ಬೆಂಗಳೂರು: ಅತಂತ್ರ ಫಲಿತಾಂಶ ಬಂದಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಆರಂಭವಾಗಿದೆ.ಆಪರೇಷನ್ ಕಮಲ ನಡೆಯುವ ಭೀತಿಯಲ್ಲಿ ಕಾಂಗ್ರೆಸ್ ಎಲ್ಲಾ 78 ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುತ್ತಿದೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಸಭೆ ನಡೆದಿದ್ದು, ಶಾಸಕರ ಸಹಿ ಪಡೆದು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಪಡೆಯಲಾಗಿದೆ.
ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರ ನೇತೃತ್ವದಲ್ಲಿ ಶಾಸಕರನ್ನು ರಾಮನಗರದ ಈಗಲ್‌ಟನ್ ರೆಸಾರ್ಟ್‌ಗೆ ಕರೆದೊಯ್ಯಲಾಗುತ್ತಿದೆ.
ಕೆಪಿಸಿಸಿ ಕಚೇರಿ ಎದುರು ಶಾಸಕರು ರೆಸಾರ್ಟ್‌ಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದೆ. ಕೆಲ ಶಾಸಕರು ತಮ್ಮ ಬ್ಯಾಗ್‌ಗಳ ಸಮೇತ ರೆಸಾರ್ಟ್‌ನತ್ತ ಹೊರಟಿದ್ದಾರೆ.
ಕಾಂಗ್ರೆಸ್‌ನ ಶಾಸಕರು ರಾಜ್ಯಪಾಲ ವಜುಭಾಯಿವಾಲಾ ಅವರ ಎದುರು ಪರೇಡ್ ನಡೆಸಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿ ಸರ್ಕಾರ ರಚನೆಗೆ ಅವಕಾಶ ಕೋರಲಿದ್ದಾರೆ. ಶಾಸಕರ ಸಹಿ ಇರುವ ಪತ್ರವನ್ನು ರಾಜ್ಯ ಪಾಲರಿಗೆ ಇದೇ ವೇಳೆ ನೀಡಲಿದ್ದಾರೆ. ಈ ವೇಳೆ ಕುಮಾರಸ್ವಾಮಿ ಅವರೂ ಜೆಡಿಎಸ್ ಶಾಸಕರ ಬೆಂಬಲದ ಸಹಿ ಇರುವ ಪತ್ರವನ್ನು ರಾಜ್ಯಪಾಲರಿಗೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
6 ಶಾಸಕರು ಗೈರು !
ಶಾಸಕಾಂಗ ಸಭೆಗೆ 6 ಮಂದಿ ಶಾಸಕರು ಗೈರಾಗಿದ್ದು, ಆಪೈಕಿ ಸತೀಶ್ ಜಾರಕೀಹೊಳಿ,ರಮೇಶ್ ಜಾರಕೀಹೊಳಿ, ನಾಗೇಂದ್ರ ಮತ್ತು ಆನಂದ್ ಸಿಂಗ್. ವಿಮಾನ ವ್ಯವಸ್ಥೆ ಸರಿಯಾಗದ ಕಾರಣ ಬರುವುದಕ್ಕೆ ಆಗಲಿಲ್ಲ ಎಂದು ಸ್ಪಷ್ಟ ಪಡಿಸಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿದ್ದು, ಈ ಶಾಸಕರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ , ಆಪರೇಷನ್‌ಗೆ ಸಿಲುಕುವುದಿಲ್ಲ ಎಂದಿದ್ದಾರೆ.