ಬೆಂಗಳೂರು: “ನನಗೆ ನೀಡಿರುವ ಪೌರಾಡಳಿತ ಖಾತೆಯಲ್ಲೇ ಕೆಲಸ ನಿರ್ವಹಿಸುತ್ತೇನೆ ಹಾಗೂ 2023ರವರೆಗೂ ಬಿಜೆಪಿಯಲ್ಲೇ ಇರುತ್ತೇನೆ’ ಎಂದು ಸಚಿವ ಎಂಟಿಬಿ ನಾಗರಾಜ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಚಿವ ಆನಂದ್ ಸಿಂಗ್ ರಾಜೀನಾಮೆ ನೀಡುತ್ತಿರುವುದು ಅವರ ವೈಯಕ್ತಿಕ ವಿಚಾರ. ನಾವು ಅವರಿಗೆ ಬೆಂಬಲ ನೀಡುವ ಬಗ್ಗೆ ಯಾವುದೇ ರೀತಿ ಚರ್ಚೆ ಮಾಡಿಲ್ಲ. ನಾನು ಮಾತ್ರ ನನಗೆ ವಹಿಸಿರುವ ಖಾತೆಯಲ್ಲೇ ಕಾಯ ನಿರ್ವಹಿಸುತ್ತೇನೆ ಹಾಗೂ 2023ರವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ಅಷ್ಟೇ ಅಲ್ಲ, ಮುಂದೆಯೂ ಇಲ್ಲಿಯೇ ಟಿಕೆಟ್ ಸಿಗಲಿದೆ’ ಎಂದು ಸ್ಪಷ್ಟಪಡಿಸಿದರು.
“ಹಿಂದೆ ಎಂದೂ ದೆಹಲಿಗೂ ಹೋಗಿಲ್ಲ, ಮುಂದೆಯೂ ಹೋಗುವುದೂ ಇಲ್ಲ. ನಾನು ಅಧಿಕಾರ, ಹಣದ ಆಮಿಷಕ್ಕೆ ಬರಲಿಲ್ಲ. ನನ್ನ ಬಳಿ ಎಲ್ಲವೂ ಇದೆ. ನಾನು ಯಾವುದೇ ಅಪೇಕ್ಷೆ ಇಲ್ಲದೆ ಬಿಜೆಪಿಗೆ ಬಂದವನು. ಪಕ್ಷವು ವಿಧಾನ ಪರಿಷತ್ತಿನ ಸದಸ್ಯನನ್ನಾಗಿ ಮಾಡಿ ಸಚಿವ ಸ್ಥಾನವನ್ನೂ ಪಕ್ಷ ನೀಡಿದೆ. ನನ್ನನ್ನು ಕರೆತಂದ ಸಚಿವ ಆರ್. ಅಶೋಕ್ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ರಾಜಕೀಯ ಹರಿಯುವ ನೀರು ಇದ್ದಂತೆ. ಜನರ ಸೇವೆ ಮಾಡಬೇಕು ಹಾಗೂ ಪಕ್ಷಕ್ಕೆ ಒಳ್ಳೆಯದು ಮಾಡಬೇಕು ಎಂಬ ಉದ್ದೇಶದಿಂದ ಬಂದಿದ್ದೇನೆ’ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿಂದು ಕೋವಿಡ್ ಏರಿಕೆ: 1826 ಪ್ರಕರಣ ಪತ್ತೆ; 33 ಸಾವು
ಮುಖ್ಯಮಂತ್ರಿಗಳು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಲಿ. ಅದಕ್ಕೆ ನಾನಂತೂ ಬದ್ಧನಾಗಿದ್ದೇನೆ. ರಾಜೀನಾಮೆ ನೀಡುವುದು ಅವರವರ ವೈಯಕ್ತಿಕ ವಿಚಾರ ಎಂದು ಪುನರುತ್ಛರಿಸಿದರು.