Advertisement

Reservation for Job; ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲು: ಸರ್ಕಾರ ಯೂಟರ್ನ್‌

01:38 AM Jul 18, 2024 | Team Udayavani |

ಬೆಂಗಳೂರು: ರಾಜ್ಯದ ಎಲ್ಲ ಖಾಸಗಿ ಕೈಗಾ ರಿಕೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿ ತಾತ್ಮಕ ಹುದ್ದೆಗಳಲ್ಲಿ ಶೇ. 50 ಹಾಗೂ ಆಡಳಿತಾತ್ಮಕ ವಲ್ಲದ ಹುದ್ದೆಗಳಲ್ಲಿ ಶೇ. 75 ಮೀಸಲು ನೀಡುವ ಮಸೂದೆಗೆ ಕೈಗಾರಿಕೋದ್ಯಮಿಗಳ ಜತೆಗೆ ಸಂಪುಟ ಸಹೋದ್ಯೋಗಿಗಳಿಂದಲೇ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರಕಾರವು ವಿಧೇಯಕವನ್ನು ತಾತ್ಕಾಲಿಕವಾಗಿ
ತಡೆ ಹಿಡಿದಿದೆ.

Advertisement

ಸಂಪುಟ ಅನುಮೋದನೆ ನೀಡಲಾಗಿದ್ದ ಮಸೂದೆಯ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತೂಮ್ಮೆ ಪರಾಮರ್ಶಿಸಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಕಾರ್ಯಾ ಲಯ ಬುಧವಾರ ರಾತ್ರಿ ಪ್ರಕಟಿಸುವುದರೊಂದಿಗೆ ಇದೇ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಕ್ಷೀಣಿಸಿದೆ. ಜು. 22ರಂದು ಸಚಿವ ಸಂಪುಟ ಸಭೆ ಕರೆದಿದ್ದು ಈ ವಿಚಾರವನ್ನು ಪರಾಮರ್ಶೆಗೆ ಒಳಪಡಿಸಲಿದೆ. ಇದಕ್ಕಾಗಿ ಸಂಪುಟ ಉಪಸಮಿತಿಯನ್ನೂ ರಚಿಸಿದೆ.

ಏನೇನಾಗಿತ್ತು?
ಸಂಪುಟ ನಿರ್ಣಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಟ್ವೀಟ್‌ ಮಾಡುತ್ತಿದ್ದಂತೆ ಔದ್ಯಮಿಕ ವಲಯ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು. ಬೃಹತ್‌ ಕೈಗಾರಿಕೆ ಹಾಗೂ ಐಟಿಬಿಟಿ ಇಲಾಖೆ ಸಚಿವರು ಹಾಗೂ ಅಧಿಕಾರಿಗಳಿಗೂ ಉದ್ಯಮಿಗಳು ಕರೆ ಮಾಡಿ ಪ್ರತಿರೋಧ ವ್ಯಕ್ತಪಡಿಸಿದ್ದರು. ಇದರ ಜತೆಗೆ, ಆಂಧ್ರ, ಕೇರಳ ಸೇರಿದಂತೆ ನೆರೆರಾಜ್ಯಗಳು ಕೂಡ ಈ ವಿವಾದದ ಲಾಭ ಪಡೆದುಕೊಂಡು ತಮ್ಮ ರಾಜ್ಯಕ್ಕೆ ಬರುವಂತೆ ಕರ್ನಾಟಕದ ಕಂಪೆನಿಗಳಿಗೆ ಮುಕ್ತ ಆಹ್ವಾನವನ್ನೂ ನೀಡಲಾರಂಭಿಸಿದ್ದವು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸರಕಾರ ಯೂಟರ್ನ್ ಹೊಡೆದು ಕನ್ನಡಿಗರ ಮೀಸಲು ಮಸೂದೆಗೆ ತಾತ್ಕಾಲಿಕ ತಡೆ ತಂದು ಘೋಷಣೆ ಹೊರಡಿಸಿದೆ. ಸರಕಾರದ ಉನ್ನತ ಮೂಲಗಳ ಪ್ರಕಾರ, ಸಿದ್ದರಾಮಯ್ಯ ವಿವಿಧ ಇಲಾಖೆ ಸಚಿವರು ಹಾಗೂ ಅಧಿಕಾರಿಗಳ ಜತೆಗೆ ಈ ಸಂಬಂಧ ಚರ್ಚೆ ನಡೆಸಲು ಬಯಸಿದ್ದಾರೆ. ಬಳಿಕ ಮಸೂದೆಯ ಸ್ವರೂಪದಲ್ಲಿ ಬದಲಾವಣೆಗಳಾದರೂ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಚರ್ಚೆಯೇ ನಡೆದಿಲ್ಲ
ಸಂಪುಟದ ಹಿರಿಯ ಸಚಿವರೊಬ್ಬರ ಪ್ರಕಾರ, ಈ ವಿಚಾರ ಸಚಿವ ಸಂಪುಟ ಸಭೆಗೆ ಬರುವುದಕ್ಕೂ ಮುನ್ನ ಅಂತರ್‌ ಇಲಾಖಾ ಮಟ್ಟದಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಕಾರ್ಮಿಕ ಇಲಾಖೆಯಿಂದ ಅಂತಹ ಪ್ರಯತ್ನವೇ ನಡೆದಿಲ್ಲ.

Advertisement

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ “ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕವು ಇನ್ನೂ ಸಿದ್ಧತೆಯ ಹಂತದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು” ಎಂದು ಎಕ್ಸ್‌ (ಟ್ವಿಟರ್‌) ನಲ್ಲಿ ಬರೆದು ಕೊಂಡಿದ್ದಾರೆ.

ರಾಜ್ಯ ಸರ್ಕಾರದ ಪ್ರಸ್ತಾವಿತ ವಿಧೇಯಕಕ್ಕೆ ಉದ್ಯಮ ವಲಯದಿಂದ, ಪ್ರಮುಖ ಉದ್ಯಮಿಗಳಿಂದ ವ್ಯಾಪಕ ವಿರೋಧ, ಟೀಕೆ ವ್ಯಕ್ತವಾದ್ದರಿಂದ ಈ ವಿಧೇಯಕವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲು ಮುಂದಾಗಿದೆ.

ತಡೆಹಿಡಿಯಲು ಕಾರಣವೇನು?
1.  ಸಿ, ಡಿ ದರ್ಜೆ ನೌಕರರಿಗೆ ಶೇ. 100 ಉದ್ಯೋಗ ಮೀಸಲು ಎಂಬ ಅನಗತ್ಯ ವಿವಾದ

2. ಸರಕಾರದ ಮೀಸಲು ಮಸೂದೆಗೆ ಉದ್ಯಮ ಒಕ್ಕೂಟಗಳಿಂದ ಭಾರೀ ಆಕ್ಷೇಪ

3.  ವಿವಾದದ ಬೆನ್ನಲ್ಲೇ ರಾಜ್ಯದ ಖಾಸಗಿ ಕಂಪೆನಿಗಳಿಗೆ ನೆರೆರಾಜ್ಯಗಳಿಂದ ಗಾಳ

4.ಈ ನಿರ್ಧಾರದ ಬಗ್ಗೆ ಸರಕಾರದ ಇಲಾಖೆಗಳ ನಡುವೆಯೇ ಗೊಂದಲ, ಅಸಮಾಧಾನ

5. ದಿಢೀರ್‌ ನಿರ್ಧಾರ ಘೋಷಿಸಿದ್ದಕ್ಕೆ ಸಂಪುಟ ಸಹೋದ್ಯೋಗಿಗಳಿಂದಲೂ ವಿರೋಧ

6. ತರಾತುರಿ ಮಾಡಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದು ಬೇಡ ಎಂಬ ಉದ್ದೇಶ

Advertisement

Udayavani is now on Telegram. Click here to join our channel and stay updated with the latest news.

Next