Advertisement

ನಿವೇಶನ ಹಕ್ಕು ಪತ್ರ ನೀಡಲು ಆಗ್ರಹಿಸಿ ನಿವಾಸಿಗಳ ನಿರಶನ

03:22 PM Feb 11, 2022 | Team Udayavani |

ಮಸ್ಕಿ: ಪಟ್ಟಣದ ಸೋಮನಾಥ ನಗರದಲ್ಲಿ ವಾಸವಿರುವ 400ಕ್ಕೂ ಹೆಚ್ಚು ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ಹಕ್ಕಪತ್ರ ವಿತರಿಸಲು ಆಗ್ರಹಿಸಿ ಗುರುವಾರ ಸೋಮನಾಥ ನಗರ ಹಿತರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ಸೋಮನಾಥ ನಗರದಿಂದ ಆರಂಭವಾದ ಹೋರಾಟದ ರ್ಯಾಲಿ ವಾಲ್ಮೀಕಿ ವೃತ್ತ, ಕನಕ ಸರ್ಕಲ್‌, ಅಶೋಕ ವೃತ್ತದ ಮೂಲಕ ಸಾಗಿ ಹಳೆಯ ಬಸ್‌ ನಿಲ್ದಾಣದಲ್ಲಿನ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆ ಸ್ಥಳಕ್ಕೆ ಆಗಮಿಸಿ ಧರಣಿ ಆರಂಭಿಸಿದರು.

ಹೋರಾಟ ನಿರತ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಸಮಿತಿ ಮುಖಂಡ ಹನುಮಂತಪ್ಪ ವೆಂಕಟಾಪುರ, ಹೈಕೋರ್ಟ್‌ ಆದೇಶದಂತೆ ನೀರಾವರಿ ನಿಗಮದ ಅಧಿ ಕಾರಿಗಳು 30 ಹೆಚ್ಚು ವರ್ಷಗಳಿಂದ ವಾಸ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಆದರೆ, ನಾವುಗಳು ಯಾವುದೇ ಕಾರಣಕ್ಕೂ ಈ ಜಾಗ ಬಿಟ್ಟು ಕೊಡುವುದಿಲ್ಲ. ಸರ್ಕಾರ ನಮಗೆ ಇದೇ ಜಾಗದಲ್ಲಿ ಹಕ್ಕು ಪತ್ರ ಕೊಡಬೇಕು, ಒಂದು ವೇಳೆ ಕೊಡದಿದ್ದರೆ ತಹಶೀಲ್ದಾರ್‌ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳನ್ನು ಮುತ್ತಿಗೆ ಹಾಕಲಾಗುವುದು ಎಂದರು.

ಮುಖಂಡ ಮಲ್ಲಯ್ಯ ಬಳ್ಳಾ, ಮೌನೇಶ ನಾಯಕ, ಪುರಸಭೆ ಸದಸ್ಯ ಮಲ್ಲಯ್ಯ ಅಂಬಾಡಿ ಮಾತನಾಡಿದರು.

ಪುರಸಭೆ ಸದಸ್ಯರಾದ ಸುರೇಶ ಹರಸೂರು, ಚೇತನ ಪಾಟೀಲ್‌, ಕರವೇ ಅಧ್ಯಕ್ಷ ದುರ್ಗರಾಜ ವಟಗಲ್‌, ಸಿದ್ದು ಮುರಾರಿ ಸೇರಿದಂತೆ ಅನೇಕ ಮುಖಂಡರು ಇದ್ದರು. ತಹಶೀಲ್ದಾರ್‌ ಕವಿತಾ ಆರ್‌. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕೆ. ಮಲ್ಲಯ್ಯ, ಹನುಮಂತಮ್ಮ ನಾಯಕ ಇತರರು ಇದ್ದರು.

Advertisement

ಸರ್ವೇ ಕೈ ಬಿಡಲು ಸೂಚನೆ

ಬಸನಗೌಡ ನೀರಾವರಿ ನಿಗಮಕ್ಕೆ ಸೇರಿದ ಸೋಮನಾಥ ನಗರದಲ್ಲಿ ಯಾವುದೇ ಸರ್ವೇ ಕಾರ್ಯ ಮಾಡದಂತೆ ನೀರಾವರಿ ನಿಗಮದ ಅಧಿ ಕಾರಿಗಳಿಗೆ ಶಾಸಕ ಆರ್‌. ಬಸನಗೌಡ ಸೂಚಿಸಿದರು. ಧರಣಿ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಅವರು, ಸರ್ಕಾರಿ ಜಾಗದಲ್ಲಿ ಇಂತಿಷ್ಟು ವರ್ಷ ವಾಸ ಮಾಡಿದ್ದರೆ ಆ ಜಾಗ ಅವರಿಗೆ ಸೇರುತ್ತದೆ ಎಂಬ ಸರ್ಕಾರದ ನಿಯಮ ಇದೆ. ಸೋಮನಾಥ ನಗರದಲ್ಲಿ 30 ಕ್ಕೂ ಹೆಚ್ಚು ವರ್ಷಗಳಿಂದ ಬಡ ಕೂಲಿಕಾರ ಕುಟುಂಬಗಳು ವಾಸ ಮಾಡುತ್ತಿವೆ. ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ಅವರಿಗೆ ಇದೇ ಜಾಗದಲ್ಲಿ ಹಕ್ಕುಪತ್ರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಹಕ್ಕುಪತ್ರ ಕೊಡಿಸುವ ಪ್ರಯತ್ನ

ಪ್ರತಾಪಗೌಡ ಸೋಮನಾಥ ನಗರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಾಸ ಮಾಡುತ್ತಿರುವ ಬಡ ಕೂಲಿ ಕಾರ್ಮಿಕರ ಕುಟುಂಬಳಿಗೆ ಹಕ್ಕುಪತ್ರ ಕೊಡಿಸುವುದಕ್ಕಾಗಿ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹೇಳಿದರು.

ಧರಣಿ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಅವರು, ಹೈಕೋರ್ಟ್‌ ಆದೇಶ ಏನೇ ಇರಲಿ, ಅಲ್ಲಿಯ ನಿವಾಸಿಗಳ ಒಂದು ಕಟ್ಟೆಯನ್ನು ಒಡೆಯಲು ಬಿಡುವುದಿಲ್ಲ. ಸೋಮನಾಥ ನಗರದ ಹಕ್ಕುಪತ್ರ ಸಂಬಂಧ ನಾವ್ಯಾರು ರಾಜಕೀಯ ಮಾಡದೇ ತಮ್ಮ ಬೇಡಿಕೆಯನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಿ ಶೀಘ್ರ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next