Advertisement

ಜೆಡಿಎಸ್‌ಗೆ ಟಾನಿಕ್‌ ನೀಡಿದ ಮೈತ್ರಿ ಫ‌ಲ

11:13 PM Jun 04, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಜಾತ್ಯತೀತ ಜನತಾದಳದ ಅಸ್ತಿತ್ವವೇ ನಾಮಾವಶೇಷವಾಗಲಿದೆ ಎನ್ನುವ ಮಾತುಗಳಿಗೆ ಲೋಕಸಭೆ ಚುನಾವಣಾ ಫ‌ಲಿತಾಂಶ ಕಡಿವಾಣ ಹಾಕಿದ್ದು, ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ದೊಡ್ಡ ಬಲ ತಂದುಕೊಂಡಿದೆ.

Advertisement

2019 ರಲ್ಲಿ ಕಾಂಗ್ರೆಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಜೆಡಿಎಸ್‌ಗೆ ತುಮಕೂರಿನಲ್ಲಿ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ, ಮಂಡ್ಯದಲ್ಲಿ ನಿಖೀಲ್‌ ಕುಮಾರಸ್ವಾಮಿ, ಉಡುಪಿ-ಚಿಕ್ಕಮಗಳೂರಿನಲ್ಲಿ ಪ್ರಮೋದ್‌ ಮಧ್ವರಾಜ್‌ ಹಾಗೂ ವಿಜಯಪುರದಲ್ಲಿ ಸುನೀತಾ ಚೌಹಾಣ್‌ ಅವರ ಸೋಲಿನ ಕಹಿ ಅರಗಿಸಿಕೊಳ್ಳಲಾಗಿರಲಿಲ್ಲ. ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಗೆದ್ದಿದ್ದು ಮಾತ್ರ ಮೊದಲಿನಿಂದಲೂ ಪಾರಮ್ಯ ಮೆರೆದಿದ್ದ ಹಾಸನ ಲೋಕಸಭಾ ಕ್ಷೇತ್ರವೊಂದರಲ್ಲೇ. ಅಂದರೆ ಸ್ಪರ್ಧಿಸಿದ್ದ ಆರು ಕ್ಷೇತ್ರಗಳನ್ನು ಕಳೆದುಕೊಂಡಿತ್ತು.

ಇದರಿಂದ ಪಕ್ಷದ ನಾಯಕರು, ಕಾರ್ಯಕರ್ತರು ಭ್ರಮನಿರಸನರಾಗಿದ್ದರಲ್ಲದೆ, ಜೆಡಿಎಸ್‌ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿತ್ತು. ಹಳೆ ಮೈಸೂರಿನಲ್ಲಿ ಗಟ್ಟಿ ನೆಲೆ ಹೊಂದಿದ್ದ ತುಮಕೂರು ಮತ್ತು ಮಂಡ್ಯದಂತಹ ಕ್ಷೇತ್ರಗಳನ್ನೇ ಉಳಿಸಿಕೊಳ್ಳಲಾರದೆ ಪಕ್ಷವೂ ಉಳಿಯದು ಎಂಬ ಅವ್ಯಕ್ತ ಭಾವವಿತ್ತು. ಸಾಲದ್ದಕ್ಕೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಕೂಡ ಹಳೆ ಮೈಸೂರಿನಲ್ಲಿ ಪಕ್ಷದ ಬೇರುಗಳನ್ನು ವಿಸ್ತಾರಗೊಳಿಸಬೇಕೆಂಬ ಗಟ್ಟಿ ನಿರ್ಧಾರ ಮಾಡಿತ್ತು.

ಒಡಕು ಧ್ವನಿಗೆ ಒಗ್ಗಟ್ಟಿನ ಮಂತ್ರ
ಇದೆಲ್ಲವೂ ಪಕ್ಷದ ಬೆಳವಣಿಗೆಗೆ ಮಾರಕ ಎಂಬುದನ್ನು ಅರಿತ ಜೆಡಿಎಸ್‌ ನಾಯಕರು, ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯೊಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮಹತ್ವದ ನಿರ್ಧಾರ ಮಾಡಿದ್ದರು. ಆರಂಭದಲ್ಲಿ ಈ ಮೈತ್ರಿಯೂ ಮುರಿದು ಬೀಳುವ ಮಾತುಗಳು ಕೇಳಿಬಂದಿತ್ತಲ್ಲದೆ, ಮೇಲ್ಮಟ್ಟದ ನಾಯಕರು ಹೊಂದಾಣಿಕೆ ಮಾಡಿಕೊಂಡರೂ ಬಿಜೆಪಿ ಕಾರ್ಯಕರ್ತರೊಂದಿಗೆ ಜೆಡಿಎಸ್‌ ಕಾರ್ಯಕರ್ತರು ಹೊಂದಿಕೊಳ್ಳುವುದಿಲ್ಲ ಎಂಬ ಒಡಕು ಧ್ವನಿಯೇ ಹೆಚ್ಚಾಗಿತ್ತು.

ಇದನ್ನೆಲ್ಲಾ ಮೀರಿ ಪಕ್ಷದ ಹಿತಕ್ಕಾಗಿ ಮೈತ್ರಿ ಸಮನ್ವಯಗೊಳಿಸಿಕೊಂಡ ನಾಯಕರು, ಕಾರ್ಯಕರ್ತರಿಗೂ ಸ್ಪಷ್ಟ ಸಂದೇಶಗಳನ್ನು ನೀಡುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದರು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ಸೇ ಎದುರಾಳಿ ಎಂಬುದನ್ನು ತಿಳಿದ ದಳಪತಿಗಳು, ಕಮಲಪತಿಗಳನ್ನು ಒಪ್ಪಿ ಅಪ್ಪಿಕೊಂಡರು. ಯಾವುದೇ ಒಳ ಏಟುಗಳಿಗೂ ಅವಕಾಶ ಕೊಡದೆ, ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದರು. ಎಲ್ಲರ ಫ‌ಲವಾಗಿ ಇಂದು ಒಂದು ಸ್ಥಾನದಲ್ಲಿದ್ದ ಜೆಡಿಎಸ್‌ ಎರಡು ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದು, ಅದರಲ್ಲೂ ಕಳೆದ ಬಾರಿ ಕಳೆದುಕೊಂಡಿದ್ದ ಮಂಡ್ಯ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಂಡಿದೆ. ಬೋನಸ್‌ ಎನ್ನುವಂತೆ ಕೋಲಾರದಲ್ಲೂ ವಿಜಯಮಾಲೆ ತೊಟ್ಟಿದ್ದು, ಹಾಸನದಲ್ಲಿ ಸ್ವಯಂಕೃತ ಅಪರಾಧ ಹಾಗೂ ಕಾಂಗ್ರೆಸ್‌ನ ಚಿತಾವಣೆಯಿಂದ ಸೋತಿದ್ದೇವೆ ಎಂದು ಸಮಾಧಾನಪಟ್ಟುಕೊಂಡಿದೆ.

Advertisement

ಕೈ ಕಟ್ಟಿ ಹಾಕಿ, ಬೇರು ವಿಸ್ತರಿಸುವ ಸಮಯ:
ಅಂದರೆ ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡರಲ್ಲಿ ಗೆಲ್ಲುವ ಮೂಲಕ ಶೇ.80 ರಷ್ಟು ಸ್ಥಾನಗಳನ್ನು ಗೆದ್ದಂತಾಗಿದೆ. ಒಟ್ಟಾರೆ ಚಲಾವಣೆಯಾಗಿರುವ ಮತಗಳ ಪೈಕಿ ಸುಮಾರು ಶೇ.5.60ರಷ್ಟು ಮತವು ಜೆಡಿಎಸ್‌ಗೆ ಬತ್ತಳಿಕೆಗೆ ಬಂದಿದೆ. ಚಿಂತೆಗಳು ದೂರಾಗಿ, ಮೈಕೊಡವಿಕೊಂಡು ಎದ್ದಿರುವ ಜೆಡಿಎಸ್‌, ಪ್ರಸ್ತುತ ವಿಧಾನ ಪರಿಷತ್‌ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಸ್ಥಳೀಯ ಸಂಸ್ಥೆಗಳು, ಬಿಬಿಎಂಪಿ ಚುನಾವಣೆಗಳಲ್ಲೂ ಇದೇ ರೀತಿ ಹೊಂದಾಣಿಕೆಯನ್ನು ಕೆಲಸ ಮಾಡಿದರೆ, ಕಾಂಗ್ರೆಸ್‌ನ್ನು ಕಟ್ಟಿ ಹಾಕುವುದರ ಜತೆಗೆ ಜೆಡಿಎಸ್‌ನ ಬೇರುಗಳನ್ನು ಮತ್ತಷ್ಟು ಹರಡಬಹುದು ಎಂಬ ಲೆಕ್ಕಾಚಾರವಿದೆ.

-ಶೇಷಾದ್ರಿ ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next