Advertisement

ಸರ್ಕಾರಿ ಶಾಲೆಗೆ ಸೌಲಭ್ಯ ಅಗತ್ಯ: ಜವರಪ್ಪ

09:00 PM Jun 07, 2019 | Lakshmi GovindaRaj |

ಮೈಸೂರು: ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕಿದ್ದು ಶಿಕ್ಷಕ ವೃಂದವೂ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸಲು ಹಾಗೂ ದಾನಿಗಳ ಸಹಾಯ ಪಡೆದು ಶಾಲಾಭಿವೃದ್ಧಿಗೆ ಶ್ರಮಿಸಬೇಕು ಎಂದು ಎಪಿಎಂಸಿ ಉಪಾಧ್ಯಕ್ಷ ಜವರಪ್ಪ ಹೇಳಿದರು.

Advertisement

ಮೈಸೂರು ತಾಲೂಕಿನ ವರುಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2019-20ನೇ ಶೈಕ್ಷಣಿಕ ವರ್ಷದ ಹೋಬಳಿ ಮಟ್ಟದ ಶಿಕ್ಷಕರ ಪ್ರಥಮ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಅಗತ್ಯವಾದ ಕಟ್ಟಡ, ಶಿಕ್ಷಕರು, ಪಾಠೊಪಕರಣ, ಪೀಠೊಪಕರಣಗಳನ್ನು ಸರ್ಕಾರ ಸಕಾಲಕ್ಕೆ ಒದಗಿಸಬೇಕೆಂದರು.

ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಿಗಿಂತ ಕಡಿಮೆಯೇನಿಲ್ಲ. ಮೊದಲಿಗಿಂತ ಸಾಕಷ್ಟು ಅಭಿವೃದ್ಧಿ ಹೊಂದಿವೆ. ಆದರೂ, ಮತ್ತಷ್ಟು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಜನಾಕರ್ಷಕ ಕೇಂದ್ರವಾಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಸಕ್ರಿಯವಾಗಿ ಕಲಿಕೆಗೆ ತೊಡಗಬೇಕು ಎಂದ ಅವರು, ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದ ಆರಂಭಿಸಲಾಗಿರುವ ಆಂಗ್ಲ ಮಾಧ್ಯಮ ವಿಭಾಗಕ್ಕೆ ಅಗತ್ಯವುಳ್ಳ ಸಮರ್ಥ ಶಿಕ್ಷಕರನ್ನು ಕೂಡಲೇ ನೇಮಿಸಬೇಕೆಂದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಟಿ.ಸತೀಶ್‌ ಜವರೇಗೌಡ, ಆಧುನಿಕ ಬಹು ಮಾಧ್ಯಮದ ಈ ಯುಗದಲ್ಲಿ ಮಕ್ಕಳ ಗ್ರಹಿಕೆ ಮತ್ತು ಕಲಿಯುವ ಆಸಕ್ತಿ ಅಪಾರ. ಇಂತಹ ಮಕ್ಕಳಿಗೆ ಕಲಿಸಬೇಕಾದರೆ ಶಿಕ್ಷಕರಲ್ಲಿ ಅಗಾಧ ಜ್ಞಾನ ಮತ್ತು ಅನುಭವದ ಅಗತ್ಯವಿದೆ. ಇದಕ್ಕಾಗಿ ನಿರಂತರ ಅಧ್ಯಯನ ಮತ್ತು ಕಲಿಕೆಯಲ್ಲಿ ಶಿಕ್ಷಕರು ತೊಡಗಬೇಕು ಎಂದರು.

Advertisement

ಸಮಾಲೋಚನಾ ಸಭೆಗಳು, ತರಬೇತಿಗಳು ಶಿಕ್ಷಕರ ಕಲಿಸುವ ಸಾಮರ್ಥ್ಯ ವೃದ್ಧಿಸುತ್ತವೆ. ಇದರಿಂದ ಕಲಿಕೆ ಸಂಕೀರ್ಣ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹಾಗೂ ಸಮಲೋಚನಾ ಸಭೆಯ ನೋಡಲ್‌ ಅಧಿಕಾರಿ ಚಲುವೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಿಆರ್‌ಪಿಗಳಾದ ಪಿ.ಲೋಕೇಶ್‌, ಪೂರಿಗಾಲಿ ಕೃಷ್ಣಾಚಾರ್‌, ಮರಿಸ್ವಾಮಿ, ಮುಖ್ಯ ಶಿಕ್ಷಕ ರಾಮಕೃಷ್ಣಯ್ಯ ಉಪಸ್ಥಿತರಿದ್ದರು. ಹೋಬಳಿಯ ವಿವಿಧ ಶಾಲೆಗಳಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳನ್ನು ಕಲಿಸುವ 50ಕ್ಕೂ ಅಧಿಕ ಮಂದಿ ಶಿಕ್ಷಕ -ಶಿಕ್ಷಕಿಯರು ಸಮಾಲೋಚನಾ ಸಭೆಯ ಸದುಪಯೋಗ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next