Advertisement

Udayavani Campaign-ನಮಗೆ ಬಸ್‌ ಬೇಕೇ ಬೇಕು: ಹೇಳಿ, ನಮ್ಮೂರಿಗೆ ಬಸ್‌ ಯಾಕೆ ಬರುವುದಿಲ್ಲ?

04:59 PM Jun 15, 2024 | Team Udayavani |

ಕಾರ್ಕಳ: ಜಪಾನ್‌ ದೇಶದಲ್ಲಿ ಒಬ್ಬ ವಿದ್ಯಾರ್ಥಿಗಾಗಿ ನಿತ್ಯವೂ ಒಂದು ರೈಲನ್ನೇ ಓಡಿಸುತ್ತಾರೆ ಅಂತೆಲ್ಲ ಹೇಳ್ತಾರೆ. ನಮ್ಮೂರಲ್ಲಿ 500ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ಆದರೆ ಒಂದೇ ಒಂದು ಬಸ್‌ ಯಾಕೆ ಬರುವುದಿಲ್ಲ?-ಹೀಗೆಂದು ಕೇಳಿದ್ದು ಕಾರ್ಕಳ ತಾಲೂಕಿನ ಈದು, ನೂರಾಳ ಬೆಟ್ಟು ಭಾಗದ ಒಬ್ಬ ವಿದ್ಯಾರ್ಥಿನಿ. ಇಲ್ಲಿಗೆ ಸರಕಾರಿ ಬಿಡಿ, ಖಾಸಗಿ ಬಸ್‌ ಕೂಡಾ ತಲೆ ಹಾಕುತ್ತಿಲ್ಲ.

Advertisement

ಹೀಗಾಗಿ ವಿದ್ಯಾರ್ಥಿಗಳು ಕನಿಷ್ಠ ಐದು, ಗರಿಷ್ಠ ಏಳೆಂಟು ಕಿ.ಮೀ. ನಡೆದುಕೊಂಡೇ ಪ್ರಧಾನ ರಸ್ತೆಗೆ ಅಂದರೆ ಧರ್ಮಸ್ಥಳ-ಕಾರ್ಕಳ ಹೆದ್ದಾರಿಯ ಹೊಸ್ಮಾರ್‌ ಬಳಿಯ ನೂರಾಳ್‌ ಬೆಟ್ಟು ಕ್ರಾಸ್‌ ಗೆ ಬಂದು ಬಸ್‌ ಹಿಡಿಯಬೇಕು.

ಈದು ಹಾಗೂ ನೂರಾಳಬೆಟ್ಟು ಹೊಸ್ಮಾರಿಗೆ ಸಮೀಪದ, ತಾಲೂಕು ಕೇಂದ್ರದಿಂದ ದೂರ ಇರುವ ಊರುಗಳು. ಇಲ್ಲಿಗೆ ಹತ್ತು ವರ್ಷದ ಹಿಂದೆ ಎರಡು ಖಾಸಗಿ ಬಸ್‌ ಗಳು ಇದ್ದವು. ಬೆಳಗ್ಗೆ 7.30ಕ್ಕೆ ಕೂಷ್ಮಾಂಡಿನಿ ಬಸ್‌, 8 ಗಂಟೆಗೆ ಬಳ್ಳಾಲ್‌ ಬಸ್‌ ಇತ್ತು. ಇದರಿಂದ ಈ ಭಾಗದ ಮಕ್ಕಳು ಬಸ್ಸಿನ ಪ್ರಯೋಜನ ಬಳಸಿ ಶಾಲೆ ಕಾಲೇಜು ಸೇರುತಿದ್ದರು. ಬಳಿಕ ಈ ಎರಡು ಬಸ್‌ ಗಳು ರಸ್ತೆ ಸರಿ ಇಲ್ಲವೆಂದು ಓಡಾಟ ನಿಲ್ಲಿಸಿದವು.

ಈಗ ರಸ್ತೆ ಚೆನ್ನಾಗಿದ್ದರೂ ಯಾವ ಬಸ್ಸೂ ಈ ಭಾಗಕ್ಕೆ ಬರುತ್ತಿಲ್ಲ. ಬಸ್‌ ಇಲ್ಲದೆ ಇರುವು ದರಿಂದ ಕಾಲ್ನಡಿಗೆ, ಅಟೋ, ಜೀಪು, ಸ್ಕೂಟರ್‌ ಬೈಕ್‌ಗಳೇ ಗತಿ ಇವರಿಗೆ. ಕೆಲ ಮಕ್ಕಳು ಸೈಕಲ್‌ ತುಳಿದು ಶಾಲೆ ಸೇರುತ್ತಾರೆ.

ನಿಮಿಷ ವ್ಯರ್ಥವಾದರೂ ಬಸ್‌ ಮಿಸ್‌
ಬಸ್ಸಿಲ್ಲದ ಊರು ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಗ್ರಾಮಾಂತರದ ಭಾಗದ ಮಕ್ಕಳಿಗೆ ಅಟೋ ರಿಕ್ಷಾ, ಜೀಪು
ಇತರೆ ಖಾಸಗಿ ವಾಹನಗಳೇ ಆಸರೆ. ಸರ್ವಿಸ್‌ ವಾಹ ನ ಗಳಿಂದಾಗಿ ಇಲ್ಲಿ ಬದುಕು ಸಾಗು ತ್ತಿ ದೆ. ಬೆಳಗ್ಗೆ 9 ಗಂಟೆ ತನಕ ಸರ್ವಿಸ್‌ ವಾಹನಗಳಿರುತ್ತವೆ. ಸಂಜೆಯೂ ಇರುತ್ತದೆ. ಕೆಲ ಮಕ್ಕಳು ಇವುಗಳನ್ನೇರಿ ಹೆದ್ದಾರಿ ಬದಿಗೆ ಬರುತ್ತಾರೆ. ಆದರೆ, ಕೆಲವರಿಗೆ ಹಣದ ಶಕ್ತಿ ಇಲ್ಲದೆ ಕಾಲಿನ ಮೇಲೆ ನಂಬಿಕೆ ಇಟ್ಟು ನಡೆಯುತ್ತಾರೆ. ಬೆಳ್ಳಂಬೆಳಗ್ಗೆ 6.30ರಿಂದ 7ರೊಳಗೆ ಮನೆಯಿಂದ ಹೊರಟು ಶರವೇಗದ ಬರ ಬೇಕು. ಸ್ವಲ್ಪ ಸಮಯ ವ್ಯರ್ಥ, ನಡಿಗೆ ನಿಧಾನವಾದರೂ ಬಸ್‌ ತಪ್ಪಿದರೆ ತರಗತಿಯೂ ಮಿಸ್‌. ಒಂದು ವೇಳೆ ಮಧ್ಯದಲ್ಲಿ ಶಾಲೆ ಬಿಟ್ಟರೆ ಸರ್ವಿಸ್‌ ವಾಹನವೂ ಸಿಗುವುದಿಲ್ಲ. ಎಲ್ಲರೂ ನಡೆದೇ ಮನೆ ಸೇರುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿನಿ ನೂರಾಳ್‌ಬೆಟ್ಟುವಿನ ವೀಣಾ.

Advertisement

ಮನೆಗಳಲ್ಲಿ ಬೈಕ್‌, ಕಾರು, ಆಮ್ನಿ
ಇಲ್ಲಿನ ಮನೆ ಮನೆಯ ಬಾಗಿಲಿನಲ್ಲಿ ಬೈಕು, ಕಾರು, ಆಮ್ನಿಗಳು ನಿಂತಿವೆ. ಇಲ್ಲಿಯವರಿಗೆ ಇದು ಅನಿವಾರ್ಯ. ಯಾಕೆಂದರೆ ಶಾಲೆಗೆ ಮಕ್ಕಳನ್ನು ಬಿಡಲು, ಕರೆತರಲು, ಮಧ್ಯದ ಅವಧಿಯಲ್ಲಿ ಮಕ್ಕಳು ಎಲ್ಲಾದರೂ ಅರ್ಧದಲ್ಲಿ ಬಾಕಿಯಾದರೆ ಕರೆತರಲು ತುರ್ತು
ಅಗತ್ಯಕ್ಕೆ ಮನೆಗೊಂದು ವಾಹನ ಬೇಕೆ ಬೇಕು. ಕೆಲ ಹೆತ್ತವರೇ ತಮ್ಮ ಮಕ್ಕಳನ್ನು ತಮ್ಮ ವಾಹನದಲ್ಲಿ ಬಸ್ಸಿನ ತನಕ ಬಿಟ್ಟು ಬರುತ್ತಾರೆ. ಆದರೆ, ಇದು ಎಲ್ಲರಿಗೂ ಸಾಧ್ಯವಿಲ್ಲವಲ್ಲ. ಅವರೆಲ್ಲ ನಡಿಗೆಯನ್ನೇ ನೆಚ್ಚಿಕೊಂಡಿದ್ದಾರೆ.

ಪ್ರೌಢ ಶಾಲೆ, ಕಾಲೇಜು ಎಷ್ಟು ದೂರ? 
ಈದು ಮತ್ತು ನೂರಾಳಬೆಟ್ಟು ಗ್ರಾಮದಿಂದ ನೂರಾಳ ಬೆಟ್ಟು ಕ್ರಾಸ್‌ಗೆ ಬರಬೇಕಾದರೆ ಕನಿಷ್ಠ ಐದರಿಂದ 10 ಕಿ.ಮೀ. ದೂರವಿದೆ. ಇವ ರು ಪ್ರೌಢ ಶಾಲೆಗೆ ಹೋಗಬೇಕು ಎಂದರೆ ಹೊಸ್ಮಾರಿಗೆ ಬರಬೇಕು (ನೂರಾಳಬೆಟ್ಟು ಕ್ರಾಸ್‌ ನಿಂದ ಮೂರ್ನಾಲ್ಕು ಕಿ.ಮೀ.), ಪಿಯು ಕಾಲೇಜಿಗೆ ಬಜಗೋಳಿಗೆ, ಪದವಿ, ಉನ್ನತ ಶಿಕ್ಷ ಣಕ್ಕೆ ಕಾರ್ಕಳಕ್ಕೆ ಬರಬೇಕು.

ಕೆಲವರಿಗೆ ಮನೆಯಿಂದ ಬಸ್‌ನಿಲ್ದಾಣ 10 ಕಿ.ಮೀ. ದೂರ!
ಈದು ಗ್ರಾಮದ ಮಾಪಾಲು, ಕನ್ಯಾಲ್‌, ಕುಂಟೊನಿ, ಕೂಡ್ಲೆ, ಗುಮ್ಮೆತ್ತು, ಮುಲಿಕೆರವು, ಲಾಮುದೆಲು ಪೂಂಜಾಜೆ, ಕುಡ್ಕುಂಡಿ, ಚೇರೆ, ಪಿಜಿನಡ್ಕ, ಬಾರೆ, ಪಿಜಿನಡ್ಕ ಮಂಗಳ ಫಾರ್ಮ್ ಭಾಗದ ಜನರಿಗೆ ನೂರಾಳ ಬೆಟ್ಟಿಗೆ ಬರಲು 5ರಿಂದ 6 ಕಿ.ಮೀ. ಇದೆ. ಇನ್ನು ಕನ್ಯಾಲು, ಗುಮ್ಮೆತ್ತು, ಲಾಮುದೇಲು ಇಲ್ಲಿನ ಮಕ್ಕಳಿಗೆ ಬಸ್‌ ಹಿಡಿಯಬೇಕಿದ್ದರೆ ಮನೆಯಿಂದ 10 ಕಿ.ಮೀ. ಇಲ್ಲಿನ ಸಾವಿರಾರು ಕುಟುಂಬಗಳಿವೆ. ಸುಮಾರು 300ರಷ್ಟು ಮಕ್ಕಳು ಬಸ್ಸಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ.

ನೂರಾಳ ಬೆಟ್ಟು, ಮುಳಿಕ್ಕಾರು, ಮುರತ್ತಮೇಲು, ಬೆಂಗಾಡಿ, ಕಲ್ಲಾಜೆ, ಹುಕ್ರಟ್ಟೆ ಗುಂಡೋಣಿ ಈ ಆಸುಪಾಸಿನಲ್ಲಿ ಸುಮಾರು ನೂರಾರು ಕುಟುಂಬಗಳಿರಬಹುದು. ಇಲ್ಲಿ ಸರಿಸುಮಾರು 200 ಮಕ್ಕಳಿದ್ದಾರೆ. ಇಲ್ಲಿಂದ ನೂರಾಳ ಬೆಟ್ಟು ಕ್ರಾಸ್‌ಗೆ ಬರಲು ಕನಿಷ್ಠ 10 ಕಿ.ಮೀ. ಇದೆ.

ದುಡ್ಡು ಎಲ್ಲಿಂದ ತರುವುದು?
ಇಲ್ಲಿರುವವರು ಎಲ್ಲರೂ ಕೃಷಿಕರು. ಹೆಚ್ಚಿನವರು ಬಡವರು. ಸ್ವಲ್ಪ ಅನುಕೂಲಸ್ಥರು ತಮ್ಮ ಮಕ್ಕಳನ್ನು ಶಾಲಾ ವಾಹನವಿರುವ ಸ್ಕೂಲ್‌ ಬಸ್ಸಿನಲ್ಲಿ ಕಳಿಸುತ್ತಾರೆ ಅಥವಾ ನಗರಗಳಲ್ಲಿ ಹಾಸ್ಟೆಲ್‌ ನಲ್ಲಿ ಬಿಟ್ಟಿದ್ದಾರೆ. ನಾವು ಎಲ್ಲಿಂದ ದುಡ್ಡು ತರುವುದು?. ಶಾಲೆ, ಫೀಸ್‌, ಪುಸ್ತಕ ಅದು ಇದು ಅಂತ ಹೊರೆಯಾಗುತ್ತದೆ. ಇನ್ನು ಪ್ರತಿ ತಿಂಗಳು ಮಕ್ಕಳ ವಾಹನ ಬಾಡಿಗೆ ಹಣ ಕೊಡುವುದು ಕಷ್ಟ. ಸರಕಾರಿ ಬಸ್‌ ಇದ್ದರೆ ಅದಾದರೂ ಉಳೀತಿತ್ತು ಕಷ್ಟ ಅಂತ ಮಕ್ಕಳನ್ನು ಶಾಲೆಗೆ ಕಳಿಸದೆ ಮನೆಯಲ್ಲಿ ಇಟ್ಟುಕೊಳ್ಳಲು ಆಗುತ್ತದಾ ಎನ್ನುವುದು ಪೋಷಕಿ ಈದುವಿನ ಅಪ್ಪಿ ಎಂಬ ಬಡ ಮಹಿಳೆಯ ಅಸಹಾಯಕತೆಯ ಮಾತು.

ವಿದ್ಯಾರ್ಥಿಗಳ ಮನದ ಮಾತು
ಒಂದಾದರೂ ಬಸ್‌ ಇರುತ್ತಿದ್ದರೆ…
ನಾನು ಬಜಗೋಳಿ ಪ್ರೌಢಶಾಲೆಗೆ ಹೋಗುವುದು. ಈದುವಿ ನಿಂದಲೂ ಒಳಗೆ ಮನೆ. ದಿನಾಲೂ ಐದಾರು ಕಿ.ಮೀ ನಡೆದು ಕೊಂಡು ಈದು ದ್ವಾರದ ಜಂಕ್ಷನ್‌ ತಲುಪುತ್ತೇನೆ. ಅದು ಮುಖ್ಯ ರಸ್ತೆ. ಅಲ್ಲಿಂದ ಬಸ್‌ ಸಿಗುತ್ತದೆ. ಬಸ್ಸು ಕೆಲವೊಮ್ಮೆ ರಶ್‌ ಇರುತ್ತದೆ. ಏನ್ಮಾ
ಡೋದು? ಒಮ್ಮೊಮ್ಮೆ ಬಸ್ಸು ತಪ್ಪಿದರೆ ಇನ್ನೊಂದು ಬಸ್ಸು ಹಿಡಿದು ತರಗತಿ ತಲುಪುವಾಗ ತಡವಾಗುತ್ತದೆ. ಮನೆಯ ಹತ್ತಿರದಿಂದ ಒಂದು ಬಸ್ಸಾದರೂ ಶಾಲೆ ಸಮಯಕ್ಕೆ ಇರುತ್ತಿದ್ದರೆ.. ಚೆನ್ನಾಗಿತ್ತು.
*ಅಂಜಲಿ, ವಿದ್ಯಾರ್ಥಿನಿ (ನಡೆಯುತ್ತಲೇ ಆಡಿದ ಮಾತು)

ಬೆಳಗ್ಗೆ 6.45ಕ್ಕೆ ಹೊರಡಬೇಕು
ನಮ್ಮ ಮನೆ ಇಲ್ಲಿಂದ ಸುಮಾರು ಆರೇಳು ಮೈಲು ದೂರದಲ್ಲಿದೆ. ಅಲ್ಲಿಂದ ಬರುತ್ತಿದ್ದೇನೆ. ಬೆಳಗ್ಗೆ 6.45ಕ್ಕೆ ಮನೆಯಿಂದೆ ಹೊರಡುತ್ತೇನೆ. ಸರ್ವಿಸ್‌ ವಾಹನ ಬಸ್‌ ಬೆಳಗ್ಗೆ ಸಂಜೆ ಇದೆ. ಒಮ್ಮೊಮ್ಮೆ ಸರ್ವಿಸ್‌ ವಾಹನದಲ್ಲಿ ಬರುತ್ತೇವೆ. ಅದು ಹೆಚ್ಚಿನ
ಸಮಯ ರಶ್‌ ಇರುತ್ತದೆ ಅದಕ್ಕೆ ನಡೆದೇ ಹೋಗುತ್ತಿರುತ್ತೇನೆ.
*ಅಭಿಷೇಕ್‌ ಬೆಂಗಾಡಿ, ವಿದ್ಯಾರ್ಥಿ

ಎಲ್ಲರೂ ಕರೆದರೆ ಹತ್ತುವುದಿಲ್ಲ…
ಏನು ಮಾಡೋದು? ಇದು ನಮಗೆ ಅಭ್ಯಾಸ ವಾಗಿದೆ..ಎಲ್ಲ ಊರುಗಳಿಗೆ ಬಸ್ಸುಗಳು ಬರುತ್ತವೆ. ನಮ್ಮೂರಿಗೆ ಮಾತ್ರ ಬರುವುದಿಲ್ಲ.. ಯಾಕೋ? ನಡೆದುಕೊಂಡು ಹೋಗುವಾಗ ಕೆಲವರು ಪರಿ ಚಿತರು ವಾಹನದಲ್ಲಿ ಕರೆದುಕೊಂಡು ಹೋಗುತ್ತಾರೆ. ಪರಿಚಯ ಇಲ್ಲದ ವಾಹನವನ್ನು ನಾವು ಹತ್ತುವುದಿಲ್ಲ. ನಮಗೆ ಭಯವಾಗುತ್ತದೆ.
*ನಿತ್ಯ, ವಿದ್ಯಾರ್ಥಿನಿ

ದಿನಾ ಮನೇಲಿ ಅಂಗಲಾಚಬೇಕು
ನಾವು ಇಷ್ಟು ದೂರ ನಡೆದರೂ ಸರಕಾರಿ ಬಸ್‌ ಸಿಗುವುದಿಲ್ಲ. ಈ ರೂಟಲ್ಲಿ ಕೆಲವು ಸರಕಾರಿ ಬಸ್‌ ಇದ್ದರೂ ನಿಲ್ಲಿಸುವುದಿಲ್ಲ. ನಾವು ದುಡ್ಡು ಕೊಟ್ಟೇ ಖಾಸಗಿ ಬಸ್‌ ನಲ್ಲಿ ಹೋಗಬೇಕು. ಮನೆಯಲ್ಲಿ ದಿನಾ ದುಡ್ಡಿಗಾಗಿ ಅಂಗಲಾಚಿಯೇ ಶಾಲೆ ಸೇರಬೇಕು.
ರಕ್ಷಾ, ಈದು ವಿದ್ಯಾರ್ಥಿ

*ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next