ಉಡುಪಿ: ಪೇಜಾವರ ಮಠದ 60ರ ಹರೆಯದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸುಮಾರು 40 ಅಡಿ ಆಳದ ಬಾವಿಗಿಳಿದು ಬೆಕ್ಕೊಂದನ್ನು ರಕ್ಷಿಸಿದ ಘಟನೆ ರವಿವಾರ ನಡೆದಿದೆ.
ಸ್ವಾಮೀಜಿಯವರು ಚೆನ್ನೈ ಮೊಕ್ಕಾಂನಿಂದ ಮುಚ್ಲುಕೋಡು ದೇವಸ್ಥಾನಕ್ಕೆ ಮಧ್ಯಾಹ್ನ ಆಗಮಿಸಿದ್ದರು. ಏತನ್ಮಧ್ಯೆ ದೇವಸ್ಥಾನದ ಬಾವಿಯೊಳಗೆ ಬೆಕ್ಕೊಂದು ಬಿದ್ದಿರುವುದಾಗಿ ದೇವಸ್ಥಾನದ ಸಿಬಂದಿ ಹೇಳಿದರು.
ಸ್ವಾಮೀಜಿ ಕೂಡಲೇ ಬಾವಿಯತ್ತ ತೆರಳಿ ಬಕೆಟ್ ಇಳಿಸಿ ಬೆಕ್ಕನ್ನು (ಒಂದು ಅಂತಸ್ತಿನಲ್ಲಿತ್ತು) ಬಕೆಟ್ ಒಳಗೆ ಬರುವಂತೆ ಪ್ರಯತ್ನಿಸಿದರು. ಅದು ಫಲಕಾರಿಯಾಗದಿದ್ದಾಗ, ಉಟ್ಟ ಖಾವಿಶಾಟಿಯನ್ನು ಸೊಂಟಕ್ಕೆ ಬಿಗಿಯಾಗಿ ಸುತ್ತಿ ಸುಮಾರು ಐದಡಿ ವ್ಯಾಸದ ಬಾವಿಗೆ ಹಗ್ಗದ ಸಹಾಯದಿಂದ ಇಳಿದರು. ತುಸು ದೂರ ಹಗ್ಗದ ಸಹಾಯದಿಂದ ಇಳಿದರೆ ಮತ್ತೆ ಬಾವಿಯೊಳಗಿನ ಅಂಚಿನಲ್ಲಿ ಕಾಲಿಟ್ಟು ಆಚೀಚೆ ಕೈಗಳ ಆಧಾರದಲ್ಲಿ ಇಳಿದರು. ಬೆಕ್ಕನ್ನು ಬಕೆಟ್‌ಗೆ ಹಾಕಿ ಮೇಲಕ್ಕೆತ್ತುವಂತೆ ಸೂಚಿಸಿದರು. ಮೇಲಿಂದ ಬಕೆಟ್ ಎತ್ತಿದರೂ ತುಸು ಮೇಲೆ ಬರುವಾಗ ಬೆಕ್ಕು ಹೆದರಿ ಹೊರಕ್ಕೆ ಹಾರಿ ಇನ್ನೊಂದು ಅಂತಸ್ತಿನಲ್ಲಿ ಕುಳಿತುಕೊಂಡಿತು. ಹೇಗೆ ಇಳಿದರೋ ಅದೇ ರೀತಿ ಕೈ, ಕಾಲುಗಳ ಆಧಾರದಲ್ಲಿ ಮೇಲೆ ಹತ್ತಿದ ಸ್ವಾಮೀಜಿ ತುಂಡು ವಸ್ತ್ರವನ್ನು ಮೇಲಿಂದ ಹಾಕಲು ಹೇಳಿ ಅದನ್ನು ಕೈಗೆ ಸುತ್ತಿಕೊಂಡು ಬೆಕ್ಕಿನ ಕುತ್ತಿಗೆ ಹಿಡಿದು ಮತ್ತೆ ಬಕೆಟ್‌ಗೆ ಹಾಕಲು ಯತ್ನಿಸಿದರು. ಅದು ಸರಿಯಾಗದೆ ಇದ್ದಾಗ ಒಂದೊಂದೆ ಅಂತಸ್ತನ್ನು ಏರಿ ಒಂದು ಕೈಯಲ್ಲಿ ಬೆಕ್ಕನ್ನು ಅಂತಸ್ತಿನಲ್ಲಿರಿಸಿಕೊಂಡು ಮೇಲೆ ಬಂದರು. ಹತ್ತಿರ ಬರುತ್ತಿದ್ದಂತೆ ಬೆಕ್ಕನ್ನು ಮೇಲಕ್ಕೆ ಎಸೆದರು. ಎದ್ದೆನೋ ಬಿದ್ದೆನೋ ಎಂಬಂತೆ ಬೆಕ್ಕು ಓಡಿಹೋಯಿತು.
ಸ್ವಾಮೀಜಿ ಮಾತ್ರ ಏನೂ ಆಗದಂತೆ ಉಡುಪಿ ಪೇಜಾವರ ಮಠಕ್ಕೆ ಪೂಜೆಗೆ ಹೊರಟರು. ಅವರು ಬೆಳಗ್ಗೆ ಚೆನ್ನೈ ಮಠದಲ್ಲಿ ಪೂಜೆ ಮುಗಿಸಿ ಆಹಾರವನ್ನೂ ತೆಗೆದುಕೊಳ್ಳದೆ ಉಡುಪಿಗೆ ಬಂದಿದ್ದರು. ಉಡುಪಿಯಲ್ಲಿ ಸಂಜೆ ಜ್ಯೋತಿಃಶಾಸ್ತ್ರಜ್ಞ ದಿ| ಬೈಲೂರು ಅನಂತಪದ್ಮನಾಭ ತಂತ್ರಿಗಳ ಜನ್ಮಶತಮಾನೋತ್ಸವದಲ್ಲಿ ಪಾಲ್ಗೊಂಡು ರಾತ್ರಿ ಮತ್ತೆ ಚೆನ್ನೈಗೆ ತೆರಳಿದರು.