Advertisement

ಹಿರಿಯರನ್ನು ಗೌರವದಿಂದ ಕಾಣಿ: ಸತೀಶ್‌

05:49 PM Oct 02, 2021 | Team Udayavani |

ರಾಯಚೂರು: ಹಿರಿಯರ ಅನುಭವದ ನುಡಿಗಳೇ ಯುವಪೀಳಿಗೆಗೆ ಗುಣಪಾಠವಾಗಿದ್ದು, ಅವರ ಮಾರ್ಗದರ್ಶನದಲ್ಲಿ ಉತ್ತಮ ಸಮಾಜ ಕಟ್ಟಲು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಬಿ.ಸಿ.ಸತೀಶ್‌ ಹೇಳಿದರು.

Advertisement

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿರಿಯರ ಮಾತು ಕೇಳಿದವರು ಜೀವನದಲ್ಲಿ ಉತ್ತಮ ಸಾಧನೆ ಮಾಡಬಲ್ಲರು. ಹಿರಿಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಮೌಲ್ಯಗಳು, ಸಂಸ್ಕಾರದ ಬಗ್ಗೆ ಕೇಳಿ ತಿಳಿಯಬೇಕು. ಅವರ ಜೀವನದ ಶಿಸ್ತು ನೋಡಿ ಕಲಿಯಬೇಕು. ಅದುವೇ ನಮಗೆಲ್ಲ ದಾರಿದೀಪವಾಗಲಿದೆ ಎಂದರು. ಇಂದು ಸಾಕಷ್ಟು ಮನೆಯಲ್ಲಿ ಹಿರಿಯರನ್ನು ಅಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ.

ಅದು ಸರಿಯಲ್ಲ. ಅವರು ಕಷ್ಟಪಟ್ಟು ಬೆಳೆಸಿ, ವಿದ್ಯಾವಂತರನ್ನಾಗಿ ಮಾಡಿರುತ್ತಾರೆ. ಅವರ ಮುಪ್ಪಿನ ಕಾಲದಲ್ಲಿ ಗೌರವದಿಂದ ನಡೆಸಿಕೊಳ್ಳುವುದು ಸಭ್ಯ ಸಮಾಜದ ಕರ್ತವ್ಯವಾಗಿದೆ. ಒಂದು ವೇಳೆ ಅವರನ್ನು ಗೌರವ ಪೂರ್ವಕವಾಗಿ ನಡೆಸಿಕೊಳ್ಳದಿದ್ದರೆ ಅಂಥವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ. ಹಿರಿಯರು ನೀವು ಬದುಕಿರುವವರೆಗೂ ನಿಮ್ಮ ಮಕ್ಕಳ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಬೇಡಿ ಎಂದು ಸಲಹೆ ನೀಡಿದರು.

ಜಿಲ್ಲೆಯ ಹಿರಿಯ ನಾಗರಿಕರು ಕೋವಿಡ್‌-19ರ ಮೊದಲ ಮತ್ತು ಎರಡನೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್‌ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಬೇಕು. ರಾಯಚೂರು ನಗರ ಸ್ವಚ್ಛತೆಯಿಂದ ಇರಲು ಎಲ್ಲರ ಸಹಕಾರ ಅಗತ್ಯವಾಗಿದೆ. ಸಾರ್ವಜನಿಕರು ತಮ್ಮ ಮನೆಗಳ ಮುಂದೆ ಸಸಿಗಳನ್ನು ನೆಡುವ ಮೂಲಕ ಪರಿಸರ ಬೆಳೆಸಬೇಕು. ಪ್ಲಾಸ್ಟಿಕ್‌ ನಿಷೇಧವಿದ್ದು, ಪ್ಲಾಸ್ಟಿಕ್‌ ಗಳನ್ನು ಯಾರು ಬಳಸಬಾರದು ಎಂದರು.

Advertisement

ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿಭಾಗದಲ್ಲಿ ಅಜೀಜಾ ಸುಲ್ತಾನ, ಶಿಕ್ಷಣ ವಿಭಾಗದಿಂದ ದಾನಮ್ಮ ಬಿ.ಸುಭಾಶ್ಚಂದ್ರ, ಕಂದಾಯ ಇಲಾಖೆಯ ವಿಭಾಗದಲ್ಲಿ ಜಿ.ಡೇವಿಡ್‌, ಪೊಲೀಸ್‌ ಇಲಾಖೆಯಿಂದ ನಿವೃತ್ತ ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಮಣ್ಣ, ಉನ್ಯಾಸಕರ ವಿಭಾಗದಿಂದ ಮಹಾದೇವಪ್ಪ ಏಗನೂರು, ಜಿಲ್ಲಾ ಹಿರಿಯ ನಾಗರಿಕರ ಮತ್ತು ಸಬಲೀಕರಣ ಇಲಾಖೆಯ ಪ್ರಭಾರಿಯಾಗಿ ಸೇವೆ ಸಲ್ಲಿಸಿದ ಶೇಖ್‌ ಅಸ್ರರ್‌ ಹುಸೇನ್‌ ಅವರನ್ನು ಗೌರವಿಸಲಾಯಿತು. ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿ ಕಾರಿ ಶರಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೀರನಗೌಡ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next