ದಾವಣಗೆರೆ: ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿಯೇ ವಿಜ್ಞಾನದ ವಿಷಯ, ಸಂಶೋಧನೆಯತ್ತ ಹೆಚ್ಚು ಗಮನ ನೀಡಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಸಲಹೆ ನೀಡಿದ್ದಾರೆ. ಮಂಗಳವಾರ ಬಾಪೂಜಿ ತಾಂತ್ರಿಕ ಮಹಾ ವಿದ್ಯಾಲಯದ ವಿಜ್ಞಾನ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕೈಗೊಳ್ಳುವ ಸಂಶೋಧನೆಯ ಪ್ರಯೋಜನ ನೇರವಾಗಿ ನಾಗರಿಕ ಸಮಾಜಕ್ಕೆ ಎಟುಕುವಂತಾಗಿರಬೇಕು. ಅಸಂಖ್ಯಾತರಿಗೆ ಬಹುಪಯೋಗಿ ಆಗಿರಬೇಕು ಎಂದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಫೆ. 28 ಕ್ಕೆ ಮಾತ್ರವೇ ಸೀಮಿತವಾಗದೆ ಪ್ರತಿ ನಿತ್ಯದ ಆಚರಣೆಯಂತಾಗಬೇಕು.
ವಿದ್ಯಾರ್ಥಿಗಳು ಕಾಲೇಜುಗೆ ಬರುವುದು, ಪಾಠ-ಪ್ರವಚನ ಕೇಳುವುದು, ಪರೀಕ್ಷೆ ಬರೆಯುವುದು, ಯಾವುದಾದರೂ ಒಂದು ಉದ್ಯೋಗ ಪಡೆಯುವಂತಹ ಯಾಂತೀಕೃತ ಜೀವನಮಾಡಬಾರದು. ಸದಾ ಕ್ರಿಯಾಶೀಲತೆಯಿಂದ ಸಮಾಜ ಉಪಯೋಗಿ ಕೆಲಸದತ್ತ ಗಮನ ನೀಡಬೇಕು ಎಂದು ತಿಳಿಸಿದರು.
ಹಳೆಯ ಸಂಪ್ರದಾಯಕ್ಕೆ ಜೋತು ಬೀಳದೆ ಯಾವುದೇ ವಿಷಯದ ಬಗ್ಗೆಯೇ ಆಗಲಿ ಪ್ರಶ್ನಿಸುವ ಹಾಗೂ ಸಮರ್ಪಕ ಉತ್ತರ ಪಡೆಯವ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಉತ್ತಮ ವಿದ್ಯಾರ್ಥಿಯಾಗಿ ಹೊರ ಹೊಮ್ಮಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ| ಎಸ್. ಸುಬ್ರಹ್ಮಣ್ಯಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಸಂಪೂರ್ಣ ವ್ಯಕ್ತಿತ್ವ ವಿಕಸನದತ್ತ ಗಮನ ನೀಡಬೇಕು.
ಸಮಾಜಕ್ಕೆ ಅತ್ಯುಪಯುಕ್ತವಾಗುವ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿನಿಯರು ಸಹ ಸಂಶೋಧನೆಯಲ್ಲಿ ಹೆಚ್ಚು ಭಾಗವಹಿಸಬೇಕು ಎಂದರು. ವೇದಿಕೆ ಸಂಚಾಲಕ ಡಾ| ಬಿ,.ಇ. ಬಸವರಾಜ್, ಸಲಹೆಗಾರ ಎಸ್.ಎ. ಗಂಗರಾಜ್, ವಿ.ಕೆ. ಗೀತಾ ಇದ್ದರು. ತೇಜಸ್ವಿನಿ ನಿರೂಪಿಸಿದರು. ವರುಣ್ ವಂದಿಸಿದರು.