Advertisement

ಆತಂಕದಲ್ಲೇ ದಿನ ದೂಡುವ ನಿವಾಸಿಗಳು

10:58 AM Jun 17, 2018 | Team Udayavani |

ಮಹಾನಗರ : ನಗರದ ಅಳಪೆ ಗ್ರಾಮದ ಕುಲಶೇಖರ, ಕನ್ನಗುಡ್ಡ ರೈಲ್ವೇ ಮೇಲ್ಸೇತುವೆ ಬಳಿ ಗುಡ್ಡ ಕುಸಿತ ಉಂಟಾದ ಪರಿಣಾಮ, ಮೇಲ್ಭಾಗದಲ್ಲಿರುವ ಏಳು ಜನರ ಒಡೆತನ ದಲ್ಲಿರುವ ಒಟ್ಟು ಒಂಬತ್ತು ಮನೆಗಳು ಕುಸಿಯುವ ಭೀತಿ ಎದುರಿಸುತ್ತಿದ್ದು, ಇಲ್ಲಿನ ನಿವಾಸಿಗಳು ಆತಂಕದಲ್ಲಿದ್ದಾರೆ.

Advertisement

ರೈಲ್ವೇ ಇಲಾಖೆ ಇಲ್ಲಿನ ಒಟ್ಟು ಎರಡು ಮನೆಗಳ ಮಾಲಕರಿಗೆ ಪರಿಹಾರ ಧನ ನೀಡಿದೆಯಾದರೂ ಇನ್ನುಳಿದ ಕುಟುಂಬಗಳಿಗೆ ಪರಿಹಾರದ ಆಶ್ವಾಸನೆ ಬಿಟ್ಟು ಬೇರೇನೂ ದೊರಕಿಲ್ಲ. ಪರಿಹಾರ ದೊರಕಿದ ಕುಟುಂಬಿಕರು ಈಗಾಗಲೇ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಆದರೆ, ಪರಿಹಾರಕ್ಕಾಗಿ ಕಾಯುತ್ತಿರುವವರು ಮಾತ್ರ ಅಲ್ಲೇ ಇದ್ದಾರೆ. ರೈಲ್ವೇ ಇಲಾಖೆಯ ಪರಿಹಾರ ಧನ ದೊರೆತಿದ್ದರೆ, ಬೇರೆಲ್ಲಾದರೂ ಮನೆ ಮಾಡಬಹುದಿತ್ತು. ಅದರೆ ಫೆ. 15ರೊಳಗೆ ಪರಿಹಾರ ಧನ ನೀಡುವ ಆಶ್ವಾಸನೆ ಕೊಟ್ಟಿದ್ದರೂ ಇಲ್ಲಿಯವರೆಗೆ ಆ ಭರವಸೆ ಈಡೇರಿಕೆಯಾಗಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಮನೆ ಬಿರುಕು ಬಿಟ್ಟಿದೆ
ಇಲ್ಲಿನ ನಿವಾಸಿಗಳ ಆತಂಕದ ಬದುಕನ್ನು ಕಣ್ಣಾರೆ ಕಾಣಲು ಶನಿವಾರ ಕುಲಶೇಖರ ರೈಲ್ವೇ ಮೇಲ್ಸೇತುವೆ ಬಳಿ ಸುದಿನ ಭೇಟಿ ನೀಡಿದಾಗ ಇಲ್ಲಿನ ನಿವಾಸಿಗಳು ತಮ್ಮ ಮನೆಯ ಬಿರುಕು ಬಿಟ್ಟ ಗೋಡೆಯನ್ನು ತೋರಿಸುತ್ತಾ ಆತಂಕ ವ್ಯಕ್ತಪಡಿಸಿದರು. ‘ತಿಂಗಳ ಹಿಂದೆ ರೈಲ್ವೇ ಸುರಂಗ ಮಾರ್ಗ ಹಾಗೂ ಡಬಲ್‌ ಟ್ರ್ಯಾಕ್  ಜೋಡಣೆ ಕಾಮಗಾರಿ ನಡೆಯುತ್ತಿದ್ದ ವೇಳೆ ರಾತ್ರಿ ನಿದ್ದೆಯೂ ಇರಲಿಲ್ಲ. ಸುರಂಗ ಕೊರೆಯಲು ಆಧುನಿಕ ಯಂತ್ರಗಳ ಸಹಾಯ ಪಡೆಯದೆ ಬಂಡೆ ಸಿಡಿಸಿ ಸುರಂಗ ತೋಡಿದ್ದರು. ಈ ವೇಳೆ ನಮ್ಮ ಮನೆಯ ಸಮೀಪವೇ ದೊಡ್ಡ ಕಲ್ಲು ಬಿದ್ದಿದೆ. ಜತೆಗೆ ಮನೆಯ ಗೋಡೆಗಳಲ್ಲೂ ಬಿರುಕು ಕಾಣಿಸಿಕೊಂಡಿದೆ. 

ಜೋರು ಮಳೆ ಬಂದಾಗ ಎಲ್ಲಿ ಮತ್ತೆ ಭೂ ಕುಸಿತ ಉಂಟಾಗುತ್ತದೋ ಅಥವಾ ಎಲ್ಲಿ ನಮ್ಮ ಮನೆಯ ಗೋಡೆ ಒಡೆದು ಬೀಳುತ್ತದೋ ಎಂದು ಆತಂಕವಾಗುತ್ತಿದೆ’ ಎಂದು ತಮ್ಮ ಅಳಲು ತೋಡಿಕೊಂಡರು ಇಲ್ಲಿನ ನಿವಾಸಿ ರೆಜಿನಾ ಲೋಬೋ.ಕೆಲವರಿಗೆ ಮಾತ್ರ ಪರಿಹಾರ, ಇನ್ನುಳಿದವರಿಗೆ ಆಶ್ವಾಸನೆ ಮಾತ್ರ.

ರೈಲ್ವೇ ಡಬಲ್‌ ಟ್ರ್ಯಾಕ್  ನಿರ್ಮಾಣಕ್ಕೆ ಅನುಕೂಲವಾಗುವಂತೆ ಕುಲಶೇಖರ ಅಳಪೆ ಗ್ರಾಮದ ನಿವಾಸಿಗಳಾದ ಕಾಮಿಲ್‌ ರೇಗೋ, ಆಲ್ವಿನ್‌ ಪಾಯಸ್‌, ಯೋಗೀಶ್‌ ಪದಕಣ್ಣಾಯ, ಫಿಲೋಮಿನಾ ಪಿಂಟೋ, ಲಿಯೋ ಲೋಬೋ, ಇನಾನ್‌ ಬೋಸ್ತಂ ಪಿಂಟೋ ಹಾಗೂ ಪೌಲ್‌ ಪಿಂಟೋ ಅವರು ತಮ್ಮ ಒಪ್ಪಿಗೆ ಸೂಚಿಸಿ ಸಹಿ ಹಾಕಿ ಹಸ್ತಾಂತರಿಸಿದ್ದಾರೆ. ಆದರೆ, ಆಲ್ವಿನ್‌ ಪಾಯಸ್‌ ಹಾಗೂ ಯೋಗೀಶ್‌ ಪದಕಣ್ಣಾಯ ಹೊರತು ಪಡಿಸಿ, ಇನ್ನುಳಿದ ಯಾರಿಗೂ ಇಲ್ಲಿಯವರೆಗೆ ಪರಿಹಾರ ಧನ ಸಿಕ್ಕಿಲ್ಲ. ‘ಪ್ರಶ್ನಿಸಿದಾಗ, ಕೃಷಿ ಭೂಮಿಯನ್ನು ಭೂ ಪರಿವರ್ತನೆ (ಕನ್ವರ್ಷನ್‌) ಮಾಡಿದ್ದರೆ ಮಾತ್ರ ಹೆಚ್ಚು ಪರಿಹಾರ ನೀಡಲು ಸಾಧ್ಯ ಎಂದು ರೈಲ್ವೇ ಅಧಿಕಾರಿಗಳು ಇದೀಗ ಸಬೂಬು ನೀಡುತ್ತಾರೆ. ನಮ್ಮೆಲ್ಲರ ಜಾಗದ ಸರ್ವೆ ಕಾರ್ಯ ಒಂದೇ ಬಾರಿಯಾಗಿದ್ದರೂ ನಮಗೇಕೆ ಪರಿಹಾರ ಧನ ನೀಡಿಲ್ಲ ಎಂದು ಪ್ರಶ್ನಿಸುತ್ತಾರೆ’ ಮತ್ತೋರ್ವ ನಿವಾಸಿ ಜೆನ್ನಿಫರ್‌.

Advertisement

ಬೋರಿಂಗ್‌ ಯಂತ್ರ ಬಳಕೆ ಯಾಕಿಲ್ಲ?
ಸುರಂಗ ತೋಡಲು ಸುರಕ್ಷತೆಗೆ ಒತ್ತು ನೀಡದೆ ಸಿಡಿಯುವ ಮದ್ದಿರಿಸಿ, ಅತೀ ಪುರಾತನ ಹಾಗೂ ಅಷ್ಟೇ ಅವೈಜ್ಞಾನಿಕ ಬಂಡೆ ಒಡೆಯುವ ಪದ್ಧತಿ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಲ್ಲಿನ ನಿವಾಸಿ ಕಾಮಿಲ್‌ ರೇಗೋ, ‘ಸುರಂಗ ತೋಡಲು ಅತ್ಯಾಧುನಿಕ ಬೋರಿಂಗ್‌ ಯಂತ್ರ ಬಳಸುವುದು ಉತ್ತಮ. ರೈಲ್ವೇ ಇಲಾಖೆಗೆ ಜನರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಬೇಡವೇ?’ ಎನ್ನುತ್ತಾರೆ. ಈ ಬಗ್ಗೆ ರೈಲ್ವೇ ಎಂಜಿನಿಯರ್‌ ಗೋಪಿಚಂದ್‌ ನಾಯಕ್‌ ಅವರನ್ನು ಮಾತನಾಡಿಸಿದಾಗ, ಅತೀ ಉದ್ದದ ಸುರಂಗ ತೋಡಬೇಕಾದಾಗ ಮಾತ್ರ ಬೋರಿಂಗ್‌ ಯಂತ್ರ ಬಳಸಲಾಗುತ್ತದೆ. ಇಲ್ಲಿ ಕೇವಲ 500 ಮೀಟರ್‌ ಉದ್ದದ ಸುರಂಗ ತೋಡಲಿದ್ದ ಕಾರಣ, ಎಲ್ಲ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದರು.

ಪರಿಹಾರಧನ ವಿತರಣೆ ಶೀಘ್ರ
ಪರಿಹಾರಧನ ವಿತರಣೆಗಾಗಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಬರುವ ಎಲ್ಲರಿಗೂ ತಿಂಗಳೊಳಗಾಗಿ ಪರಿಹಾರಧನ ವಿತರಣೆ ಮಾಡಲಾಗುತ್ತದೆ. ಪಟ್ಟಿಯಲ್ಲಿರುವ ಕೆಲವರ ದಾಖಲೆಗಳು ಸಮರ್ಪಕವಾಗಿಲ್ಲದ ಕಾರಣ, ಪರಿಹಾರ ವಿತರಣೆಯಲ್ಲಿ ವಿಳಂಬವಾಗಿದೆ. ಸಂಬಂಧಿತ ದಾಖಲೆಗಳು ಕೋಡೀಕರಣಗೊಂಡು, ಪರಿಶೀಲಿಸಿದ ಕೂಡಲೇ ಪರಿಹಾರಧನ ವಿತರಿಸಲಾಗುವುದು.
– ಪ್ರವೀಣಾ , ರೈಲ್ವೇ ಕಾರ್ಯಕಾರಿ ಅಭಿಯಂತ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next