Advertisement

Thekkatte ಅತಂತ್ರ ಸ್ಥಿತಿಯಲ್ಲಿ ಶ್ರೀ ನಾರಾಯಣ ಗುರು ಶಾಲೆ ಮಕ್ಕಳು

10:55 PM Jun 10, 2024 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ನಾರಾಯಣಗುರು ವಸತಿ ಶಾಲೆಯ ಮಕ್ಕಳಿಗೆ ಪ್ರತ್ಯೇಕ ಕಟ್ಟಡದ ವ್ಯವಸ್ಥೆ ಕಲ್ಪಿಸ
ಬೇಕು ಎಂದು ಆಗ್ರಹಿಸಿ ಬೇರೆ ಬೇರೆಜಿಲ್ಲೆಗಳಿಂದ ಬಂದಿರುವ ಮಕ್ಕಳ ಪೋಷಕರು ಸೋಮವಾರ ಒಟ್ಟಾಗಿ
ಪ್ರಾಂಶುಪಾಲರಿಗೆ ಮನವಿ ಮಾಡಿದ್ದಾರೆ.

Advertisement

2 ವರ್ಷಗಳ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗೆ ತಲಾ 1ರಂತೆ ಶ್ರೀ ನಾರಾಯಣಗುರು ವಸತಿ ಶಾಲೆ ಆರಂಭಿಸಿ ಬಜೆಟ್‌ನಲ್ಲಿ ಪ್ರತೀ 18 ಕೋ.ರೂ. ಘೋಷಿಸಿತ್ತು. ಅಲ್ಲಿ 6ರಿಂದ 10ನೇ ತರಗತಿ ವರೆಗೆ ಶಿಕ್ಷಣ ನೀಡಲಾಗುತ್ತಿದೆ.

ಮೊರಾರ್ಜಿ ಶಾಲೆಯ ಕಟ್ಟಡ ಗರಿಷ್ಠ 250 ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಯೋಗ್ಯವಾಗಿದ್ದು 219 ವಿದ್ಯಾರ್ಥಿಗಳಿದ್ದಾರೆ. ಶ್ರೀ ನಾರಾಯಣ ಗುರು ಶಾಲೆಯ 94 ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಇರುವ ಕಾರಣ ಅವರಿಗೆ ತರಗತಿ ಹಾಗೂ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಿದ್ದರೂ ಪಾಠ ಪ್ರವಚನಕ್ಕೆ ಪ್ರತ್ಯೇಕ ಶಿಕ್ಷಕರ ಹಾಗೂ ತರಗತಿ ಕೋಣೆಗಳ ಕೊರತೆಗಳು ಸೇರಿದಂತೆ ಮೂಲಸೌಕರ್ಯದ ಕೊರತೆ ಕಾಡುತ್ತಿದೆ.

ಆದ್ದರಿಂದ ಮಕ್ಕಳನ್ನು ಸುವ್ಯವಸ್ಥಿತವಾದ ಕಟ್ಟಡಕ್ಕೆ ಸ್ಥಳಾಂತರಿಸುವ ವರೆಗೆ ಶಾಲೆಗೆ ಕಳುಹಿಸುವುದಿಲ್ಲ; ಈ ಬಗ್ಗೆ ಸ್ಥಳೀಯ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ನಾರಾಯಣ ಗುರು ವಸತಿ ಶಾಲಾ ಪೋಷಕರ ಸಮಿತಿಯ ಸದಸ್ಯ ಸತೀಶ್‌ ನಾಯ್ಕ ತಿಳಿಸಿದ್ದಾರೆ.ಪ್ರಸ್ತುತ ಕುಂದಾಪುರ, ಉಡುಪಿ ಪರಿಸರದ ಪೋಷಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಉಳಿದ ಮಕ್ಕಳು ಇದೇ ವಸತಿ ಶಾಲೆಯಲ್ಲಿ ಇದ್ದಾರೆ.

ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಈಗಾಗಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
– ಶೈಲಾ ಶೇಟ್‌,
ಪ್ರಭಾರ ಪ್ರಾಂಶುಪಾಲೆ, ಶ್ರೀ ನಾರಾಯಣ ಗುರು ವಸತಿ ಶಾಲೆ

Advertisement

ಶ್ರೀ ನಾರಾಯಣ ಗುರು ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಅರಿತು ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನ ಕೋಟೇಶ್ವರದ ಖಾಸಗಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಲಾಗಿತ್ತು. ಆ ಕಟ್ಟಡದಲ್ಲಿ ಸದ್ಯ ಇಂದಿರಾ ಗಾಂಧಿ ವಸತಿ ಶಾಲೆ ನಡೆಯುತ್ತಿದ್ದು, ಅವರು ಸಿದ್ದಾಪುರದಲ್ಲಿ ನಿರ್ಮಾಣಗೊಂಡಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಬೇಕಿತ್ತು. ಆದರೆ ಅಲ್ಲಿ ವಿದ್ಯುತ್‌ ಸಂಪರ್ಕ ವಿಳಂಬವಾಗಿರುವುದು ಸಮಸ್ಯೆಗೆ ಕಾರಣ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗುವುದು.
– ಕಿರಣ್‌ ಕುಮಾರ್‌ ಕೊಡ್ಗಿ,
ಶಾಸಕರು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next