Advertisement

ಮೈಸೂರು ನಗರಪಾಲಿಕೆ ಕೈ ವಶಕ್ಕೆ ಮೀಸಲಾತಿ ಅಸ್ತ್ರ ಪ್ರಯೋಗ

01:17 PM Jan 03, 2018 | |

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಶತಪ್ರಯತ್ನ ನಡೆಸಿ ವಿಫ‌ಲವಾಗಿದ್ದ ಕಾಂಗ್ರೆಸ್‌, ಇದೀಗ ಮೀಸಲಾತಿ ಅಸ್ತ್ರ ಪ್ರಯೋಗದ ಮೂಲಕ ಪಾಲಿಕೆ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ತವರಿನಲ್ಲಿ ಪಾಲಿಕೆ ಅಧಿಕಾರ ಹಿಡಿಯಲು ಕಳೆದ ನಾಲ್ಕು ಅವಧಿಯಲ್ಲೂ ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸಿತ್ತು. ಜೆಡಿಎಸ್‌-ಬಿಜೆಪಿ ದೋಸ್ತಿಯಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಆದರೆ, ಚುನಾವಣಾ ವರ್ಷದಲ್ಲಿ ಪಾಲಿಕೆ ಅಧಿಕಾರ ಹಿಡಿಯಲೇಬೇಕೆಂಬ ತೀರ್ಮಾನ ಮಾಡಿದ್ದ ಕಾಂಗ್ರೆಸ್‌,

ಮೀಸಲಾತಿ ಅಸ್ತ್ರದ ಪ್ರಯೋಗದಿಂದ ಪಾಲಿಕೆ ಮೇಯರ್‌ ಸ್ಥಾನ ಗಿಟ್ಟಿಸಿಕೊಳ್ಳುವುದು ಖಚಿತವಾಗಿದೆ. ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿಗೆ ಸಡ್ಡು ಹೊಡೆದಿರುವ ಸರ್ಕಾರ, ಮೀಸಲು ಅಸ್ತ್ರ  ಪ್ರಯೋಗದಿಂದ ಮೇಯರ್‌-ಉಪಮೇಯರ್‌ ಸ್ಥಾನಗಳಿಗೆ ಬಹುತೇಕ ಅವಿರೋಧ ಆಯ್ಕೆಯಾಗಲು ಅವಕಾಶ ಕಲ್ಪಿಸಿಕೊಟ್ಟಿದೆ.

ಕೈಗೆ ಮೇಯರ್‌ ಪಟ್ಟ: ನಗರ ಪಾಲಿಕೆಯ ನಾಲ್ಕನೇ ಅವಧಿಯ ಮೇಯರ್‌ ಎಂ.ಜೆ.ರವಿಕುಮಾರ್‌ ಹಾಗೂ ಉಪ ಮೇಯರ್‌ ರತ್ನಾ ಲಕ್ಷ್ಮಣ್‌ ಅವರ ಅಧಿಕಾರಾವಧಿ ಡಿ.6ರಂದು ಕೊನೆಗೊಂಡಿದೆ. ಸರ್ಕಾರ ಮೇಯರ್‌ ಸ್ಥಾನಕ್ಕೆ ಎಸ್ಸಿ(ಮಹಿಳೆ), ಉಪ ಮೇಯರ್‌ ಸ್ಥಾನಕ್ಕೆ ಎಸ್ಟಿ(ಮಹಿಳೆ) ಮೀಸಲಾತಿ ಘೋಷಣೆ ಮಾಡಿದೆ. ಸರ್ಕಾರದ ಮೀಸಲಾತಿ ಪ್ರಕಾರ ಜೆಡಿಎಸ್‌-ಬಿಜೆಪಿಯಲ್ಲಿ ಎಸ್ಸಿ ಮಹಿಳೆ ಇಲ್ಲದ ಕಾರಣ,

ಉಭಯ ಪಕ್ಷಗಳ ದೋಸ್ತಿ ನಡುವೆಯೂ ಮಹಾನಗರ ಪಾಲಿಕೆ ಮೇಯರ್‌ ಸ್ಥಾನ ಕಾಂಗ್ರೆಸ್‌ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಜೆಡಿಎಸ್‌ನಲ್ಲಿ ಎಸ್ಟಿ ಮಹಿಳೆ ಇರುವುದರಿಂದ ಉಪ ಮೇಯರ್‌ ಸ್ಥಾನ ಜೆಡಿಎಸ್‌ ಪಾಲಾಗಲಿದೆ. ಇದರೊಂದಿಗೆ ನಾಲ್ಕು ಅವಧಿಯಿಂದಲೂ ಉಪ ಮೇಯರ್‌ ಸ್ಥಾನಕ್ಕೆ ತೃಪ್ತಿಪಡುತ್ತಿದ್ದ ಬಿಜೆಪಿ ಕೊನೆಯ ಅವಧಿಯಲ್ಲಿ ಯಾವುದೇ ಅಧಿಕಾರವಿಲ್ಲದೆ ನಿರಾಶೆ ಅನುಭವಿಸುವಂತಾಗಿದೆ.

Advertisement

ಯಾರಿಗೆ ಮೇಯರ್‌ ಕುರ್ಚಿ?: ಕಳೆದ ನಾಲ್ಕು ಅವಧಿಯಲ್ಲಿ ಪಾಲಿಕೆ ವಿರೋಧ ಪಕ್ಷದಲ್ಲಿ ಕುಳಿತಿದ್ದ ಕಾಂಗ್ರೆಸ್‌, ಸರ್ಕಾರದ ಚಾಣಾಕ್ಷ ನಡೆ ಮೂಲಕ ಮೇಯರ್‌ ಸ್ಥಾನ ಪಡೆಯುವುದು ಖಚಿತವಾಗಿದೆ. ಈ ಬಾರಿ ಮೇಯರ್‌ ಸ್ಥಾನ ಎಸ್ಸಿ ಮಹಿಳೆಗೆ ಮೀಸಲು ನಿಗದಿಪಡಿಸಿದ್ದು, ಈ ವರ್ಗದಿಂದ ಆಯ್ಕೆಯಾದ ಪಾಲಿಕೆ ಸದಸ್ಯರು, ಕಾಂಗ್ರೆಸ್‌ ಹೊರತುಪಡಿಸಿದರೆ ಜೆಡಿಎಸ್‌-ಬಿಜೆಪಿಯಲ್ಲಿ ಇಲ್ಲ.

ಆದರೆ ಕಾಂಗ್ರೆಸ್‌ನಿಂದ 24ನೇ ವಾರ್ಡ್‌ನ ಭಾಗ್ಯವತಿ, 50ನೇ ವಾರ್ಡಿನ ಕಮಲಾ ಉದಯ್‌ ಎಸ್ಸಿ ವರ್ಗದಿಂದ ಆಯ್ಕೆಯಾಗಿದ್ದಾರೆ. ಹೀಗಾಗಿ ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನ ಭಾಗ್ಯವತಿ ಹಾಗೂ ಕಮಲಾ ಉದಯ್‌ ನಡುವೆಯೇ ಪೈಪೋಟಿ ಉಂಟಾಗಲಿದ್ದು, ಬಿ.ಭಾಗ್ಯವತಿ ಬೋವಿ ಸಮುದಾಯಕ್ಕೆ ಸೇರಿದವರಾಗಿದ್ದು, ಕಮಲ ಎಸ್ಸಿ ಬಲಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಅಂತಿಮವಾಗಿ ಯಾರಿಗೆ ಮೇಯರ್‌ ಸ್ಥಾನ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇಂದಿರಾ ಅವಿರೋಧ ಆಯ್ಕೆ: ಕಳೆದ ನಾಲ್ಕು ಅವಧಿಗೂ ಮೇಯರ್‌ ಪಟ್ಟಕ್ಕೇರಿದ್ದ ಜೆಡಿಎಸ್‌ಗೆ ಈ ಬಾರಿ ಮೇಯರ್‌ ಸ್ಥಾನ ಕೈತಪ್ಪಿದ್ದರೂ, ಉಪ ಮೇಯರ್‌ ಸ್ಥಾನ ಮಾತ್ರ ಖಚಿತವಾಗಿ ಲಭಿಸಲಿದೆ. ಅದರಂತೆ ನಗರ ಪಾಲಿಕೆಯ ಏಕೈಕ ಪರಿಶಿಷ್ಟ ಪಂಗಡ(ಎಸ್ಟಿ) ಮಹಿಳಾ ಸದಸ್ಯೆಯಾಗಿರುವ ಕ್ಯಾತಮಾರನಹಳ್ಳಿಯ 61ನೇ ವಾರ್ಡ್‌ನ ಜೆಡಿಎಸ್‌ ಸದಸ್ಯೆ ಇಂದಿರಾ ಮಹೇಶ್‌ ಉಪ ಮೇಯರ್‌ ಆಗಿ ಅವಿರೋಧ ಆಯ್ಕೆಯಾಗಲಿದ್ದಾರೆ.

ರಾಜ್ಯ ಸರ್ಕಾರ ಮಂಗಳವಾರ ಪಾಲಿಕೆ ಮೀಸಲಾತಿ ಘೋಷಣೆ ಮಾಡಿದ್ದು, ಮೀಸಲಾತಿ ಪ್ರತಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ತಲುಪಿದ ಒಂದು ವಾರದೊಳಗೆ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಲಿದೆ.

* ಸಿ.ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next