Advertisement

ಸಮಾಜ, ಆತ್ಮತೃಪ್ತಿಗೆ ಸಂಶೋಧನೆ ಮಾಡಿ

09:16 PM Feb 29, 2020 | Lakshmi GovindaRaj |

ಮೈಸೂರು: ಇಂದು ಅಂತರ್‌ಶಿಸ್ತೀಯ ಸಂಶೋಧನೆಯ ಅಗತ್ಯತೆ ಇದ್ದು, ಸಮಾಜಕ್ಕಾಗಿ ಮತ್ತು ಆತೃಪ್ತಿಗಾಗಿ ಸಂಶೋಧನೆ ಕೈಗೊಳ್ಳಿ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಸಲಹೆ ನೀಡಿದರು. ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಯುಜಿಸಿ ಪ್ರಾಯೋಜಿತ ಸಿಪಿಇ ಯೋಜನೆಯಡಿ ಏರ್ಪಡಿಸಿದ್ದ ನಾಲ್ಕು ದಿನಗಳ ಸಮಕಾಲೀನ ವಿಷಯಾಧಾರಿತ ಉಪನ್ಯಾಸ ಮಾಲೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಹೊಸ ವಿಚಾರ: ಯಾವುದೇ ವಿಜ್ಞಾನ ಶಾಖೆ ತನ್ನಷ್ಟಕ್ಕೆ ಪರಿಪೂರ್ಣವಾಗುವುದಿಲ್ಲ. ಅದು ಇತರೆ ವಿಜ್ಞಾನಶಾಖೆಗಳ ಜೊತೆ ಸಂಪರ್ಕ ಹೊಂದಿದಾಗ ಅದರ ಪರಿಣಾಮ ಉತ್ತಮವಾಗಿರುತ್ತದೆ. ಅಧ್ಯಾಪಕರಾದವರು ಕೇವಲ ಬೋಧನೆಗಾಗಿ, ಸಂಶೋಧನೆಗಾಗಿ ಓದುವುದಲ್ಲ. ನಿಯಮಿತವಾಗಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಆಗ ಹೊಸ ಹೊಸ ವಿಚಾರಗಳ, ಇತರೆ ಜ್ಞಾನ ಶಾಖೆಗಳ ಪರಿಚಯವಾಗುತ್ತದೆ. ಆಗ ನಿಮ್ಮ ಬೋಧನೆಯ ಗುರಿ ಸ್ಪಷ್ಟವಾಗುತ್ತದೆ. ಯಾರಿಗೆ ಹೇಗೆ ಬೋಧಿಸಬೇಕೆಂಬುದು ತಿಳಿಯುತ್ತದೆ ಎಂದರು.

ಜ್ಞಾನಕ್ಕೆ ಗಡಿಯಿಲ್ಲ: ಸಮಾರೋಪ ಭಾಷಣ ಮಾಡಿದ ಜೆಎಸ್‌ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಡಾ.ಎಲ್‌.ಜವಹಾರ್‌ ನೇಸನ್‌, ಜ್ಞಾನಕ್ಕೆ ಗಡಿ ಎಂಬುದಿಲ್ಲ. ಜ್ಞಾನವನ್ನು ಯಾವ ಕಡೆಯಿಂದಲಾದರೂ, ಎಷ್ಟು ಬೇಕಾದರೂ ಪಡೆಯಬಹುದು. ಹಾಗೆ ಪಡೆಯಬೇಕಾದರೆ ಯಾವುದೇ ಒಂದು ವಿಷಯಕ್ಕೆ ಸೀಮಿತಗೊಳ್ಳದೆ ಹಲವಾರು ವಿಷಯಗಳ ಜ್ಞಾನವನ್ನು ಪಡೆಯಲು ಶ್ರಮಿಸಬೇಕು. ವೈದ್ಯಕೀಯ ಅಧ್ಯಯನ ಮಾಡುವವರಿಗೆ ದೇಶದ ಆರ್ಥಿಕ ಸ್ಥಿತಿಯ ಪರಿಚಯವೂ ಇರಬೇಕು. ಜ್ಞಾನ ಎಂದರೆ ಕೇವಲ ಓದಲ್ಲ. ಅದು ಅನುಭವ.

ಸಮಾಜದೊಂದಿಗೆ ಬೆರೆಯಬೇಕು, ಅಲ್ಲಿನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು., ಅದರ ಪರಿಹಾರಕ್ಕೆ ನಮ್ಮ ಅಧ್ಯಯನ ಉಪಯೋಗವಾಗಬೇಕು. ಅದು ಮಾತ್ರವೇ ನಿಜವಾದ ಅಧ್ಯಯನ ಮತ್ತು ಸಂಶೋಧನೆ ಆಗುತ್ತದೆ. ಆದರೆ ಇಂದಿನ ಶಿಕ್ಷಣದ ಗುರಿ ಸಮರ್ಪಕವಾಗಿಲ್ಲದಿರುವುದರಿಂದ ಅದು ಮಾನವೀಯತೆ ಬೆಳೆಸಲು ಅಸಮರ್ಥವಾಗಿದೆ. ಈ ದಿಸೆಯಲ್ಲಿ ಸಮಾಜೋಪಯೋಗಿ ಅಧ್ಯಯನ ಮತ್ತು ಸಂಶೋಧನೆ ನಡೆಯಲಿ ಎಂದು ಸಲಹೆ ನೀಡಿದರು.

ಸಾಮಾಜಿಕ ಶಿಕ್ಷಣ: ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ಡಾ.ಎಸ್‌.ಶ್ರೀಕಂಠಸ್ವಾಮಿ ಮಾತನಾಡಿ, ವಿಜ್ಞಾನಕ್ಕೆ ಇಂದು ಹಲವು ತೆರನಾದ ಸಾಮರ್ಥ್ಯವಿದೆ. ಮಾನವನ ಬದುಕಿಗೆ ತಕ್ಕಂತೆ ವಿಜ್ಞಾನವೂ ಬದಲಾವಣೆ ಹೊಂದುತ್ತಾ ಹೋಗುತ್ತಿದೆ. ಜ್ಞಾನದ ಮೂಲಕ ಬದುಕು ಕೂಡ ಹಸನಾಗಿದೆ. ಇಂದು ಕೇವಲ ತರಗತಿ ಶಿಕ್ಷಣ ಸಾಕಾಗುವುದಿಲ್ಲ. ಸಾಮಾಜಿಕ ಶಿಕ್ಷಣ ಅತ್ಯಗತ್ಯವಾಗಿದೆ. ಸಮಾಜದೊಂದಿಗೆ ಮುಖಾಮುಖೀಯಾಗಲು ಇಂತಹ ಉಪನ್ಯಾಸಗಳ ಅಗತ್ಯತೆ ಇದೆ ಎಂದು ತಿಳಿಸಿದರು.

Advertisement

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲ ಪೊ›. ಎಂ. ಮಹದೇವಪ್ಪ , ಸಂಚಾಲಕ ಡಾ.ಬಿ.ವೈ. ಸತೀಶ್‌ಕುಮಾರ್‌ ಉಪಸ್ಥಿತರಿದ್ದರು. ನಾಲ್ಕು ದಿನಗಳವರೆಗೆ ನಡೆದ‌ ಈ ಉಪನ್ಯಾಸ ಮಾಲೆಯಲ್ಲಿ ಭೌತಿಕ ವಿಜ್ಞಾನ, ಜೈವಿಕ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಮಾನವಿಕ ಶಾಸ್ತ್ರ ಹಾಗೂ ವಾಣಿಜ್ಯ ಮತ್ತು ನಿರ್ವಹಣೆ ಕುರಿತು ದೇಶದ ವಿವಿಧ ವಿಶ್ವವಿದ್ಯಾಲಯಗಳ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. 500ಕ್ಕೂ ಅಧಿಕ ಮಂದಿ ಉಪನ್ಯಾಸಕರು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next