ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ಒಕ್ಕಲಿಗ ಹಾಗೂ ಪಂಚಮಸಾಲಿಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಎರಡು ಪ್ರಬಲ ಸಮದಾಯ ಸೇರಿದಂತೆ ಕೆಲವು ಸಣ್ಣಪುಟ್ಟ ಜಾತಿಗಳು ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವಂತೆ ಈಗಾಗಲೇ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಅರ್ಜಿ ಸಲ್ಲಿಸಿವೆ.
ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಜನವರಿ ಮೊದಲ ವಾರದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಬಜೆಟ್ ಅಧಿವೇಶನದಲ್ಲಿ ಸದನದ ಒಪ್ಪಿಗೆ ಪಡೆದು, ಪಂಚಮಸಾಲಿಗಳನ್ನು 2ಎ ಗೂ, ಒಕ್ಕಲಿಗರ ಮೀಸಲಾತಿ ಶೇಕಡ 4 ರಿಂದ 8 ಇಲ್ಲವೇ 10 ಕ್ಕೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೀಸಲಾತಿಯಲ್ಲೇ ಬ್ರಾಹ್ಮಣ ಮತ್ತು ಜೈನ ಸಮುದಾಯಕ್ಕೆ ಅನುಕೂಲ ಮಾಡಿಕೊಡುವುದು ಸೇರಿದಂತೆ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ತಜ್ಞರು ಹಾಗೂ ಆರ್‌ಎಸ್‌ಎಸ್ ಮುಖಂಡರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾಲೋಚಿಸಿದ್ದಾರೆ ಎಂದು ಹೇಳಲಾಗಿದೆ.
ಪ್ರಮುಖ ಸಮುದಾಯಗಳನ್ನು ಓಲೈಸಲು ಚುನಾವಣೆಗೂ ಮುನ್ನ ಮೀಸಲಾತಿ ಘೋಷಣೆ ತಂತ್ರ ರೂಪಿಸಲಾಗಿದೆ. ಅಷ್ಟೇ ಅಲ್ಲದೆ ಅಲ್ಪಸಂಖ್ಯಾತರಿಗಿರುವ ಶೇ.4 ರಷ್ಟು ಮೀಸಲಾತಿ ಶೇ.2 ಕ್ಕೆ ಇಳಿಸಿ ಶೇ. 50 ರಷ್ಟರಲ್ಲಿರುವ ಮೀಸಲಾತಿಯಲ್ಲೂ ಕೆಲ ಬದಲಾವಣೆ ಮಾಡುವುದು ಸೇರಿದೆ ಎಂದು ತಿಳಿದು ಬಂದಿದೆ.