Advertisement

ವೇಗದ ಬೆಳವಣಿಗೆಯ ಕ್ಷೇತ್ರದಲ್ಲಿ ಬಾಕಿಯಿವೆ ಬೇಡಿಕೆ 

12:41 PM Feb 26, 2018 | Team Udayavani |

ಮೂಡಬಿದಿರೆ: ಅತ್ಯಂತ ವೇಗದ ಬೆಳವಣಿಗೆ ಕಾಣುತ್ತಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಮೂಡಬಿದಿರೆ ತನ್ನ ವೈಶಿಷ್ಟ್ಯ ಗಳಿಂದ ಗಮನಸೆಳೆಯುತ್ತಿದೆ; ಕೃಷಿ, ಉದ್ಯಮ, ಶಿಕ್ಷಣ, ಧಾರ್ಮಿಕ, ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ರಂಗಗಳಲ್ಲಿ ಎದ್ದು ಕಾಣಿಸುತ್ತಿದೆ.

Advertisement

ಹಾಲಿ ಶಾಸಕ ಕೆ. ಅಭಯಚಂದ್ರ ಅವರು ಈ ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ. ವಿಶೇಷವಾಗಿ ರಸ್ತೆಗಳ ಅಭಿವೃದ್ಧಿಯಲ್ಲಿ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ವೆಂಟೆಡ್‌ ಡ್ಯಾಂಗಳ ಬಗ್ಗೆಯೂ ಕಾಳಜಿಯಿಂದ ಕೆಲಸ ಮಾಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ ಆಗಬೇಕಾದ ಕಾರ್ಯಗಳ ಯಾದಿಯೂ ದೊಡ್ಡದೇ ಆಗಿದೆ.

ಗಝೆಟ್‌ ಪ್ರಕಟನೆಗೆ ಕಾದಿದೆ ‘ತಾಲೂಕು’
ಮೂಡಬಿದಿರೆ ತಾಲೂಕು ಘೋಷಣೆ ಆಗಿದೆ; ಗಝೆಟ್‌ ಅಧಿಸೂಚನೆ ಪ್ರತಿ ಇನ್ನಷ್ಟೇ ದೊರಕಬೇಕಾಗಿದೆ. ದಶಕಗಳ ಕನಸಾದ 65 ಕೋ. ರೂ. ವೆಚ್ಚದ ಒಳಚರಂಡಿ ಯೋಜನೆ ಮಂಜೂರಾಗಿದೆ, ಖಂಡಿತ ಸಾಕಾರಗೊಳ್ಳಲಿದೆ ಎಂಬ ಸಿದ್ದರಾಮಯ್ಯ ಘೋಷಣೆಗೆ ಜನ ಪುಳಕಿತರಾಗಿದ್ದಾರೆ.

ಬೈಪಾಸ್‌: ದಶಕಗಳ ಹಿಂದಿನಿಂದಲೂ ಕೇಳಿಬರುತ್ತಿರುವ ಬೈಪಾಸ್‌ ರಸ್ತೆ ಯಾವ ಪ್ರದೇಶದಲ್ಲಿ ಹಾದು ಹೋಗುತ್ತದೆ ಎಂಬುದರ ಸ್ಪಷ್ಟ ಚಿತ್ರಣ ಲಭಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಸಮನ್ವಯದ ಕೊರತೆ ಕಾಡುತ್ತಿದೆ.

ಸರಕಾರಿ ಕಾಲೇಜು: ಮೂಡಬಿದಿರೆಯಲ್ಲಿ ಸರಕಾರಿ ಕಾಲೇಜು ಇಲ್ಲ. ಮಾಜಿ ಮುಖ್ಯಮಂತ್ರಿ ಹುಟ್ಟಿದ ಮಾರ್ಪಾಡಿ ಗ್ರಾಮದಲ್ಲಿ ಇನ್ನೂ ಸರಕಾರಿ ಹೈಸ್ಕೂಲು ತೆರೆದುಕೊಂಡಿಲ್ಲ. ಮೂಡಬಿದಿರೆಯಲ್ಲಿ ಅದೆಷ್ಟೋ ಖಾಸಗಿ ಕಾಲೇಜುಗಳು, ಅನುದಾನಿತ ಪ.ಪೂ. ಕಾಲೇಜುಗಳು ಇವೆ. ಸರಕಾರಿ ಪ.ಪೂ. ಕಾಲೇಜು ತೆರೆಯಲೇಬೇಕು ಎಂಬುದು ಬಡಜನರ ಬೇಡಿಕೆಯಾಗಿದೆ. ಅದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿಲ್ಲ.

Advertisement

ಶಿರ್ತಾಡಿ ವಲಯದ ಅಳಿಯೂರಿನಲ್ಲಿ ಆಂಗ್ಲ ಮಾಧ್ಯಮ ಸಹಿತ ಸರಕಾರಿ ಪ್ರೌಢಶಾಲೆ ಇದೆ. ಹತ್ತಾರು ಗ್ರಾಮಗಳ ನಡುವಿನ ಕೇಂದ್ರ ಪ್ರದೇಶ ಇದು. ಅಲ್ಲಿಗೆ ಸರಕಾರಿ ಪ.ಪೂ. ಕಾಲೇಜು ಬೇಕು ಎಂಬ ಬೇಡಿಕೆ ದಶಕದಿಂದ ಉಳಿದುಕೊಂಡಿದೆ.

ಸರಕಾರಿ ಬಸ್‌ ನಿಲ್ದಾಣಕ್ಕೆ ಜಾಗವೇ ಸಿಕ್ಕಿಲ್ಲ: ಮಂಗಳೂರು -ಮೂಡಬಿದಿರೆ -ಕಾರ್ಕಳ ರಸ್ತೆಯಲ್ಲಿ ಸರಕಾರಿ ಬಸ್‌ ಓಡಲು
ಯಾವುದೋ ಅಡ್ಡಿ ಕಾಡುತ್ತಿದೆ. ಮೂಡಬಿದಿರೆಯಲ್ಲಿ ಸರಕಾರಿ ಬಸ್‌ ನಿಲ್ದಾಣಕ್ಕೆ ಇನ್ನೂ ಜಾಗವೇ ಸಿಕ್ಕಿಲ್ಲ.

ಪೊಲೀಸ್‌ ಔಟ್‌ಪೋಸ್ಟ್‌ : ಬಸದಿಗಳ ತಾಣದಲ್ಲಿ ಎಷ್ಟೋ ಕಳ್ಳತನ ಪ್ರಕರಣಗಳು ಸಂಭವಿಸಿದರೂ ಇನ್ನೂ ಅಲ್ಲಿ ಪೊಲೀಸ್‌ ಔಟ್‌ ಪೋಸ್ಟ್‌ ಸ್ಥಾಪನೆಯಾಗಿಲ್ಲ. ಸುಲಭ ಶೌಚಾಲಯ ತೆರೆದಿಲ್ಲ. ಮೂಡಬಿದಿರೆಗೆ ವಿದ್ಯುತ್‌ ಸಬ್‌ಸ್ಟೇಶನ್‌ ಬಂದು 2 ದಶಕಗಳು ಸರಿದಿವೆ. ಮೂಡಬಿದಿರೆ ಮತ್ತು ಮೂಲ್ಕಿಗೆ ಇನ್ನೊಂದು ಸಬ್‌ ಸ್ಟೇಶನ್‌ ಪ್ರಸ್ತಾವ ಕೂಡಲೇ ಕಾರ್ಯಗತಗೊಳ್ಳಬೇಕಾಗಿದೆ.

ಇನ್ನಷ್ಟು ಇದೆ ಬೇಡಿಕೆ: ವಿದ್ಯಾಗಿರಿಯಿಂದ ಪೇಟೆಯನ್ನು ಹಾದು ಅಲಂಗಾರು ವರೆಗಿನ ರಸ್ತೆ ಕನಿಷ್ಠ ದ್ವಿಪಥವಾಗಬೇಕಾಗಿದೆ. ಕಿನ್ನಿಗೋಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನೂ ವೇಗವನ್ನು ಪಡೆದುಕೊಳ್ಳಬೇಕಷ್ಟೆ. ಮಳೆಗಾಲದಲ್ಲಿ ಕೆಟ್ಟು ಹೋದ ಪಂಪುಗಳ ರಿಪೇರಿ ಈಗಷ್ಟೇ ನಡೆಯುತ್ತಿದೆ. ರಾಜ್ಯ ಹೆದ್ದಾರಿ ವಿಸ್ತರಣೆಯಾಗುತ್ತಿರುವ ಅನೇಕ ಕಡೆ ಗ್ರಾ.ಪಂ.ಗಳ ನೀರಿನ ಪೈಪುಗಳು ಒಡೆದುಹೋಗಿರುವುದನ್ನು ದುರಸ್ತಿ ಮಾಡಬೇಕಾಗಿದೆ.

ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ 
ಸ್ವರಾಜ್ಯ ಮೈದಾನದ ಬಳಿ ರಿಂಗ್‌ ರೋಡ್‌, ಸಿಂಥೆಟಿಕ್‌ ಟ್ರ್ಯಾಕ್ , ಈಜುಕೊಳ, ಗಾಂಧಿ ಪಾರ್ಕ್‌ನಲ್ಲಿ ಸ್ಕೇಟಿಂಗ್‌ ಯಾರ್ಡ್‌, ಬೆಳುವಾಯಿ -ಅಳಿಯೂರು ರಸ್ತೆ, ಕಿನ್ನಿಗೋಳಿ- ಮಂಗಳಪೇಟೆ- ಬಜಪೆ ಮಾರ್ಗ, ಬಜಪೆ ಹಳೆ ವಿಮಾನನಿಲ್ದಾಣ, ಸಸಿಹಿತ್ಲು ರಸ್ತೆ ಸೇತುವೆ, ಮೀನುಗಾರಿಕೆ ಜೆಟ್ಟಿ, ತಡೆಗೋಡೆ, ಮಳವೂರು ವೆಂಟೆಡ್‌ ಡ್ಯಾಂ, ಕಿನ್ನಿಗೋಳಿಗೆ ಕುಡಿಯುವ ನೀರು ಯೋಜನೆಗಳು ಲಭಿಸಿವೆ.

ಮೂಡಬಿದಿರೆ-ಶಿರ್ತಾಡಿ, ಶಿರ್ತಾಡಿ -ಹೊಸ್ಮಾರು, ಮೂಡಬಿದಿರೆ ಇರುವೈಲು ಕಡೆಗೆ 2 ಸೇತುವೆ ಸಹಿತ ರಸ್ತೆ, ಹೊಸಂಗಡಿ-ಮೂಡಬಿದಿರೆ ಮೆಸ್ಕಾಂ, ಮೂಲ್ಕಿ ವಿಜಯಾ ಕಾಲೇಜು- ಪಂಜಿನಡ್ಕ-ಏಳಿಂಜೆ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮೂಡಬಿದಿರೆ ಕಲ್ಲಬೆಟ್ಟು ಮತ್ತು ಕಮ್ಮಾಜೆ ಮೊರಾರ್ಜಿ ದೇಸಾಯಿ ಶಾಲೆ ಅಭಿವೃದ್ಧಿ, ಹಳೆಯಂಗಡಿ ಪದವಿ ಕಾಲೇಜು ಅಭಿವೃದ್ಧಿ ಕಾಮಗಾರಿ ನಡೆದಿವೆ. ಅಗ್ನಿಶಾಮಕ ದಳದ ಕಟ್ಟಡ ನಿರ್ಮಾಣವಾಗಿದೆ. ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದಿಂದ ರಸ್ತೆಗಳಿಗಾಗಿ ಅನುದಾನ ಲಭಿಸಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 60 ಕೋ.ರೂ. ಕಾಮಗಾರಿ ನಡೆದಿದೆ.

ಧನಂಜಯ ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next