Advertisement

ಶಾಸಕರ ರಾಜೀನಾಮೆ ಪರ್ವ ಆರಂಭ

09:39 PM Jul 01, 2019 | Lakshmi GovindaRaj |

ಮೈಸೂರು: ಆನಂದ್‌ಸಿಂಗ್‌ ರಾಜೀನಾಮೆಯೊಂದಿಗೆ ಶಾಸಕರ ರಾಜೀನಾಮೆ ಪರ್ವ ಶುರುವಾಗಲಿದ್ದು, ಈ ಸರ್ಕಾರ ಪತನಗೊಳ್ಳುವುದು ಖಚಿತ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನ ಜ್ಯೋತಿ ನಗರದಲ್ಲಿನ ನಿರಾಶ್ರಿತರ ಪರಿಹಾರ ಕೇಂದ್ರದ ನಿವಾಸಿಗಳೊಂದಿಗೆ ಸೋಮವಾರ ಹುಟ್ಟುಹಬ್ಬ ಆಚರಿಸಿಕೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಸಮ್ಮಿಶ್ರ ಸರ್ಕಾರದಲ್ಲಿರುವ ಕಾಂಗ್ರೆಸ್‌-ಜೆಡಿಎಸ್‌ನವರಲ್ಲಿ ಸಾಕಷ್ಟು ಗೊಂದಲಗಳಿವೆ. ಕೆಲವರು ಮುಂದೇನು ಎಂಬ ಯೋಚನೆಯಲ್ಲಿ ಸಿಲುಕಿದ್ದಾರೆ. ಶಾಸಕ ಆನಂದ್‌ ಸಿಂಗ್‌ ರಾಜೀನಾಮೆಯೊಂದಿಗೆ ಈ ಗೊಂದಲ ಜಗಜ್ಜಾಹೀರಾಗಿದೆ ಎಂದು ಹೇಳಿದರು.

ದೋಸ್ತಿ ಸರ್ಕಾರ ಪತನ: ಜಿಂದಾಲ್‌ ಕಂಪನಿಗೆ ಭೂಮಿ ನೀಡುವುದನ್ನು ವಿರೋಧಿಸಿದ್ದ ಶಾಸಕ ಆನಂದ್‌ ಸಿಂಗ್‌, ಭೂಮಿ ಉಳಿಸಲು ರಾಜೀನಾಮೆಗೂ ಸಿದ್ಧ ಎಂದಿದ್ದರು. ಜಿಂದಾಲ್‌ ಕಂಪನಿಗೆ ಭೂಮಿ ನೀಡಲ್ಲವೆಂದು ಸಚಿವ ಸಂಪುಟ ಉಪ ಸಮಿತಿ ರಚಿಸಿ ಕಣ್ಣೊರೆಸುವ ತಂತ್ರ ನಡೆಸುತ್ತಿರುವುದನ್ನು ಅರಿತ ಆನಂದ್‌ ಸಿಂಗ್‌ ರಾಜೀನಾಮೆ ನೀಡಿರುವುದನ್ನು ಸ್ವಾಗತಿಸುವುದಾಗಿ ಹೇಳಿದರು.

ಆನಂದ್‌ಸಿಂಗ್‌ ರಾಜೀನಾಮೆ ಕೊಟ್ಟಾಗಿದೆ. ಮುಂದೆ ಅನೇಕ ಶಾಸಕರು ಅವರನ್ನು ಅನುಸರಿಸುವ ಲಕ್ಷಣ ಕಾಣಿಸುತ್ತಿದ್ದು, ಬಿಜೆಪಿ ಆಪರೇಷನ್‌ ಕಮಲ ಮಾಡುತ್ತಿಲ್ಲ. ಅದರ ಅಗತ್ಯವೂ ಇಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ರಾಜಕೀಯ ಸ್ಫೋಟವಾಗಲಿದೆ. ದೋಸ್ತಿ ಸರ್ಕಾರ ಪತನವಾದರೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದರು.

ಒಳಒಪ್ಪಂದ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಹೀನಾಯವಾಗಿ ಸೋತು ಧೂಳೀಪಟವಾದ ನಂತರವು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದೆ ಅಧಿಕಾರ ದಾಹ, ದುರಾಸೆಯಿಂದ ಮುಂದುವರಿದಿದ್ದಾರೆ ಎಂದು ಟೀಕಿಸಿದರು.

Advertisement

ರಾಜ್ಯದಲ್ಲಿ ಎಚ್‌.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್‌ಗೆ ಮಾತ್ರ ಈ ಸರ್ಕಾರ ಮುಂದುವರಿಯುವುದು ಬೇಕಾಗಿದೆ. ಬೇರ್ಯಾವ ಶಾಸಕರಿಗೂ ಈ ಸರ್ಕಾರ ಮುಂದುವರಿಯುವುದು ಬೇಕಿಲ್ಲ. ಅದರಲ್ಲೂ ಕಾಂಗ್ರೆಸ್‌ ಶಾಸಕರಿಗೆ ಸರ್ಕಾರ ಮುಂದುವರಿಯುತ್ತಿರುವುದು ಇಷ್ಟವಿಲ್ಲ. ಆದರೂ ಕೆಲವರು ಒಳ ಒಪ್ಪಂದ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಟೀಕಿಸಿದರು.

ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ಮಧ್ಯಸ್ಥಿಕೆ ವಹಿಸಲು ಮುಂದಾಗಿರುವ ಸಚಿವ ಡಿ.ಕೆ.ಶಿವಕುಮಾರ್‌ ಯಾವಾಗಲೂ ಹೇಳಿದ್ದನ್ನೇ ಹೇಳುತ್ತಿದ್ದು, ಅವರ ಕ್ಯಾಸೆಟ್‌ ಕೇಳಿ ಸುಸ್ತಾಗಿ ಹೋಗಿದೆ. ಈ ನಾಯಕರ ದೊಂಬರಾಟ ಹೆಚ್ಚು ದಿನ ನಡೆಯಲ್ಲ. ಈ ಸರ್ಕಾರ ಯಾವತ್ತೋ ಬೀಳಬೇಕಿತ್ತು. ಆದರೂ ಕುಂಟುತ್ತಾ ಸಾಗಿದೆ. ಈ ಬಾರಿ ಪತನವಾಗುವುದು ಖಚಿತ ಎಂದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ವಿದೇಶ ಪ್ರವಾಸ ತಪ್ಪಲ್ಲ. ಆದರೆ,ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿಯಿಂದಾಗಿ ರೈತರು ಸಮಸ್ಯೆಯಲ್ಲಿ ಸಿಲುಕಿರುವಾಗ ಹೋಗಿರುವುದು ಸರಿಯಲ್ಲ. ವಿದೇಶ ಪ್ರವಾಸ ಅವರ ವೈಯಕ್ತಿಕವೇ ಇರಬಹುದು. ಆದರೆ, ಜ್ವಲಂತ ಸಮಸ್ಯೆ ಇರುವಾಗ ವಿದೇಶ ಪ್ರವಾಸ ಹೋಗುವುದು ಸರಿಯಲ್ಲ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ನಗರ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌, ನಗರಪಾಲಿಕೆ ಸದಸ್ಯ ಬಿ.ವಿ.ರಾಮಪ್ರಸಾದ್‌, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ರಾಜೀವ್‌ ಮತ್ತಿತರರು ಹಾಜರಿದ್ದರು.

ಜಿಂದಾಲ್‌ನಿಂದ ಕಿಕ್‌ಬ್ಯಾಕ್‌: ಜಿಂದಾಲ್‌ ಕಂಪನಿಗೆ ಭೂಮಿ ನೀಡುವ ವಿಚಾರದಲ್ಲಿ ಕಿಕ್‌ಬ್ಯಾಕ್‌ ಪಡೆಯಲಾಗಿದೆ. ಪ್ರಕರಣವನ್ನು ಮುಚ್ಚಿಹಾಕಲು ಉಪ ಸಮಿತಿ ರಚಿಸಲಾಗಿದೆ ಹೊರತು ಬೇರೇನೂ ಇಲ್ಲ. ಈಗಾಗಲೇ 14ಸಾವಿರ ಎಕರೆ ಭೂಮಿ ಕೊಡಲಾಗಿದೆ.

ಉಳಿದ 3000 ಎಕರೆಯನ್ನು ಕೊಡುವುದಕ್ಕೆ ಕಿಕ್‌ಬ್ಯಾಕ್‌ ಪಡೆಯಲಾಗಿದೆ ಎನ್ನುವುದರಲ್ಲಿ ಯಾವ ಅನುಮಾನವೇ ಇಲ್ಲ. ಇಲ್ಲದಿದ್ದರೆ ಇಷ್ಟೊಂದು ವಿರೋಧದ ನಡುವೆ ಜಿಂದಾಲ್‌ಗೆ ಭೂಮಿ ಕೊಡಬೇಕಾದ ಅಗತ್ಯ ಏನಿತ್ತು ಎಂದು ಮಾಜಿ ಉಪ ಮುಖ್ಯಮಂತ್ರಿ ಅಶೋಕ್‌ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next