Advertisement

ವಸತಿ ಶಾಲೆಗಳೂ ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಮುಂದೆ

11:34 PM May 22, 2024 | Team Udayavani |

ಕುಂದಾಪುರ: ಎಸೆಸೆಲ್ಸಿ ಫಲಿತಾಂಶ ಬಂದಾಗ ಪೂರ್ಣಾಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಅಂಕಿತಾ ಮೇಲೆ ಎಲ್ಲರ ಗಮನ ಹರಿಯಿತು. ಸಹಜವಾಗಿ ಆಕೆ ಓದಿದ ಶಾಲೆ ಮೇಲೂ. ಅಂದ ಹಾಗೆ ರಾಜ್ಯದಲ್ಲಿ ಸರಕಾರಿ ವಸತಿ ಶಾಲೆಗಳು ಶೇ. 96ರಷ್ಟು ಫಲಿತಾಂಶ ದಾಖಲಿಸಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲೂ ಅತ್ಯುತ್ತಮ ಸಾಧನೆ ಮಾಡಿವೆ.

Advertisement

ದ.ಕ. ಜಿಲ್ಲೆಯಲ್ಲಿ 11 ವಸತಿ ಶಾಲೆಗಳ ಪೈಕಿ ಹತ್ತರಲ್ಲಿ ಶೇ. 100 ಫಲಿತಾಂಶ ದಾಖಲಿಸಿವೆ. 475 ಮಂದಿ ಪರೀಕ್ಷೆಗೆ ಹಾಜರಾಗಿ 474 ಮಂದಿ ತೇರ್ಗಡೆ ಯಾಗಿದ್ದಾರೆ. ಉಡುಪಿ ಜಿಲ್ಲೆಯ 8 ಶಾಲೆಗಳಲ್ಲಿ 331 ಮಂದಿ ಪರೀಕ್ಷೆಗೆ ಹಾಜರಾಗಿ ಅಷ್ಟೂ ಮಂದಿ ತೇರ್ಗಡೆಯಾಗಿದ್ದಾರೆ.

ಕಳೆದ ವರ್ಷ ರಾಜ್ಯದ ವಸತಿ ಶಾಲೆಗಳ ಫಲಿತಾಂಶಕ್ಕೆ ಹೋಲಿಸಿದರೆ ಈ ವರ್ಷ ಸ್ವಲ್ಪ ಕುಸಿದಿದೆ. ಕಳೆದ ವರ್ಷ ಶೇ.99 ಬಂದಿದ್ದರೆ, ಈ ವರ್ಷ ಶೇ. 95.75 ಬಂದಿದೆ. ರಾಜ್ಯದಲ್ಲಿ 758 ವಸತಿ ಶಾಲೆಗಳಲ್ಲಿ 35,303 ಮಂದಿ ಪರೀಕ್ಷೆಗೆ ಹಾಜರಾಗಿದ್ದು 33,803 ಮಂದಿ ತೇರ್ಗಡೆಯಾಗಿದ್ದಾರೆ. ರಾಜ್ಯದಲ್ಲಿ 830 ವಸತಿ ಶಾಲೆಗಳಿದ್ದು 758 ಶಾಲೆಗಳಲ್ಲಿ ಎಸೆಸೆಲ್ಸಿ ಇದೆ. ಈ ಪೈಕಿ 358 ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ.

ಯಾವೆಲ್ಲ ಶಾಲೆ
ವಸತಿ ಶಾಲೆಗಳೆಂದರೆ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಡಾ| ಬಿ.ಆರ್‌. ಅಂಬೇಡ್ಕರ್‌, ಅಟಲ್‌ಬಿಹಾರಿ ವಾಜಪೇಯಿ, ನಾರಾಯಣ ಗುರು, ಏಕಲವ್ಯ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು. ಈ ಪೈಕಿ ನಾರಾಯಣ ಗುರು ಶಾಲೆಯಲ್ಲಿ ಎಸೆಸೆಲ್ಸಿಗೆ ಇನ್ನಷ್ಟೇ ಅವಕಾಶ ಸಿಗಬೇಕಿದೆ.

ಪ್ರವೇಶ ಹೇಗೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಸತಿ ಶಾಲೆಗಳ ಸೇರ್ಪಡೆಗೆ ಪ್ರವೇಶ ಪರೀಕ್ಷೆ ನಡೆಸುತ್ತದೆ. 4,5 ತರಗತಿಯ ಪಠ್ಯಗಳನ್ನು ಆಧರಿಸಿದ ಪ್ರಶ್ನೆ ಪತ್ರಿಕೆ ಇರುತ್ತದೆ. ಈಚೆಗೆ ಎರಡು ವರ್ಷದಿಂದ ನಿಯಮಗಳಲ್ಲಿ ತಿದ್ದುಪಡಿಯಾಗಿದ್ದು ಸ್ಥಳೀಯ ಜಿಲ್ಲೆಯಲ್ಲಿ ಕಲಿಯುತ್ತಿರುವವರಿಗೇ ಆದ್ಯತೆ ನೀಡಲಾಗುತ್ತದೆ. ಹಿಂದುಳಿದ ವರ್ಗಗಳ ಶಾಲೆಯಲ್ಲಿ ಶೇ. 75 ಸೀಟು ಹಿಂದುಳಿದ ವರ್ಗದವರಿಗೆ, ಶೇ.25 ಸೀಟುಗಳು ಪ.ಜಾ.ಪ.ವರ್ಗದವರಿಗೆ, ಸಮಾಜ ಕಲ್ಯಾಣ ಇಲಾಖೆ ಶಾಲೆಗಳಲ್ಲಿ ಶೇ.75ರಷ್ಟು ಪ.ಜಾ.ಪ.ವರ್ಗದವರಿಗೆ, ಶೇ.25 ಸೀಟುಗಳು ಹಿಂದುಳಿದ ವರ್ಗದವರಿಗೆ, ಪ.ವರ್ಗಗಳ ಕಲ್ಯಾಣ ಶಾಲೆಗಳಲ್ಲಿ ಶೇ.75 ಪ.ವರ್ಗದವರಿಗೆ, ಶೇ.25 ಪ.ಜಾತಿಯವರಿಗೆ ಎಂಬಂತಹ ನಿಯಮಗಳಿವೆ. ಮೊರಾರ್ಜಿ ವಸತಿ ಶಾಲೆಯ ಪಿಯುಸಿ ಸೇರ್ಪಡೆಗೆ ಆಯಾ ಜಿಲ್ಲಾ ಮೊರಾರ್ಜಿ ಶಾಲೆಯಲ್ಲಿ ಕಲಿತವರಿಗೆ ಮೊದಲ ಆದ್ಯತೆ ಇರುತ್ತದೆ. ಅದೆಷ್ಟೇ ಹೆಚ್ಚು ಅಂಕದವರು ಹೊರಗಿನವರು ಇದ್ದರೂ ಮೊರಾರ್ಜಿ ಶಾಲೆಯಲ್ಲಿ ಕಲಿತು ಕಡಿಮೆ ಅಂಕ ಪಡೆದರೂ ಪ್ರವೇಶ ಅವಕಾಶವಿರಲಿದೆ.

Advertisement

ಐದು ವರ್ಷಗಳ ಅವಧಿಯ ಉಚಿತ ಶಿಕ್ಷಣ ಇದಾಗಿದ್ದು,. ವಸತಿ, ಊಟ, ಬಟ್ಟೆ ಎಲ್ಲ ಸೌಲಭ್ಯಗಳೂ ಸಿಗಲಿವೆ.

ಬಾಳ ಬೆಳಕು
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದ ವಜ್ಜರಮಟ್ಟಿಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ 625ಕ್ಕೆ 625 ಅಂಕ ಪಡೆದರು. ಮಧ್ಯಮ ವರ್ಗದ ಕುಟುಂಬದ ರೈತರಾದ ಬಸಪ್ಪ ಹಾಗೂ ಗೀತಾ ಕೊಣ್ಣೂರ ದಂಪತಿಯ ಮೊದಲ ಪುತ್ರಿ ಅಂಕಿತಾ 6ನೇ ತರಗತಿಯಿಂದ ಆ ಶಾಲೆಯಲ್ಲಿ ಕಲಿಯತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next