Advertisement

ವರದಿ ಬಳಿಕ ಮೀಸಲಾತಿ ಹೆಚ್ಚಳ ನಿರ್ಧಾರ

11:18 PM Oct 13, 2019 | Lakshmi GovindaRaju |

ಬೆಂಗಳೂರು: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವ ಬಗ್ಗೆ ಎಚ್‌.ಎನ್‌. ನಾಗಮೋಹನದಾಸ್‌ ನೇತೃತ್ವದ ಸಮಿತಿ ವರದಿ ಸಲ್ಲಿಸಿದ ನಂತರ ಅದನ್ನು ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಭಾನುವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯ.

Advertisement

ಈ ನಿಟ್ಟಿನಲ್ಲಿ ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಸಮುದಾಯಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ಆ ಮೂಲಕ ಸ್ವಾಭಿಮಾನದಿಂದ ಬದುಕುವಂತೆ ಮಾಡಲಾಗುವುದು ಎಂದರು. ಅಲ್ಲದೆ, ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಿಸುವ ಸಂಬಂಧ ಸಮಿತಿ ರಚಿಸಲಾಗಿದೆ.

ಸಮಿತಿಯಿಂದ ಆದಷ್ಟು ಬೇಗ ವರದಿ ತರಿಸಿಕೊಂಡು, ನಂತರ ಅದರ ಶಿಫಾರಸುಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕಾದೇವಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ. ಕುಮಾರ ನಾಯಕ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಸಂಗಪ್ಪ,

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎ. ಹನುಮನರಸಯ್ಯ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಕಮಲಾ ಹಂಪನಾ, ಡಾ.ಜಿ. ರಂಗಯ್ಯ ಮತ್ತು ಓಬಳಪ್ಪ ಅವರಿಗೆ “ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪರಿಶಿಷ್ಟ ವರ್ಗಗಳ ವಸತಿ ಶಾಲೆಗಳಲ್ಲಿ ಅಧ್ಯಯನ ಮಾಡಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಶಿರಬಾಗಿ ನಿಮ್ಮ ಪಾದಕ್ಕೆ ನಮಿಸುತ್ತೇವೆ: “ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎನ್ನುವುದು ಬಹುದಿನಗಳ ಬೇಡಿಕೆ. ಇದಕ್ಕೆ ಪ್ರತಿಯಾಗಿ ನೀವು ಬಯಸಿದರೆ ಶಿರಬಾಗಿ ನಿಮ್ಮ ಪಾದಕ್ಕೆ ನಮಿಸುತ್ತೇವೆ’ ಎಂದು ಮಾಜಿ ಸಚಿವ ಮತ್ತು ಶಾಸಕ ನರಸಿಂಹ ನಾಯ್ಕ (ರಾಜು ಗೌಡ), ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹೇಳಿದರು.

Advertisement

“ಸರ್ಕಾರದಿಂದ ನಾವು ಯಾವುದೇ ಉಪ ಮುಖ್ಯಮಂತ್ರಿ ಅಥವಾ ಮಂತ್ರಿ ಸ್ಥಾನ ಕೇಳುವುದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ. ಈ ಬೇಡಿಕೆ ಈಡೇರಿದರೆ, ದ್ರೋಣಾಚಾರ್ಯರಿಗೆ ಏಕಲವ್ಯ ಹೆಬ್ಬೆರಳು ಕತ್ತರಿಸಿ ಕೊಟ್ಟಂತೆ, ನೀವು ಬಯಸಿದರೆ ಶಿರಬಾಗಿ ನಿಮಗೆ ನಮಿಸುತ್ತೇವೆ’ ಎಂದರು. “ಈ ಹಿಂದೆ ತಾವು ಮುಖ್ಯಮಂತ್ರಿ ಆಗಿದ್ದಾಗಲೇ ವಾಲ್ಮೀಕಿ ಜಯಂತಿಯನ್ನು ಸರ್ಕಾರದಿಂದ ಆಚರಿಸುವಂತೆ ಆದೇಶ ಹೊರಡಿಸುವ ಮೂಲಕ ಜನಾಂಗದ ಪ್ರೀತಿಗೆ ಪಾತ್ರರಾಗಿದ್ದೀರಿ.

ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಈ ಸಂಬಂಧ ಈಗಾಗಲೇ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಆದಷ್ಟು ಬೇಗ ಆ ಸಮಿತಿಯಿಂದ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಪರಿಶಿಷ್ಟ ವರ್ಗಕ್ಕಾಗಿ ಪ್ರತ್ಯೇಕ ಸಚಿವಾಲಯ ರಚಿಸಬೇಕು. ಆ ಮೂಲಕ ಸಮುದಾಯದ ಅಭಿವೃದ್ಧಿಗೆ ನೆರವು ನೀಡಬೇಕು’ ಎಂದು ಮನವಿ ಮಾಡಿದರು.

ಮೀಸಲು ಕೊಡಿಸದಿದ್ರೆ ರಾಜಕೀಯ ನಿವೃತ್ತಿ
ಚಿತ್ರದುರ್ಗ: “ಎರಡು ತಿಂಗಳಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಕೊಡಿಸಲು ಆಗದಿದ್ದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಹಿಂದಿನ ಸರ್ಕಾರ ಮೀಸಲಾತಿ ಸಂಬಂಧ ವರದಿ ಸಲ್ಲಿಸಲು ನಾಗಮೋಹನ್‌ ದಾಸ್‌ ನೇತೃತ್ವದ ಆಯೋಗ ನೇಮಿಸಿತ್ತು. ಆದರೆ, ಕಾಲಮಿತಿ ಇರಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಶನಿವಾರ ಚರ್ಚಿಸಿ, ವರದಿ ಸಲ್ಲಿಸಲು ಆಯೋಗಕ್ಕೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ.

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಅಗತ್ಯವಾಗಿದ್ದು, ಈ ಬಗ್ಗೆ ಪ್ರಯತ್ನ ಮುಂದುವರಿಯಲಿದೆ. ಅಲ್ಲದೆ, ಎರಡು ತಿಂಗಳಲ್ಲಿ ಇದನ್ನು ಕೊಡಿಸಲಾಗದಿದ್ದಲ್ಲಿ ರಾಜಕೀಯ ನಿವೃತ್ತಿ ಪಡೆಯುವೆ ಎಂದರು. “ನಾನು ಉಪಮುಖ್ಯಮಂತ್ರಿ ಆಗಬೇಕು ಎನ್ನುವುದು ನಾಡಿನ ಎಲ್ಲ ಸಮುದಾಯಗಳ ಆಶಯವಾಗಿತ್ತು. ಮಠಾಧಿಧೀಶರು ಕೂಡಾ ಇದನ್ನು ಬಯಸಿದ್ದರು. ಪಕ್ಷ ಮತ್ತು ಹೈಕಮಾಂಡ್‌ ನನಗೆ ಆರೋಗ್ಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ನೀಡಿದೆ. ಇದರಲ್ಲೇ ತೃಪ್ತಿ ಕಾಣುತ್ತೇನೆ’ ಎಂದರು.

ರಾಜ್ಯದಲ್ಲಿ ನಾಲ್ಕೈದು ಲಕ್ಷ ವಾಲ್ಮೀಕಿ ಜನಾಂಗದವರಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು ಎನ್ನುವುದು ದಶಕಗಳ ಬೇಡಿಕೆ. ಜತೆಗೆ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಎರಡು ತಿಂಗಳಲ್ಲಿ ಸರ್ಕಾರ ಈ ಸಂಬಂಧ ಕ್ರಮ ಕೈಗೊಳ್ಳಬೇಕು.
-ಪ್ರಸನ್ನಾನಂದಪುರಿ ಸ್ವಾಮೀಜಿ, ಹರಿಹರದ ವಾಲ್ಮೀಕಿ ಗುರುಪೀಠ

Advertisement

Udayavani is now on Telegram. Click here to join our channel and stay updated with the latest news.

Next