ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದೇಶದ 6 ಕಡೆಗಳಲ್ಲಿ ಸಂಶೋಧನಾ ಉತ್ತೇಜನಾ ಕೇಂದ್ರ ಹಾಗೂ ಇನ್ನು 6 ಭಾಗದಲ್ಲಿ ಪ್ರಾದೇಶಿಕ ಶೈಕ್ಷಣಿಕ ಬಾಹ್ಯಾಕಾಶ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ.
ಇಂಡಿಯಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಸೆಮಿಕಂಡೆಕ್ಟರ್ ಅಸೋಸಿಯೇಷನ್(ಐಇಎಸ್‌ಎ) ಸಹಯೋಗದಲ್ಲಿ ತ್ರಿಪುರ ರಾಜ್ಯದ ಅಗರ್ತಲದಲ್ಲಿರುವ ಭಾರತೀಯ ತಾಂತ್ರಿಕ ಸಂಸ್ಥೆ(ಎನ್‌ಐಟಿ)ಯಲ್ಲಿ ಆರಂಭಿಸಿರುವ ಮೊದಲ ಸಂಶೋಧನಾ ಉತ್ತೇಜನಾ ಕೇಂದ್ರಕ್ಕೆ ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಸ್ರೋ ಅಧ್ಯಕ್ಷ ಕೆ.ಶಿವನ್ ಮತ್ತು ತ್ರಿಪುರದ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಚಾಲನೆ ನೀಡಿದರು.
2 ಕೋಟಿ ರೂ. ಅನುದಾನದಲ್ಲಿ ಸಂಶೋಧನಾ ಉತ್ತೇಜನ ಕೇಂದ್ರ ಮತ್ತು ಪ್ರಾದೇಶಿಕ ಶೈಕ್ಷಣಿಕ ಬಾಹ್ಯಾಕಾಶ ಕೇಂದ್ರ ತೆರೆಯಲಾಗುತ್ತದೆ. ಜಲಂದರ್, ಭುವನೇಶ್ವರ, ನಾಗಪೂರ್, ಇಂಧೋರ್, ತಿರುಚನಪಳ್ಳಿಯಲ್ಲಿ ಇಸ್ರೊ ಸಂಶೋಧನಾ ಉತ್ತೇಜನ ಕೇಂದ್ರ ತಲೆ ಎತ್ತಿದರೆ, ಜೈಪುರ, ಪಾಟ್ನಾ, ಕನ್ಯಾಕುಮಾರಿ, ವಾರಣಾಸಿ, ಕುರುಕ್ಷೇತ್ರ, ಗೋಹಾಟಿ ವಿಶ್ವವಿದ್ಯಾಲಯದಲ್ಲಿ ಪ್ರಾದೇಶಿಕ ಶೈಕ್ಷಣಿಕ ಬಾಹ್ಯಾಕಾಶ ಕೇಂದ್ರ ತೆರೆಯಾಗುತ್ತದೆ.
ಕಾರ್ಯಕ್ರಮದ ನಂತರ ಈ ಕುರಿತು ಮಾಹಿತಿ ನೀಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್, ದೇಶದ ವಿವಿಧ ಭಾಗದಲ್ಲೂ ಸಂಶೋಧನೆಗೆ ಆದ್ಯತೆ ನೀಡುವ ಉದ್ದೇಶದಿಂದ ತ್ರಿಪುರದಲ್ಲಿ ಮೊದಲ ಕೇಂದ್ರ ಆರಂಭಿಸಿದ್ದೇವೆ. ಮುಂದಿನ 6 ತಿಂಗಳಲ್ಲಿ ದೇಶದೆಲ್ಲೆಡೆಗೂ ವಿಸ್ತರಿಸುತ್ತೇವೆ ಎಂದರು.
ಸಂಶೋಧನೆಗೆ ಸಂಬಂಧಿಸಿದಂತೆ ಪ್ರಾಜೆಕ್ಟ್ ಪರಿಕಲ್ಪನೆಯನ್ನು ಇಸ್ರೋ ನೀಡಲಿದೆ. ಅಲ್ಲಿ ಉತ್ಪಾದಿಸಿದ ವಸ್ತುಗಳನ್ನು ನಾವೇ ಖರೀದಿಸುತ್ತೇವೆ. ಜಮ್ಮು ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಮೊದಲ ಪ್ರಾದೇಶಿಕ ಶೈಕ್ಷಣಿಕ ಬಾಹ್ಯಾಕಾಶ ಕೇಂದ್ರ ಹಾಗೂ ಪ್ರೊ.ಸತೀಶ್ ಧವನ್ ಪೀಠ ಆರಂಭಿಸಲಿದ್ದೇವೆ. ಅ.11ರಂದು ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.
ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಮಾತನಾಡಿದರು. ಐಇಎಸ್‌ಎ ಅಧ್ಯಕ್ಷ ಅನಿಲ್ ಕುಮಾರ್ ಮುನಿಸ್ವಾಮಿ, ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ಎನ್‌ಐಟಿ ನಿರ್ದೇಶಕ ಡಾ.ಎಚ್.ಕೆ.ಶರ್ಮಾ ಮತ್ತಿತರರು ಇದ್ದರು.