Advertisement

ಹಣ-ಅಧಿಕಾರಕ್ಕೆ ಗೌರವ: ನ್ಯಾ|ಹೆಗ್ಡೆ ವಿಷಾದ

01:00 AM Mar 19, 2019 | Harsha Rao |

ಉಡುಪಿ: ಜೀವನದಲ್ಲಿ ತೃಪ್ತಿ ಮತ್ತು ಮಾನವೀಯ ಗುಣವನ್ನು ಹೊಂದಿರಬೇಕಾದ ಅಗತ್ಯವಿದೆ. ಆದರೆ ಈಗ ಹಣ ಮತ್ತು ಅಧಿಕಾರಕ್ಕೆ ಹೆಚ್ಚಿನ ಗೌರವ ದೊರಕುತ್ತಿದೆ ಎಂದು ಮಾಜಿ ಲೋಕಾಯುಕ್ತ ನ್ಯಾ| ಎನ್‌. ಸಂತೋಷ್‌ ಹೆಗ್ಡೆ ಖೇದ ವ್ಯಕ್ತಪಡಿಸಿದರು.

Advertisement

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ (ಕೆಎಸ್‌ಎಲ್‌ಯು) ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ (ವಿಬಿಸಿಎಲ್‌)ದಲ್ಲಿ ಸೋಮವಾರ ಏರ್ಪ ಡಿಸಿದ ವಿ.ವಿ. ದಶಮಾನೋತ್ಸವ ಉಪನ್ಯಾಸವನ್ನು “ಸಾಮಾಜಿಕ ಮೌಲ್ಯಗಳ ಅಧಃಪತನ ಮತ್ತು ಅದರ ಪರಿಣಾಮ’ ವಿಷಯದ ಕುರಿತು ನೀಡಿದ ಅವರು, ಸಮಾಜದ ಬಗ್ಗೆ ನಾವು ಕಲ್ಪಿಸಿಕೊಳ್ಳುವುದು ಬೇರೆ, ವಾಸ್ತವವೇ ಬೇರೆ ಎನ್ನುವುದು ಲೋಕಾಯುಕ್ತ ನಾದ ಬಳಿಕ ತಿಳಿದುಬಂತು ಎಂದರು.

ಮೊದಲು ಶಾಸಕಾಂಗದ ವೈಫ‌ಲ್ಯಗಳನ್ನು ಬಿಚ್ಚಿಟ್ಟ ಹೆಗ್ಡೆಯವರು, 1952ರಲ್ಲಿ ಜೀಪು ಹಗರಣ ನಡೆದಿತ್ತು. ಅದರ ಮೊತ್ತ 52 ಲ.ರೂ. ಅನಂತರ ಈಗಿನ ವರೆಗೆ ಅನೇಕ ಹಗರಣಗಳು ನಡೆದಿವೆ. ಕಾಮನ್‌ವೆಲ್ತ್‌ ಹಗರಣ ದಲ್ಲಿ 70,000 ಕೋ.ರೂ., 2ಜಿ ಹಗರಣದಲ್ಲಿ 1.76 ಲ.ಕೋ.ರೂ. ಸರಕಾರಕ್ಕೆ ನಷ್ಟವಾಗಿದೆ ಎಂದರು.

ಜನಪ್ರತಿನಿಧಿಗಳ ಕೊಡುಗೆ ಏನು?
2004-2009ರ ವರೆಗಿನ ವರದಿ ಪ್ರಕಾರ 543 ಸಂಸದರ ಪೈಕಿ 174 ಸಂಸದರು ಒಂದೊಂದು ಪ್ರಶ್ನೆ ಕೇಳಿದ್ದರು. ಬೆಳಗಾವಿ ಅಧಿವೇಶನದಲ್ಲಿ ಮೊದಲ ದಿನ 224 ಸದಸ್ಯರ ಪೈಕಿ 22 ಮಂದಿ ಹಾಜರಾಗಿದ್ದರು. ಇಂತಹ ಸಂಸದರು, ಶಾಸಕರಿಗಾಗಿ ಇಷ್ಟೊಂದು ಖರ್ಚು ಏಕೆ ಮಾಡಬೇಕು? ತಿಂಗಳ ವೇತನ ವನ್ನೂ ಅಧಿವೇಶನದಲ್ಲಿ ಪಾಲ್ಗೊಂಡಿರುವುದಕ್ಕೆ ಸಿಟ್ಟಿಂಗ್‌ ಫೀಸ್‌ ಎರಡನ್ನೂ ಪಡೆಯುವ ಏಕೈಕ ಹುದ್ದೆ ಇದಾಗಿದೆ. ಆದರೆ ಇವರ ಕೊಡುಗೆ ದೇಶಕ್ಕೆ, ಸಮಾಜಕ್ಕೆ ಏನು ಎಂದು ಹೆಗ್ಡೆ ಪ್ರಶ್ನಿಸಿದರು.

ಜಿಎಸ್‌ಟಿಗೆ ಇಬ್ಬರಿಂದಲೂ ವಿರೋಧ
ಜಿಎಸ್‌ಟಿ ಕಾಯಿದೆಯನ್ನು ಯುಪಿಎ ಸರಕಾರ ತರುವಾಗ ಎನ್‌ಡಿಎ ವಿರೋಧಿಸಿತು. ಎನ್‌ಡಿಎ ಸರಕಾರ ತರುವಾಗ ಯುಪಿಎ ವಿರೋಧಿಸಿತು. ಈಗ ಕೇಂದ್ರ ಮತ್ತು ರಾಜ್ಯ ಜಿಎಸ್‌ಟಿ ಎಂಬ ಎರಡು ಬಗೆಗಳಿವೆ ಎಂದರು.ರಾಜ್ಯ ಲೋಕಸೇವಾ ಆಯೋಗಕ್ಕೆ ನೇಮಕಗೊಳ್ಳುವಾಗ ಭ್ರಷ್ಟಾಚಾರದ ಮಾತುಗಳು ಕೇಳಿಬರುತ್ತಿದ್ದವು. ನ್ಯಾಯಾಂಗವೂ ಇದಕ್ಕೆ ಹೊರತಾಗಿಲ್ಲ. ಸರ್ವೋಚ್ಚ ನ್ಯಾಯಾಲಯದ ನಾಲ್ವರು ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿದ್ದನ್ನು ನೆನಪಿಸಬಹುದು ಎಂದು ಹೆಗ್ಡೆ ತಿಳಿಸಿದರು. 

Advertisement

ಜೈಲಿನಲ್ಲಿದ್ದವರಿಗೂ ಹಾರ
ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ವಾಗಿ ಯುವ ಶಕ್ತಿ ಮುಂದೆ ಬರಬೇಕು. ನಾವು ಚಿಕ್ಕಪ್ರಾಯ ದಲ್ಲಿರುವಾಗ ಜನರು ಮೌಲ್ಯಗಳಿಗೆ ಬೆಲೆ ಕೊಡುತ್ತಿದ್ದರು. ಈಗ ಹಣ ಮತ್ತು ಅಧಿಕಾರಕ್ಕೆ ಬೆಲೆ ಕೊಡುವುದು ಕಂಡು ಬರುತ್ತಿದೆ. ಜೈಲಿನಲ್ಲಿದ್ದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಗುತ್ತದೆ, ಅಂಥವರನ್ನು ಹಾರ ಹಾಕಿ ಸ್ವಾಗತಿಸಲಾಗುತ್ತದೆ ಎಂದು ಹೆಗ್ಡೆ ವಿಷಾದ ವ್ಯಕ್ತಪಡಿಸಿದರು. 

ಕೆಎಸ್‌ಎಲ್‌ಯು ಕುಲಪತಿ ಡಾ| ಈಶ್ವರ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ| ಪ್ರಕಾಶ ಕಣಿವೆ ಸ್ವಾಗತಿಸಿದರು. ರಚನಾ ಶೆಟ್ಟಿ, ಆರ್‌.ಕೆ. ವರ್ಷಾ ಅತಿಥಿ ಪರಿಚಯಸಿದರು. ಆಲ್ಡಿ†ನ್‌ ಪೌಲ್‌ ವಂದಿಸಿದರು. ಜೋನೆ ವೆನೆಸಾ ಡಿ’ಸಿಲ್ವ ನಿರ್ವಹಿಸಿದರು.

ಪ್ರತ್ಯೇಕ ರಾಜ್ಯದ  ಕೂಗು ಲಘುವಲ್ಲ
ಮುಖ್ಯಮಂತ್ರಿಯವರು “ನೀವು ನಮ್ಮನ್ನು ಆರಿಸದೆ ಇದ್ದಾಗ ನಿಮಗೇಕೆ ಪ್ರಾಶಸ್ತ್ಯ ಕೊಡಬೇಕು’ ಎಂದು ಉತ್ತರ ಕರ್ನಾಟಕದವರನ್ನು ಉದ್ದೇಶಿಸಿ ಹೇಳಿದ ಎರಡೇ ದಿನಗಳಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿಸಿತು. ಮುಖ್ಯಮಂತ್ರಿ, ಸಚಿವರು ಮಾತನಾಡುವಾಗ ಜಾಗರೂಕತೆ ವಹಿಸಬೇಕು. ಕೊಡಗಿನಲ್ಲಿ, ಕರಾವಳಿಯಲ್ಲಿ ತುಳುನಾಡು, ಹೈದರಾಬಾದ್‌ ಕರ್ನಾಟಕದ ಭಾಗದಲ್ಲಿ ಪ್ರತ್ಯೇಕ ರಾಜ್ಯದ ಧ್ವನಿ ಕೇಳಿಬರುತ್ತಿದೆ. ಒಟ್ಟಾರೆ ಪ್ರತ್ಯೇಕ ರಾಜ್ಯದ ಕೂಗು ಮುಗಿಯಿತೆಂದರ್ಥವಲ್ಲ ಎಂದು ನ್ಯಾ| ಹೆಗ್ಡೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next