Advertisement

ಡೆಂಘೀ ಭಯ ಓಡಿಸಲು ಸಂಶೋಧನೆ

12:14 PM Apr 11, 2018 | Team Udayavani |

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಜನರನ್ನು ವ್ಯಾಪಕವಾಗಿ ಕಾಡುತ್ತಿರುವ ಡೆಂಘೀ ಜ್ವರದ ಕುರಿತು ಜಾಗೃತಿ ಮೂಡಿಸುವ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳು ಒಟ್ಟಾಗಿ ವಿಶೇಷ ಸಂಶೋಧನೆ ನಡೆಸುತ್ತಿರುವುದಾಗಿ ಆರೋಗ್ಯ ವಿವಿ ಪ್ರಭಾರ ಕುಲಪತಿ ಡಾ.ಎಂ.ಕೆ.ರಮೇಶ್‌ ಹೇಳಿದ್ದಾರೆ.

Advertisement

ಆರೋಗ್ಯ ವಿವಿ ಸಿಂಡಿಕೇಟ್‌ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಐಎಸ್‌ಸಿ ಮತ್ತು ವಿವಿ ಅಧೀನದ ನಾಲ್ಕು ಕಾಲೇಜುಗಳ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಸಂಶೋಧನೆಗೆ 3 ಕೋಟಿ ರೂ. ಮೀಸಲಿಡಲಾಗಿದೆ.

ಡೆಂಘೀ ಜ್ವರದ ಬಾರದಂತೆ ಎಚ್ಚರಿಕೆ ವಹಿಸುವುದು, ರೋಗದ ಲಕ್ಷಣಗಳ ಬಗ್ಗೆ ತಿಳಿವಳಿಕೆ, ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ವಿಧಾನದ ಬಗ್ಗೆ ಜೈವಿಕ ವಿಜ್ಞಾನಿಗಳು ಉನ್ನತ ಮಟ್ಟದ ಅಧ್ಯಯನ ನಡೆಸಲಿದ್ದಾರೆ. ಇದರಿಂದ ಡೆಂಘೀ ಜ್ವರದ ಬಗ್ಗೆ ಇರುವ ಭಯವನ್ನು ದೂರವಾಗಿಸಲು ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ಸ್ಮಾರ್ಟ್‌ ಗ್ರಾಮ: ಆರೋಗ್ಯ ವಿವಿಯಿಂದ ಒಂದು ಹಳ್ಳಿಯನ್ನು ದತ್ತು ತೆಗದುಕೊಳ್ಳಲಿದ್ದೇವೆ. ಯಾವ ಹಳ್ಳಿ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಬೆಂಗಳೂರು ಸುತ್ತುಮುತ್ತಲಿನ ಪ್ರದೇಶದ ಒಂದು ಹಳ್ಳಿಯನ್ನೇ ಆಯ್ಕೆ ಮಾಡಿಕೊಳ್ಳುವ ಆಲೋಚನೆಯಿದೆ. ಆ ಹಳ್ಳಿಯನ್ನು “ಸ್ಮಾರ್ಟ್‌ ಗ್ರಾಮ’ವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕಾರ್ಯ ಮಾಡಲಿದ್ದೇವೆ.

ಚಿಕ್ಕಬಳ್ಳಾಪುರದಲ್ಲಿ ಮಗು ಮತ್ತು ತಾಯಿಯ ಆರೈಕೆಗಾಗಿ ವಿಶೇಷ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು. ಪ್ರಸಕ್ತ ಸಾಲಿನಲ್ಲಿ ಪಿಎಚ್‌.ಡಿ ಪದವಿಗೆ 294 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 169 ಮಂದಿ ಆಯ್ಕೆಯಾಗಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದ್ದ ಆಡ್‌ಬ್ಯಾಚ್‌ ವ್ಯವಸ್ಥೆ ತೆಗೆದುಹಾಕಿದ್ದೇವೆ. ಫ‌ಲಿತಾಂಶ ಬಂದ ಎರಡೇ ತಿಂಗಳಲ್ಲಿ ಪೂರಕ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದೇವೆ.

Advertisement

ಇದರಿಂದಾಗಿ 52 ವೈದ್ಯಕೀಯ ಕಾಲೇಜುಗಳ 2603 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 1455 ವಿದ್ಯಾರ್ಥಿಗಳು ಉತ್ತೀರ್ಣರಾಗಿ ತಮ್ಮ ಬ್ಯಾಚ್‌ನವರ ಜತೆಯೇ ಶಿಕ್ಷಣ ಮುಂದುವರಿಸಿದ್ದಾರೆ ಎಂದು ಡಾ.ರಮೇಶ್‌ ಹೇಳಿದರು. ವಿವಿ ಕುಲಸಚಿವ ಡಾ.ಸಿ.ಎಂ.ನೂರ್‌ ಮನ್ಸೂರ್‌, ವಿವಿ ಅನ್ವಯಿಕ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಜಿ.ಎಸ್‌.ವೆಂಕಟೇಶ್‌ ಸುದ್ದಿಗೋಷ್ಠಿಯಲ್ಲಿದ್ದರು.

ಸಹಯೋಗ ಸಂಶೋಧನೆ: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ವಿಶೇಷ ಆದ್ಯತೆ ನೀಡಿದ್ದು, ಸಂಯೋಜಿತ ಕಾಲೇಜುಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಂಶೋಧನೆ ನಡೆಸಲು 2018-19ನೇ ಸಾಲಿನಲ್ಲಿ 20 ಕೋಟಿ ರೂ. ಮೀಸಲಿರಿಸಿದೆ.

ಐಐಎಸ್‌ಸಿ, ರಾಷ್ಟ್ರೀಯ ಜೈವಿಕ ಅಧ್ಯಯನ ಕೇಂದ್ರ, ಜವಹರ ಲಾಲ್‌ ನೆಹರು ಅನ್ವಯಿಕ ವಿಜ್ಞಾನ ಸಂಶೋಧನಾ ಕೇಂದ್ರ, ಮನವ ತಳಿ ಶಾಸ್ತ್ರದ ಅಧ್ಯಯನ ಕೇಂದ್ರದ ವಿಜ್ಞಾನಿಗಳ ಮತ್ತು ವೈದ್ಯರ ಸಹಯೋಗದಲ್ಲಿ ಸಂಶೋಧನೆ ಕೈಗೊಳ್ಳಲಾಗುತ್ತದೆ. ಈಗಾಗಲೇ 31 ವಿಧದ ಸಂಶೋಧನಾ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಡಾ.ರಮೇಶ್‌ ಹೇಳಿದರು.

ನನ್ನ ದೇಶಕ್ಕಾಗಿ ನನ್ನ ಮರ: ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಕುರಿತು ಅರಿವು ಮೂಡಿಸಲು “ನನ್ನ ದೇಶಕ್ಕಾಗಿ ನನ್ನ ಮರ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದಿನ ಸಾಲಿನಿಂದ ವಿವಿಯ ಅಧೀನ ಕಾಲೇಜುಗಳಿಗೆ ಸೇರುವ ಪ್ರತಿಯೊಬ್ಬ ವಿದ್ಯಾರ್ಥಿ,

ತನ್ನ ಕಾಲೇಜು ಕ್ಯಾಂಪಸ್‌ ವ್ಯಾಪ್ತಿಯಲ್ಲಿ ಅಥವಾ ಹೊರಗೆ ಕನಿಷ್ಠ ಒಂದು ಸಸಿ ನಡೆಬೇಕು. ಜತೆಗೆ ಅದನ್ನು ಪೋಷಿಸಿ, ಬೆಳೆಸಬೇಕು. ಪದವಿ ಮುಗಿದ ನಂತರ ಅದರ ಫೋಟೋ ತೆಗೆದು ವಿವಿಗೆ ಕಳುಹಿಸಬೇಕು. ಹೀಗೆ ಗಿಡ ಬೆಳೆಸುವ ವಿದ್ಯಾರ್ಥಿಗಳಿಗೆ ವಿವಿಯಿಂದ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಡಾ. ರಮೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next