸಿದಂತೆಯೇ. ಅದರ ಜೊತೆಗೆ ಅವರ ಸಾಹಿತ್ಯವನ್ನು ಪ್ರಸ್ತುತತೆಗೆ ಮುಖಾಮುಖೀಯಾಗಿಸಿ ನೋಡುವ, ವಿಮರ್ಶಿಸುವ ಕೆಲಸವೂ ಸಾಗುತ್ತದೆ.
ಉಮಾದೇವಿಯವರು ಪಂಥಾತೀತವಾಗಿ ಸಾಹಿತ್ಯ ರಚಿಸುತ್ತಾ, ಸಮಾಜದ ಏಳ್ಗೆಗೆ ಸ್ತ್ರೀ ಪುರುಷರ ಕೊಡುಗೆಯನ್ನು ಸಮಾನವಾಗಿ ಕಂಡು ಅಭಿವ್ಯಕ್ತಿಸುತ್ತಾ ಬರುತ್ತಿದ್ದಾರೆ. ಮಹಿಳಾ ಸಾಹಿತ್ಯವೂ ಇಂದು ಉತ್ಕೃಷ್ಟವಾಗಿ ಬೆಳೆಯುತ್ತಿದೆ. ಹೆಣ್ಣು ಮಕ್ಕಳು ಇಂದು ಹೆಚ್ಚಿನ ಮಟ್ಟದ ಶಿಕ್ಷಣ ಪಡೆಯುತ್ತಿರುವುದರಿಂದ ಅವರು ಅಭಿವ್ಯಕ್ತಿ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಪೊ›.ಎಂ. ಮಹದೇವಪ್ಪ ಉಪಸ್ಥಿತರಿದ್ದರು.